ಮಂಡ್ಯ: ಕೇಂದ್ರ ಸರ್ಕಾರದ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಅವರು ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಹಿಂದೂ ಭಯೋತ್ಪಾದನೆ ತಯಾರಿಸುವ ಆರೋಪ ಹೊರಿಸಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ಕೇಂದ್ರ ಗೃಹ ಸಚಿವ ಶಿಂಧೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಶಿಂಧೆ ತಮ್ಮ ಭಾಷಣದಲ್ಲಿ ಹಿಂದೂ ಭಯೋತ್ಪಾದನೆ ಹಾಗೂ ಕೇಸರಿ ಭಯೋತ್ಪಾದನೆ ಎಂಬ ಶಬ್ದ ಪ್ರಯೋಗಿಸಿ ಹಿಂದೂ ಹಾಗೂ ಭಗವಾಧ್ವಜಕ್ಕೆ ಅಪಮಾನ ಎಸಗಿದ್ದಾರೆ. ಇದರಿಂದ ಇಡೀ ದೇಶದ ಹಿಂದೂ ಜನತೆಗೆ ಅವಮಾನವಾಗಿದೆ ಎಂದು ದೂರಿದರು.
ಹಿಂದೂ ಇತಿಹಾಸ ಭಯೋತ್ಪಾದನೆಯ ಇತಿಹಾಸವಲ್ಲ. ಸರ್ವರಿಗೂ ಸಮಗೌರವ ಹಾಗೂ ಎಲ್ಲರಿಗೂ ತಮ್ಮ ಮತ- ಪಂಥ- ಆಚಾರ ಪದ್ಧತಿಯ ಪಾಲನೆಗೆ ಈ ದೇಶದಲ್ಲಿ ಸ್ವಾತಂತ್ರ್ಯ ನೀಡಿದೆ. ಹಿಂದೂ ರಾಜರು ಸಮಾನ ಜೀವನ ಹಕ್ಕನ್ನು ಒದಗಿಸಿದ್ದಾರೆ. ಇಂದು ದೇಶದಲ್ಲಿ ಸರ್ವಧರ್ಮ ಸಮಭಾವದ ವಾತಾವರಣವಿದೆ. ಆದರೆ, ಹಿಂದೂ ಹಾಗೂ ಕೇಸರಿ ಎನ್ನುವ ಪದಗಳನ್ನು ಭಯೋತ್ಪಾದನೆಯೊಡನೆ ಬಳಸಿ ಕೇಂದ್ರ ಗೃಹ ಸಚಿವರು ದೇಶದ ಸಾಮಾನ್ಯ ಜನರ ಭಾವನೆ ಕೆರಳಿಸಿದ್ದಾರೆ. ಕೂಡಲೇ ತಮ್ಮ ಸ್ಥಾನಕ್ಕೆ ಶಿಂಧೆ ರಾಜಿನಾಮೆ ನೀಡಬೇಕು. ಹಿಂದೂ ಜನತೆಯಲ್ಲಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಪಿ. ಮಹೇಶ್, ಯುವ ಅಧ್ಯಕ್ಷ ಎಸ್. ಹೇಮಂತ್ಬಾಬು, ಉಪಾಧ್ಯಕ್ಷ ಎಂ.ವಸಂತ್ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರವಿ, ಜಿಲ್ಲಾ ಕಾರ್ಯದರ್ಶಿ ಕೆ.ಸಿ.ಆನಂದ, ಎಂ.ರೂಪ, ಜೆ.ನಿಂಗರಾಜು, ಚಾಮರಾಜ್, ನಯಾಜ್ ಪಾಷ ಎಂ.ನಂದೀಶ್, ಬಿ.ಕೃಷ್ಣ, ರವಿ ಪ್ರಸಾದ್ ಹಲವರು ಭಾಗವಹಿಸಿದ್ದರು.