ಕಾಮಗಾರಿಗೆ ಚಾಲನೆ

Updated on: 

ಕೆ.ಆರ್.ಪೇಟೆ: ತಾಲೂಕಿನ ಹೊಸಹೊಳಲು ಗ್ರಾಮದ ದಲಿತ ಕಾಲೋನಿಗೆ ನೀರು ಸರಬರಾಜು ಮಾಡುವ ಸಾಮರ್ಥ್ಯ ಹೆಚ್ಚಿಸುವ ಪೈಪ್‌ಲೈನ್ ಕಾಮಗಾರಿಗೆ ಶಾಸಕ ಕೆ.ಬಿ. ಚಂದ್ರಶೇಖರ್ ಗುದ್ದಲಿ ಪೂಜೆ ನೆರವೇರಿಸಿದರು. ಪುರಸಭೆಗೆ ಸೇರಿರುವ ಹೊಸಹೊಳಲು ಗ್ರಾಮದಲ್ಲಿ ಸುಮಾರು 600 ಕುಟುಂಬಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುತ್ತಿದ್ದಾರೆ. ಇವರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಲು 3 ಇಂಚು ಪೈಪ್‌ಲೈನ್ ಬದಲಿಗೆ 6 ಇಂಚಿನ ಪೈಪ್‌ಲೈನ್ ಅಳವಡಿಸಲು ಪುರಸಭೆಯ ಎಸ್‌ಜಿಎಸ್‌ಆರ್‌ವೈ ಯೋಜನೆಯಡಿಯಲ್ಲಿ 13 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕರು ತಿಳಿಸಿದರು. ಕಾಲೋನಿ ನಿವಾಸಿಗಳು ಇದರಿಂದ ಹೇಮಾವತಿ ನದಿಯಿಂಗ ಶುದ್ಧ ಕುಡಿಯುವ ನೀರು ಸಿಗಲಿದೆ. ನೀರಿನ ಬವಣೆ ಕಡಿಮೆಯಾಗಲಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದರು. ಪುರಸಭೆಯ ಅಧ್ಯಕ್ಷೆ ಪುಟ್ಟಸಿದ್ದಮ್ಮ, ಉಪಾಧ್ಯಕ್ಷ ಮಂಜುಳಮ್ಮ, ಸದಸ್ಯ ಡಿ.ಪ್ರೇಂಕುಮಾರ್, ಎಚ್.ಜಿ. ಗೋಪಾಲ್, ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇ.ಮಹೇಶ್, ಮುಖಂಡರಾದ ಶಿವನಂಜಯ್ಯ, ಶಿವಣ್ಣ, ರಾಜೇಂದ್ರ, ಎಂಜಿನಿಯರ್ ರಘು ಭಾಗವಹಿಸಿದ್ದರು.
ಕಾರು ಗಾಜು ಒಡೆದು ಕಳವು
ಹಲಗೂರು: ಇಲ್ಲಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಮುತ್ತತ್ತಿಗೆ ಬಂದಿದ್ದ ಮೂರು ಪ್ರವಾಸಿಗರ ಕಾರುಗಳ ಕಿಟಕಿ- ಗಾಜು ಒಡೆದು 13500 ನಗದು ಮತ್ತು ಮೊಬೈಲ್ ಕಳ್ಳತನ ಮಾಡಿರುವ ಘಟನೆ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಮಡಿವಾಳದಲ್ಲಿ ವಾಸವಾಗಿರುವ ಸಿ.ಎಸ್. ಡಾಲಿ ಅವರು ಕುಟುಂಬ ಸಮೇತ ತಮ್ಮ ಸ್ನೇಹಿತರೊಡನೆ ಮುತ್ತತ್ತಿಗೆ ಪ್ರವಾಸಕ್ಕೆಂದು ಬಂದಿದ್ದರು. ಕಾರನ್ನು ಕಾವೇರಿ ನದಿಯ ದಡದಲ್ಲಿ ನಿಲ್ಲಿಸಿ ಸ್ನಾನ ಮಾಡಲು ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಅದರ ಗಾಜು ಒಡೆದಿದ್ದು, ಅದರಲ್ಲಿದ್ದ 7 ಸಾವಿರ ನಗದು, ಮೊಬೈಲ್, ಆರ್‌ಸಿ ಬುಕ್, ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಪಹರಿಸಿದ್ದಾರೆ. ಅದೇ ರೀತಿ ವಿನೋದ್ ಎಂಬವರಿಗೆ ಸೇರಿದ ಕಾರಿನಲ್ಲಿದ್ದ 6500 ನಗದು ಹಾಗೂ ಮೊಬೈಲ್‌ಅನ್ನು ಕಳವು ಮಾಡಲಾಗಿದೆ. ಎಸ್‌ಐ ಗಂಗಾಧರ್ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com