ಮಂಡ್ಯ: ತಾಲೂಕಿನ ಗಾಣದಾಳು ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ ಹಾಗೂ ರಾಜಕೀಯ ಚಿಂತನಾ ಸಮಾವೇಶ ನಡೆಯಿತು.
ಸಮಾವೇಶ ಉದ್ಘಾಟಿಸಿದ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ, ಹಳ್ಳಿಗಾಡಿನಲ್ಲಿ ಕೃಷಿ ನಶಿಸಿ ಹೋಗುತ್ತಿದೆ. ಹಾಲು ಸೇರಿದಂತೆ ರೈತರ ಉತ್ಪನ್ನಗಳ ಬೆಲೆ ಇಳಿಮುಖವಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಬೇಸಿಗೆ ಆರಂಭವಾಗುತ್ತಿದೆ. ನೀರಿನ ಬವಣೆ ನೀಗಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗೆ ಮುಂದಾಗಬೇಕು. ನಾಲೆ ಆಧುನೀಕರಣಕ್ಕೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸಬೇಕು. ಬೇಸಿಗೆ ಬೆಳೆ ಇಲ್ಲದಿರುವುದರಿಂದ ಬೆಳೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತರ ಬಗ್ಗೆ ಸರ್ಕಾಗಳು ನಿರ್ಲಕ್ಷ್ಯ ವಹಿಸಬಾರದು. ರೈತರು ಹಾಗೂ ಕೃಷಿ ಕೂಲಿಕಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಕೃಷಿ ಕಾರ್ಮಿಕರಿಗೆ ಮಾಸಾಶನ ಭತ್ಯೆ ನೀಡಬೇಕು. ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೈತರ ಪರ ಧ್ವನಿಯಾಗಿ ನಿಲ್ಲುವ ವ್ಯಕ್ತಿಯನ್ನು ಬೆಂಬಲಿಸಿ ಉತ್ತ ಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ, ಜಿಪಂ ಸದಸ್ಯ ಕೆಂಪೇಗೌಡ, ಮರಿಲಿಂಗೇಗೌಡ, ಬೋಮ್ಮಪ್ಪ, ಶಿವಲಿಂಗಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು, ಯುವ ಅಧ್ಯಕ್ಷ ಶ್ಯಾಂ ಸುಂದರ್, ಜಯರಾಮು, ಕೃಷ್ಣೇಗೌಡ, ರಾಮು ಭಾಗವಹಿಸಿದ್ದರು.