ಶ್ರೀಸಾಮಾನ್ಯನ ಬಾಗಿಲಿಗೆ ಸರ್ಕಾರಿ ಯೋಜನೆ ತಲುಪಿಸಿದ ತೃಪ್ತಿ

Updated on: 

ಮಳವಳ್ಳಿ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನ ಹಿಂದೆಯೇ ಪಕ್ಷೇತರ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಬುಧವಾರ ನಡೆದ ಮಳವಳ್ಳಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭವನ್ನು ಚುನಾವಣಾ ಪ್ರಚಾರದ ವೇದಿಕೆಯಾಗಿ ಬಳಸಿಕೊಂಡರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ನರೇಂದ್ರಸ್ವಾಮಿ, ನಾಲ್ಕು ಮುಕ್ಕಾಲು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ ತಮ್ಮ ಸಾಧನೆ ಎಂದು ಬಿಂಬಿಸಿಕೊಂಡು ಮತ್ತೊಮ್ಮೆ ಆಶೀರ್ವದಿಸುವಂತೆ ಜನರಲ್ಲಿ ಬೇಡಿದರು.
ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಸರ್ಕಾರದ ಯೋಜನೆಗಳನ್ನು ಸಾಮಾನ್ಯ ಜನರ ಬಾಗಿಲಿಗೆ ತಲುಪುವಂತೆ ಮಾಡಿದ್ದೇನೆ. ಇದು ನಡೆದಿಲ್ಲ ಎನ್ನುವುದಾದರೆ ನಿಮ್ಮ ಮನೆ ಬಾಗಿಲಿಗೆ ಬಂದಾಗ ನನಗೆ ಛೀಮಾರಿ ಹಾಕಿ ಕಳುಹಿಸಿ ಎಂದರು.
ರಾಜಕಾರಣ ಕೆಟ್ಟ ಪರಿಸ್ಥಿತಿಯಲ್ಲಿದೆ. ಯಾವುದು ಸರಿ- ತಪ್ಪು ಎಂದು ಹೇಳಲಾಗದ ಸ್ಥಿತಿಯಲ್ಲೂ ಹೇಡಿಯಾಗಿ ಬೆನ್ನು ತೋರದೆ ಬದ್ಧತೆ ಪ್ರದರ್ಶಿಸಿದ್ದೇನೆ. ಕೆಸರಿನಲ್ಲಿ ಅರಳಿದ ಕಮಲದಂತೆ ನಾನು ಬದುಕುವ ಪ್ರಯತ್ನ ಮಾಡಿದ್ದೇನೆ. ಇದನ್ನು ಸಹಿಸದವರು ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಕ್ಷೇತ್ರದ ಮತದಾರರ ಆಶೀರ್ವಾದ ಎಷ್ಟು ಗಟ್ಟಿ ಇದೆ ಎಂದರೆ ಮೊದಲ ಬಾರಿ ಶಾಸಕನಾದ ನಾನು ಸಚಿವ ಪದವಿಯೂ ದೊರಕಿತು. ಯಾವ ನಾಯಕರ ಬೆಂಬಲವೂ ಇಲ್ಲದೆ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಅಭಿವೃದ್ಧಿ ಕಾರ್ಯಗಳ ಮೂಲಕ ಜವಾಬ್ದಾರಿ ನಿರ್ವಹಿಸಿದ ತೃಪ್ತಿಯಿದೆ ಎಂದರು.
ಶ್ರೀಸಾಮಾನ್ಯನಿಗೆ ಮೂಲ ಸೌಕರ್ಯಗಳನ್ನು ಗರಿಷ್ಠ ಅಲ್ಲದಿದ್ದರೂ ಕನಿಷ್ಠ ಪ್ರಮಾಣದಲ್ಲಾದರೂ ಒದಗಿಸಿದ್ದೇನೆ. ನಿರಂತರ ವಿದ್ಯುತ್ ಯೋಜನೆ ಮೂಲಕ ಗುಣಮಟ್ಟದ ವಿದ್ಯುತ್, ಹಳ್ಳಿಗಾಡಿನಲ್ಲಿ ಶುದ್ಧ ಕುಡಿವ ನೀರು, ರಸ್ತೆಗಳ ಅಭಿವೃದ್ಧಿ, ಬಸ್ ಸೌಕರ್ಯ ಕಲ್ಪಿಸಿದ್ದೇನೆ ಎಂದು ಹೇಳಿದರು.
ಕ್ಷೇತ್ರದಲ್ಲಿ ನಿಮ್ಮ ಮತ್ತು ನನ್ನ ಅವಧಿಯಲ್ಲಿ ನಡೆದಿರುವ ಕೆಲಸಗಳನ್ನು ಜನರು ತುಲನೆ ಮಾಡಿ ಉತ್ತರ ನೀಡುತ್ತಾರೆ. ನೀವು ಬದ್ಧತೆಯಿಂದ ನಡೆದುಕೊಂಡಿದ್ದರೆ ಕ್ಷೇತ್ರ ಇಷ್ಟೊಂದು ಹಿಂದುಳಿಯುತ್ತಿರಲಿಲ್ಲ. ನಾನು ಅಭಿವೃದ್ಧಿ ಕಾರ್ಯಗಳ ಮೂಲಕ ಸಾಧನೆ ಮಾಡಿ ಹೆಜ್ಜೆ ಗುರುತು ಬಿಟ್ಟಿದ್ದೇನೆ ಎಂದು ವಿರೋಧಿಗಳನ್ನು ತರಾಟೆ ತೆಗೆದುಕೊಂಡರು.
ಚುನಾವಣಾ ಪೂರ್ವದಲ್ಲಿ ಮಾಡಿದ ಪ್ರತಿಜ್ಞೆಯಂತೆ ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ತರುವ ಮೂಲಕ ಅದನ್ನು ಈಡೇರಿಸಿದ್ದೇನೆ. ನನ್ನ ರಾಜಕೀಯ ನಾಯಕರ ಆಶೀರ್ವಾದವನ್ನು ಕಾರ್ಯಕ್ರಮಗಳ ಮೂಲಕ ಜನರಿಗೆ ಸಮರ್ಪಣೆ ಮಾಡಿದ್ದೇನೆ ಎಂದು ತಿಳಿಸಿದರು.
 ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಜಿಲ್ಲಾ ಮಂತ್ರಿ ಸಿ.ಪಿ. ಯೋಗೇಶ್ವರ್, ಅಭಿವೃದ್ಧಿಯನ್ನೇ ಮಾನದಂಡವಾಗಿ ನೋಡುವುದಾದರೆ ಈ ಕ್ಷೇತ್ರದ ಅಭಿವೃದ್ಧಿ ನೋಡಿದರೆ ಮುಂದೆಯೂ ನರೇಂದ್ರಸ್ವಾಮಿ ಅವರೇ ಶಾಸಕರಾಗಿ ಮುಂದುವರಿಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ದೇವರ ಮುಂದೆ ಕೈ ಚಾಚಿದರೂ ಪ್ರಸಾದ ಸಿಗುವುದಿಲ್ಲ. ಹೀಗಿರುವಾಗ ಸರ್ಕಾರದಲ್ಲಿ ಆಕಸ್ಮಿಕವಾಗಿ ದೊರಕಿದ ಅವಕಾಶ ಸದ್ಬಳಕೆ ಮಾಡಿಕೊಂಡು ನರೇಂದ್ರಸ್ವಾಮಿ ಸಾರ್ವಜನಿಕ ಸೇವೆ ಸಾರ್ಥಕವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು. ಮಂಡ್ಯ ಜಿಲ್ಲೆ ಸಂಪೂರ್ಣ ನೀರಾವರಿ ಕ್ಷೇತ್ರ ಎಂಬ ಭಾವನೆ ಅನೇಕರಲ್ಲಿದೆ. ಆದರೆ, ಇಲ್ಲಿ ಮಹಾರಾಜರ ಕಾಲದಲ್ಲಿನ ನೀರಾವರಿ ಯೋಜನೆ ಹೊರತುಪಡಿಸಿದರೆ ಯಾವುದೇ ಹೊಸ ನೀರಾವರಿ ಯೋಜನೆಗಳು ಜಾರಿಯಾಗಿಲ್ಲ. ಕಡೆ ಭಾಗದ ಜನರಿಗೆ ಇಂದಿಗೂ ನೀರು ಸಿಗದ ಸ್ಥಿತಿಯಿದೆ ಎಂದು ವಿಷಾಧಿಸಿದರು.
 ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೂರದಂತೆ ಎಚ್ಚರ ವಹಿಸಲಾಗಿದೆ. ಮೇವು ಸಂಗ್ರಹ ಕಾರ್ಯ ತ್ವರಿತಗತಿಯಲ್ಲಿ ನಡೆದಿದ್ದು, 40 ಮೆಟ್ರಿಕ್ ಟನ್ ಹಸಿರು ಮೇವು ಉತ್ಪಾದನೆ ಮಾಡಲಾಗುತ್ತಿದೆ ಎಂದು ಯೋಗೇಶ್ವರ್ ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೃಷ್ಣಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಚನ್ನಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಕುಮಾರ್, ತಹಸೀಲ್ದಾರ್ ರಾಜೇಶ್, ಆರ್.ಎನ್. ವಿಶ್ವಾಸ್, ಪುರಸಭೆ ಅಧ್ಯಕ್ಷೆ ವಿಜಯಮ್ಮ, ತಾಪಂ ಅಧ್ಯಕ್ಷ ಕೆ.ಎಸ್. ಪ್ರಕಾಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com