ಸಮರ್ಪಕ ವಿದ್ಯುತ್‌ಗಾಗಿ ರೈತರ ಧರಣಿ

Updated on: 

ಮಳವಳ್ಳಿ: ಬರಗಾಲದಿಂದ ಜಾನುವಾರುಗಳಿಗೆ ನೀರಿಲ್ಲದೆ ಪರಿತಪಿಸುತ್ತಿದ್ದು, ಚೆಸ್ಕಾಂ ಅಧಿಕಾರಿಗಳು ಐದು ದಿನಗಳಿಂದ ವಿದ್ಯುತ್ ನೀಡದೆ ರೈತನ ಜಾನುವಾರುಗಳ ಜೀವದ ಜೊತೆ ಆಟವಾಡುತ್ತಿದ್ದಾರೆಂದು ಆರೋಪಿಸಿ ತಳಗವಾದಿ, ಕೊರೇಗಾಲ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಚೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
500ಕ್ಕೂ ಹೆಚ್ಚು ಗ್ರಾಮಸ್ಥರು, ಯುವ ಮುಖಂಡ ಕೊರೇಗಾಲ ನಾಗೇಂದ್ರ ತಮ್ಮಡಹಳ್ಳಿ ಈರಣ್ಣ ನೇತೃತ್ವದಲ್ಲಿ ಬಾರಿ ಪ್ರತಿಭಟನೆ ನಡೆಸಿದರಲ್ಲದೆ ರಾಜಕಾರಣದ ನೆಪದಲ್ಲಿ ತಳಗವಾದಿ ಜಿಪಂ ಕ್ಷೇತ್ರವನ್ನು ಕಡೆಗಣಿಸುತ್ತ ಕಳೆದ 5 ದಿನಗಳಿಂದ ವಿದ್ಯುತ್ ನೀಡದೆ ರೈತರ ಸ್ಥಿತಿ ಚಿಂತಾಜನಕವಾಗಿದೆ. ಜಾನುವಾರುಗಳಿಗೆ ನೀರಿನ ಬವಣೆ ಹೇಳತೀರದಾಗಿದೆ. ಕೆರೆಕಟ್ಟೆ- ಬಾವಿಗಳಲ್ಲಿ ನೀರಿಲ್ಲ. ವಿದ್ಯುತ್ ಇಲ್ಲದೆ ಬೋರ್‌ವೆಲ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಅಭಿವೃದ್ಧಿಗೆ ಇದ್ದ ಏಕೈಕ ಕೈಗಾರಿಕೆ ಪ್ರದೇಶ ಕಡೆಗಣಿಸಿ ರೈತರು, ಕಾರ್ಮಿಕರು, ಕೈಗಾರಿಕೆಯ ಬಡಜನರಿಗೆ ನಿರಂತರವಾಗಿ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ನಿರಂತರ ವಿದ್ಯುತ್ ಯೋಜನೆ ಎಲ್ಲಿ ಹೋಯಿತು ಎಂದು ತೀವ್ರ ತರಾಟೆ ತೆಗೆದುಕೊಂಡರು. ತಳಗವಾದಿ ಗ್ರಾಮ ವಿದ್ಯುತ್ ಇಲ್ಲದೆ ಕೈಮಗ್ಗದ ಕೈಗಾರಿಕೆ ಪ್ರದೇಶ ಸಂಪೂರ್ಣವಾಗಿ ನಿಂತು ಹೋಗಿದೆ ಎಂದರು.
ಸ್ಥಳಕ್ಕೆ ಆಗಮಿಸಿದ ಚೆಸ್ಕಾಂ ಎಇಇ ಈಶ್ವರಪ್ಪ ಮಾತನಾಡಿ, ಶೀಘ್ರ ವಿದ್ಯುತ್ ಪೂರೈಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಗುಳಗಟ್ಟ ಗ್ರಾಮದ ಶಿವರಾಮು, ರೈತ ಮುಖಂಡ ಏಳವೇಗೌಡ, ರಾಜು, ನಾಗರಾಜು, ನಾಗೇಂದ್ರ ಸೇರಿದಂತೆ 500ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com