ಮಂಡ್ಯ: ಮೈಷುಗರ್ ಕಾರ್ಖಾನೆ ಆರ್ಥಿಕ ಪರಿಸ್ಥಿತಿ ದಿವಾಳಿ ಮಾಡಿ ಮನೆ ಸೇರಿದವರಿಗೆ ಹಿಡಿಶಾಪ ಹಾಕುತ್ತಿರುವ ರೈತರಿಗೆ ಹಣ ಪಾವತಿ ಮಾಡಲು ಹೆಣಗಾಡುತ್ತಿರುವ ಕಾರ್ಖಾನೆಯ ಈಗಿನ ಆಡಳಿತ ಮಂಡಳಿ ಕೊನೆಗೂ ಫೆಬ್ರವರಿ 4 ರಿಂದ ಲಭ್ಯವಾಗುವ ಹಣದಲ್ಲೇ ಅಂದಾಜು 35 ಕೋಟಿ ಬಾಕಿ ಪಾವತಿ ಮಾಡಲು ನಿರ್ಧಾರ ಕೈಗೊಂಡಿದೆ.
ಈ ಸಂಗತಿಯನ್ನು ವ್ಯವಸ್ಥಾಪಕ ನಿರ್ದೇಶಕ ನವೀನ್‌ಕುಮಾರ್ ಕನ್ನಡಪ್ರಭಕ್ಕೆ ತಿಳಿಸಿ, ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಆದರೂ ನಮ್ಮಲ್ಲಿರುವ ಸಕ್ಕರೆ ಮಾರಾಟ ಮಾಡಿ ಬಂದ ಹಣದಲ್ಲಿ ರೈತರಿಗೆ ಪಾವತಿ ಮಾಡಲು ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಕಳೆದ ವರ್ಷ ಕಾರ್ಖಾನೆಯಲ್ಲಿ 2 ಲಕ್ಷ 60 ಸಾವಿರ ಟನ್ ಕಬ್ಬು ಅರೆಯಲಾಗಿದೆ. 100 ಬಾಕಿ ಮೊತ್ತವೂ ಸೇರಿ ಪ್ರತಿ ಟನ್ ಕಬ್ಬಿಗೆ 2400 ಗಳಂತೆ ಒಟ್ಟು 66 ಕೋಟಿ 14 ಲಕ್ಷ ಪಾವತಿ ಮಾಡಬೇಕಾಗಿತ್ತು. ಇದುವರೆಗೂ 31 ಕೋಟಿ 19 ಲಕ್ಷ ಪಾವತಿ ಮಾಡಲಾಗಿದೆ. ಇನ್ನೂ ಅಂದಾಜು 35 ಕೋಟಿ ನೀಡಬೇಕಾಗಿದೆ ಎಂದು ಹೇಳಿದರು.
ಕಾರ್ಖಾನೆಯಲ್ಲಿ 50 ಕೋಟಿ ಸಕ್ಕರೆ ದಾಸ್ತಾನು ಇದೆ. ಮಾರಾಟಕ್ಕೆ ಕೇಂದ್ರ ಅನುಕೂಲ ಮಾಡಿಕೊಟ್ಟ ಹಾಗೆ ಎಲ್ಲವನ್ನೂ ಮಾರಿ ಹಣ ನೀಡುವ ನಿರ್ಧಾರ ಮಾಡಿದ್ದೇವೆ. ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಸದ್ಯಕ್ಕೆ ದೊರಕಿಲ್ಲ. ಹೀಗಾಗಿ ಸಕ್ಕರೆ ಮಾರಾಟ ಮಾಡಿ ಬಂದ ಹಣದಲ್ಲಿ ನಾವು ರೈತರಿಗೆ ಬಾಕಿ ಕೊಡಬೇಕಾಗಿದೆ ಎಂದು ವಿವರಿಸಿದರು.
ಕಾರ್ಖಾನೆ ಪುನಶ್ಚೇತನದ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ವ್ಯವಸ್ಥಾಪಕ ನಿರ್ದೇಶಕ ನವೀನ್‌ಕುಮಾರ್ ಮುಂದಿನ ಮಾರ್ಚ್ ಅಂತ್ಯದೊಳಗೆ ಸಹ ವಿದ್ಯುತ್ ಘಟಕ ಆರಂಭಿಸಲು ಸಿದ್ಧತೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ತಾಂತ್ರಿಕ ಸಲಹಾ ಮಂಡಳಿ ಈ ಕುರಿತು ವರದಿಯೊಂದನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿದೆ. ಈ ಬಗ್ಗೆ ಅಂತಿಮವಾಗಿ ಪ್ರಯೋಗಾತ್ಮಕ ಉತ್ಪಾದನೆ ಆರಂಭಿಸಿ ನಂತರ ಸಹ ವಿದ್ಯುತ್ ಘಟಕದಲ್ಲಿ ನಿರಂತರ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಲಾಗುವುದು ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ.