ಆದಿಚುಂಚನಗಿರಿ/ಮಂಡ್ಯ: ಡಾ. ಬಾಲಗಂಗಾಧರನಾಥ ಶ್ರೀಗಳ ಆಶಯದಂತೆ ಜಾತ್ಯತೀತ, ಪಕ್ಷಾತೀತ ಮತ್ತು ಒಗ್ಗಟ್ಟಿನಿಂದ ಚುಂಚನಗಿರಿ ಮಠದ ಪ್ರಗತಿಯನ್ನು ವಿಶ್ವದ ಎತ್ತರಕ್ಕೆ ತೆಗೆದುಕೊಂಡು ಹೋಗುವುದಾಗಿ ಒಕ್ಕಲಿಗರ ನಾಯಕರು ನೂತನ ಪೀಠಾಧ್ಯಕ್ಷರ ಮುಂದೆ ಸಂಕಲ್ಪ ಮಾಡಿದರು.
ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಡಾ. ಬಾಲಗಂಗಾಧರನಾಥ ಶ್ರೀಗಳ ಪುಣ್ಯಾರಾಧನಾ ಮಹೋತ್ಸವದ ಅಂಗವಾಗಿ ನಡೆದ ಭಕ್ತಸಂಗಮದಲ್ಲಿ ಪಾಲ್ಗೊಂಡಿದ್ದ ಒಕ್ಕಲಿಗ ಜನಾಂಗದ ರಾಜಕೀಯ ನಾಯಕರು ಮಾತ್ರವಲ್ಲದೇ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಮಂತ್ರಿಗಳು, ಮಾಜಿ ಸಚಿವರು, ಶಾಸಕರು, ಬಾಲಗಂಗಾಧರನಾಥ ಶ್ರೀಗಳ ಆಶಯಕ್ಕೆ ತಕ್ಕ ಹಾಗೆ ನಡೆದುಕೊಂಡು ಮಠವನ್ನು ಮುಂದೆಯೂ ಕೂಡಾ ಸಾವಿರ ಪಟ್ಟು ಸಹಕಾರ ನೀಡಿ ವಿಶ್ವದ ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಭಕ್ತ ಸಂಗಮ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಸದಾನಂದಗೌಡ, ಮಾಜಿ ಸಂಸದ ಅಂಬರೀಷ್, ಉಪಮುಖ್ಯಮಂತ್ರಿ ಅಶೋಕ, ಸಂಸದ ಚಲುವರಾಯಸ್ವಾಮಿ ಸೇರಿದಂತೆ ಬಹುತೇಕ ಒಕ್ಕಲಿಗ ನಾಯಕರು ಮಾತನಾಡಿ, ಬಾಲಗಂಗಾಧರನಾಥ ಶ್ರೀಗಳು ಕೇವಲ ಒಕ್ಕಲಿಗರ ಅಭ್ಯುದಯಕ್ಕೆ ಮಾತ್ರ ಶ್ರಮಿಸಲಿಲ್ಲ. ಸಮಾಜದ ಸಮಸ್ತ ವರ್ಗಗಳ ಜನರ ಏಳ್ಗೆಗೆ ದುಡಿದು ಮಠದ ಅಭಿವೃದ್ಧಿಯನ್ನು ಹಿಮಾಲಯದ ಶಿಖರದ ಎತ್ತರಕ್ಕೆ ತಂದು ನಿಲ್ಲಿಸಿದ್ದಾರೆ ಎಂದು ಹೇಳಿದರು.
ಭಕ್ತಸಂಗಮದಲ್ಲಿ ಪಾಲ್ಗೊಂಡ ನಾವ್ಯಾರು ರಾಜಕಾರಣ ಮಾಡುವ ಅಗತ್ಯತೆ ಇಲ್ಲ. ಪಕ್ಷಾತೀತ ಮತ್ತು ಜಾತ್ಯತೀತ ಚಿಂತನೆ ಶ್ರೀಗಳಲ್ಲಿ ಇತ್ತು. ಈ ಕಾರಣಕ್ಕಾಗಿ ಅವರು ಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಪಕ್ಷಾತೀತ ಜನನಾಯಕರನ್ನು ಕರೆದು ಆಧರಿಸಿ, ಗೌರವಿಸಿ, ನಾವು ನಡೆದುಕೊಂಡು ಹೋಗುವ ದಾರಿ ತೋರಿಸಿ ಮಾರ್ಗದರ್ಶನ ಮಾಡುತ್ತಿದ್ದರು. ಅಂತಹ ಗುರುಗಳನ್ನು ನಾವು ಕಳೆದುಕೊಂಡಿದ್ದೇವೆ ಎಂದು ನಾಯಕರು ತಮ್ಮ ಭಾಷಣಗಳಲ್ಲಿ ಮುಕ್ತ ಕಂಠದಿಂದ ಹೇಳಿದರು.
ಬಾಲಗಂಗಾಧರನಾಥ ಶ್ರೀಗಳ ಸ್ವರೂಪದಲ್ಲೇ ಇರುವ ನೂತನ ಪೀಠಾಧ್ಯಕ್ಷ ನಿರ್ಮಲಾನಂದನಾಥರು ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ನಾವುಗಳೆಲ್ಲರೂ ಬೆನ್ನೆಲುಗಳಾಗಿರಬೇಕು. ನೂತನ ಶ್ರೀಗಳು ಸಹ ಹಿರಿಯ ಶ್ರೀಗಳ ಮಾರ್ಗದರ್ಶನ, ಆಶಯದಂತೆ ಬಡವರು, ದೀನದಲಿತರು ಮತ್ತು ಗ್ರಾಮೀಣ ಪ್ರದೇಶದ ಜನರನ್ನು ಪ್ರೀತಿ ಅವರ ಅಭ್ಯುದಯಕ್ಕಾಗಿ ಹಲವಾರು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಾಗ ಮಾತ್ರ ಶ್ರೀಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅವರ ಆಶಯ ಈಡೇರಿದಂತಾಗುತ್ತದೆ ಎಂದು ಹೇಳಿದರು.
ಶೂನ್ಯ ಆವರಿಸಿದೆ: ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಾಲಗಂಗಾಧರನಾಥ ಶ್ರೀಗಳು ಮಾತೃ ಹೃದಯಿಗಳಾಗಿದ್ದರು. ಅವರು ಸದಾ ಸಮಾಜದ ಏಳಿಗೆಗೆ ಚಿಂತಿಸುತ್ತಿದ್ದರು. ಅಂತಹ ಮಹಾನ್ ಪುರುಷರನ್ನು ಕಳೆದುಕೊಂಡ ನಾವು ಶೂನ್ಯದಲ್ಲಿ ಇದ್ದೇವೆ ಎನಿಸುತ್ತದೆ ಎಂದರು.
ಜನಪರ ಯೋಜನೆಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅವರು ಕುಡಿಯುವ ನೀರು, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ತಂದು ಜನಸಾಮಾನ್ಯರ ಅಗತ್ಯ ಸೌಲಭ್ಯ ಪೂರೈಸುತ್ತಿದ್ದರು. ಸರ್ಕಾರ ಮಾಡುವ ಕೆಲಸಗಳನ್ನು ಶ್ರೀಗಳು ಅತ್ಯಂತ ಆತ್ಮತೃಪ್ತಿಯಿಂದ ಮಾಡುತ್ತಿದ್ದರು ಎಂದು ಹೇಳಿದರು.
ಆದಿಚುಂಚನಗಿರಿ ಹಾಗೂ ಸುತ್ತಮುತ್ತಲ ನೂರೆಂಟು ಗ್ರಾಮಗಳ ಕುಡಿಯುವ ನೀರು ಯೋಜನೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಕುಡಿಯುವ ನೀರು ಯೋಜನೆಗಳು, ಪರಮಶಿವಯ್ಯ ಅವರ ವರದಿ ಅನುಷ್ಠಾನಕ್ಕೆ ಶ್ರೀಗಳ ಒತ್ತಡ ಸದಾ ಇರುತ್ತಿತ್ತು. ಅವರ ಆಶಯದಂತೆ ಸರ್ಕಾರ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬದ್ಧವಾಗಿದೆ ಎಂದು ಹೇಳಿದರು.
ಭಕ್ತ ಸಂಗಮದ ಸಾನ್ನಿಧ್ಯವನ್ನು ನೂತನ ಪೀಠಾಧ್ಯಕ್ಷ ನಿರ್ಮಲಾನಂದನಾಥರು ವಹಿಸಿದ್ದರು. ಸಮಾರಂಭದಲ್ಲಿ ನಂಜಾವಧೂತ ಶ್ರೀಗಳು, ಶೇಖರ್ ಸ್ವಾಮೀಜಿ, ಪುರುಷೋತ್ತಮಾನಂದಜೀ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ, ಬಿಜೆಪಿ ರಾಷ್ಟ್ರೀಯ ನಾಯಕ ಅನಂತ್ಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಸದಾನಂದಗೌಡ, ಮಾಜಿ ಸಂಸದ ಅಂಬರೀಷ್, ಉಪಮುಖ್ಯಮಂತ್ರಿ ಅಶೋಕ, ಕೆ.ಎಸ್. ಈಶ್ವರಪ್ಪ, ಸಂಸದ ಚಲುವರಾಯಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಸಚಿವರಾದ ಸಿ.ಟಿ. ರವಿ, ಬಚ್ಚೇಗೌಡ, ಜೀವರಾಜ್, ಸುರೇಶ್ಕುಮಾರ್, ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ, ಶಾಸಕರಾದ ಗೋವಿಂದರಾಜು, ಮಾಗಡಿ ಬಾಲಕೃಷ್ಣ, ಶಾಸಕ ಡಿ.ಕೆ. ಶಿವಕುಮಾರ್, ಜಮೀರ್ ಅಹಮದ್, ಪಿ.ಜಿ.ಆರ್. ಸಿಂಧ್ಯಾ, ಎಲ್.ಡಿ. ರವಿ, ಕೆ.ಬಿ. ಚಂದ್ರಶೇಖರ್ ಅನೇಕ ಗಣ್ಯರು ಪಾಲ್ಗೊಂಡಿದ್ದರು.