ನಾಳೆಯಿಂದ ಜೆಡಿಎಸ್ ನಡಿಗೆ

Updated on: 

ಮದ್ದೂರು:ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಫೆ.1 ರಿಂದ 4 ದಿನಗಳ ಕಾಲ ಜೆಡಿಎಸ್ ನಡಿಗೆ ದಲಿತರ ಹಟ್ಟಿಯ ಕಡೆಗೆ ಪಕ್ಷದ ಸಾಧನೆಗಳ ಪ್ರಚಾರಾಂದೋಲನ ಕಾರ್ಯಕ್ರಮ ನಡೆಯಲಿದೆ ಎಂದು  ಜಿಲ್ಲಾ ಜೆಡಿಎಸ್ ಎಸ್ಸಿ ವಿಭಾಗದ ಅಧ್ಯಕ್ಷ ಸೋಮಶೇಖರ್ ಕೆರಗೋಡು ಬುಧವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಫೆ.1 ರಂದು ಮದ್ದೂರು ತಾಲೂಕಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಿದ್ದು, ಇದೇ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಭವನ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು. ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ ಉದ್ಘಾಟಿಸಲಿದ್ದು, ಸಂಸದ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಫೆ. 2ರಂದು ತರೀಕೆರೆ ಕಾಲೋನಿಯಲ್ಲಿ ಜೆಡಿಎಸ್ ನಡಿಗೆ ದಲಿತರ ಹಟ್ಟಿ ಕಡೆಗೆ ಕಾರ್ಯಕ್ರಮ ನಡೆಯಲಿದೆ.
ಫೆ.1 ರಿಂದ 4ವರೆಗೆ ಕೊಪ್ಪ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಜೆಡಿಎಸ್ ನಡಿಗೆ ದಲಿತರ ಹಟ್ಟಿಯ ಕಡೆಗೆ ಪಕ್ಷದ ಸಾಧನೆಗಳ ಪ್ರಚಾರಾಂದೋಲನ ನಡೆಯಲಿದೆ. ಫೆ. 4ರಂದು ಕೊಪ್ಪದ ಅಂಬೇಡ್ಕರ್ ನಗರದಲ್ಲಿ ಪ್ರಚಾರಾಂದೋಲನಕ್ಕೆ ತೆರೆ ಬೀಳಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ಸುರೇಶ್ ಕಂಠಿ, ಜಯರಾಂ ಆಬಲವಾಡಿ, ಜೆಡಿಎಸ್ ಜಿಲ್ಲಾ ಯುವ ಅಧ್ಯಕ್ಷ ಶಶಿಧರ, ಎಂ.ಬಿ. ಶ್ರೀನಿವಾಸ್, ಎಂ.ನಾಗರಾಜಯ್ಯ ಇದ್ದರು.

50 ವಿದ್ಯಾರ್ಥಿಗಳಿಂದ ರಕ್ತದಾನ
ಪಾಂಡವಪುರ:
ನೇತ್ರದಾನದಂತೆಯೇ ರಕ್ತದಾನವೂ ಮಹಾದಾನವಾಗಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ತುರ್ತು ಸಂದರ್ಭದಲ್ಲಿ ರಕ್ತವನ್ನು ದಾನ ಮಾಡುವ ಅಮೂಲ್ಯ ಜೀವ ರಕ್ಷಣೆ ಮಾಡಲು ಮುಂದಾಗಬೇಕು ಎಂದು ಮೈಸೂರು ಜೀವಾಧಾರ ರಕ್ತನಿಧಿ ಕೇಂದ್ರದ ಡಾ. ಮೋಹನ್‌ಕುಮಾರ್ ಸಲಹೆ ನೀಡಿದರು. ಪಪಂ ಪ್ರಭಾರ ಅಧ್ಯಕ್ಷ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಹೊನ್ನೇಗೌಡ, ಬಿಜೆಪಿ ಮುಖಂಡ ಎಲ್.ಡಿ. ಕೃಷ್ಣಪ್ಪ ಭಾಗವಹಿಸಿದ್ದರು. 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಭಾರತೀನಗರ:
ಹಂಚಿಕೊಂಡು ತಿನ್ನುವ ಮನೋಭಾವವನ್ನು ಕ್ರೀಡಾಭಿಮಾನಿಗಳು ಬೆಳೆಸಿಕೊಳ್ಳಬೇಕೆಂದು ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಕ್ರೀಡಾಪಟುಗಳಿಗೆ ತಿಳಿಸಿದರು. ಭಾರತೀನಗರದಲ್ಲಿ ಪ್ರೀನ್ಸ್ ಕ್ರಿಕೆಟರ್ಸ್ ವತಿಯಿಂದ ಸುಜಯ್ ಸ್ಮರಣಾರ್ಥ ನಡೆಯುತ್ತಿರುವ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿದರಹೊಸಹಳ್ಳಿ ರವಿ, ಮಣಿಗೆರೆ ಗುರುಲಿಂಗಯ್ಯ, ಕೆ.ಟಿ. ಸುರೇಶ್, ಅಣ್ಣೂರು ವಿನಯ್, ಕೀರ್ತಿ, ಬಿ.ಟಿ. ವೆಂಕಟೇಶ್ ಸೇರಿದಂತೆ ಕ್ರೀಡಾಪಟುಗಳು ಇದ್ದರು.

ಆಸರೆ ಸಮಾಜದಿಂದ ಸಾಧಕರಿಗೆ ಸನ್ಮಾನ
ಕೆ.ಆರ್.ಪೇಟೆ:
ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಆಸರೆ ಸಮಾಜ ಸೇವಾ ಟ್ರಸ್ಟ್ 4ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು. ಸಾಧಕರನ್ನು ಅಭಿನಂದಿಸಿ ಮಾತನಾಡಿದರು. ಸ್ಟೇಟ್ ಬ್ಯಾಂಕಿನ ವನಿತಾಭಟ್, ನಿವೃತ್ತ ವೈದ್ಯಾಧಿಕಾರಿ ಡಾ.ರುಕ್ಷಣಿ, ರೈತ ಸಂಘದ ಮುರುಗೇಶ್, ಪುರಸಭೆ ಅಕೌಂಟೆಂಟ್ ಕೆ.ಎಲ್.ಪ್ರಶಾಂತಿ, ಸರ್ವೇಯರ್ ಅರುಣ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಆರಕ್ಷಕ ವೃತ್ತ ನಿರೀಕ್ಷಕ ಎಸ್.ಎನ್. ಸಂದೇಶ್‌ಕುಮಾರ್ ಉದ್ಘಾಟಿಸಿದರು. ಡಾ.ಎಸ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಎಚ್.ಬಿ. ಮಂಜುನಾಥ್, ಸಮಾಜ ಸೇವಕ ಜಿ.ಸೋಮಶೇಖರ್, ತಾಲೂಕು ರೈತ ಸಂಘದ ಅಧ್ಯಕ್ಷ ನಾಗೇಗೌಡ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಎಸ್. ಸೋಮಯ್ಯ, ಎಸ್‌ಬಿಎಂ ಬ್ಯಾಂಕ್ ಮ್ಯಾನೇಜರ್ ಕಾಶಿರಾಮನ್ ಉಪಸ್ಥಿತರಿದ್ದರು.

ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಭಾರತೀನಗರ:
ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಯಡಗನಹಳ್ಳಿ, ಗೋಪನಹಳ್ಳಿ, ಕಪರೆಕೊಪ್ಪಲು, ಭುಜುವಳ್ಳಿ ಸೇರಿದಂತೆ ಇತರೆ ಗ್ರಾಮಸ್ಥರು ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಚೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ವಿಸಿ ನಾಲೆ ಆಧುನೀಕರಣಕ್ಕೆ ನಾಲೆಯಲ್ಲಿ ನೀರು ನಿಲ್ಲಿಸಿದ್ದರಿಂದ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಿಂದ ಬೆಳೆದ ಕಬ್ಬು ಮತ್ತು ಇತರೆ ಬೆಳೆಗೆ ಸರಿಯಾದ ರೀತಿಯ ವಿದ್ಯುತ್ ಪೂರೈಕೆ ಇಲ್ಲದೆ ಬೆಳೆಗಳೆಲ್ಲ ಒಣಗುತ್ತಿವೆ ಎಂದು ಕಿಡಿಕಾರಿದರು. ಇದೇ ಸಂದರ್ಭದಲ್ಲಿ ಯಡನಗಳ್ಳಿ ಕೆಂಚೇಗೌಡ, ಹನುಮೇಗೌಡ, ವಿಎಸ್‌ಎಸ್‌ಬಿಎನ್ ಮಾಜಿ ಅಧ್ಯಕ್ಷ ಎಂ. ವೀರೇಗೌಡ, ತಾಪಂ ಅಧ್ಯಕ್ಷೆ ನೀಲಮ್ಮಮರಿಸಿದ್ದಯ್ಯ, ಪ್ರಕಾಶ್, ಶೆಟ್ಟಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಇತರರು ಪ್ರತಿಭಟನೆ ಧರಣಿ ನಡೆಸಿದರು.

ಕಲ್ಯಾಣಿಯಲ್ಲಿ ಪುರಾತನ ಸುರಂಗ ಮಾರ್ಗ ಪತ್ತೆ
ಶ್ರೀರಂಗಪಟ್ಟಣ:
ಪಟ್ಟಣದ ಶ್ರೀರಂಗನಾಥಸ್ವಾಮಿ ಸನ್ನಿಧಿಯಲ್ಲಿರುವ 300ಕ್ಕೂ ಹೆಚ್ಚು ವರ್ಷಗಳ ಪುರಾತನ ಕಲ್ಯಾಣಿಯಲ್ಲಿ ಸುರಂಗ ಮಾರ್ಗವೊಂದು ಪತ್ತೆಯಾಗಿದೆ.
ದೇವಸ್ಥಾನದ ಎದುರಿಗಿನ ಪುರಾತನ ಗಜೇಂದ್ರ ಮೋಕ್ಷ ಕೊಳದಲ್ಲಿ ಎರಡು ದಿಕ್ಕಿನ ಕಡೆ ಗುಪ್ತ ಮಾರ್ಗವಿರುವ ಸುರಂಗವೊಂದು ಬೆಳಕಿಗೆ ಬಂದಿದೆ. ಗಜೇಂದ್ರನ ವಿಗ್ರಹವಿರುವ ಕೊಳದ ಪೂರ್ವಭಾಗದಲ್ಲಿ ಕಾಣಿಸಿಕೊಂಡಿರುವ ಬೃಹತ್ ಸುರಂಗದೊಳಗೆ ಈಶಾನ್ಯ ಮತ್ತು ನೈರುತ್ಯ ಕಡೆಗಿನ ದಿಕ್ಕಿನಲ್ಲಿ ಎರಡು ಚಿಕ್ಕ ಚಿಕ್ಕ ಸುರಂಗ ಮಾರ್ಗಗಳು ಕಾಣಿಸುತ್ತಿವೆ.
ಒಂದು ದಿಕ್ಕಿನ ಸುರಂಗ ಮಾರ್ಗದಲ್ಲಿ ಬಂಗಾರದೊಡ್ಡಿಯಿಂದ ಕೊಳಕ್ಕೆ ನೀರು ಸರಬರಾಜು ಮಾಡಿಕೊಳ್ಳಲಾಗುತ್ತಿತ್ತು. ಮತ್ತೊಂದು ಸುರಂಗ ಮಾರ್ಗದಿಂದ ಮತ್ತೊಂದು ಕೊಳಕ್ಕೆ ನೀರನ್ನು ಸಾಗಿಸಲಾಗುತ್ತಿತ್ತೆಂಬ ಊಹಾಪೋಹಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. ಮತ್ತೆ ಕೆಲವರು ಪಟ್ಟಣವನ್ನಾಳುತ್ತಿದ್ದ ರಾಜ- ಮಹಾರಾಜರು ತುರ್ತು ಸಂದರ್ಭದಲ್ಲಿ ತೆರಳಲು ಈ ಸುರಂಗ ಮಾರ್ಗ ಅನುಸರಿಸುತ್ತಿದ್ದರು ಮಾತುಗಳು ಕೇಳಿ ಬಂದಿವೆ.

ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ
ಮಂಡ್ಯ:
ವಿದ್ಯಾರ್ಥಿ ದಿಸೆಯಲ್ಲೇ ಉತ್ತಮ ಜೀವನ ಮತ್ತು ಭವಿಷ್ಯ ನಿರ್ಮಿಸಿಕೊಳ್ಳಲು ಅಲೋಚನೆ ಅಗತ್ಯ ಎಂದು ಮಹಿಳಾ ಕಾಲೇಜಿನ ಪ್ರಾಶುಪಾಲೆ  ಡಾ.ಲೀಲಾ ಅಪ್ಪಾಜಿ ಅಭಿಪ್ರಾಯಪಟ್ಟರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ,  ಉಜ್ವಲ ಭವಿಷ್ಯ ತಮ್ಮ ಅಂಗೈಯಲ್ಲೇ ಇದೆ. ವಿದ್ಯಾರ್ಥಿಗಳು  ಸದ್ಗುಣ ಬೆಳೆಸಿಕೊಳ್ಳಬೇಕು ಎಂದರು. ಸಾಧನಾ ಮನೋಭಾವ ಮೈಗೂಡಿಸಿಕೊಂಡು ಅಹಂಕಾರವಿಲ್ಲದೆ ನಂಬಿಕೆಯೊಂದಿಗೆ ಜೀವನ ಕಟ್ಟಿಕೊಳ್ಳಬೇಕು. ಆತ್ಮಶಕ್ತಿಯೇ ಶ್ರೇಷ್ಠ ಶಕ್ತಿಯಾಗಿದೆ. ಅದರ ಸದ್ಬಳಕೆ ಉತ್ತಮ ಹೆಜ್ಜೆ ಗುರುತು ಮೂಡಿಸಲು ಬೆಳೆಸಿಕೊಳ್ಳಬೇಕು ಎಂದು ನುಡಿದರು. ಅಧ್ಯಕ್ಷತೆಯನ್ನು ಶಾಸಕ ಎಂ. ಶ್ರೀನಿವಾಸ್ ವಹಿಸಿದ್ದರು. ಕ್ರೀಡಾ ಮತ್ತು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ತಗ್ಗಹಳ್ಳಿ ವೆಂಕಟೇಶ್, ಎ.ಸಿ. ರವಿ, ಪ್ರಾಂಶುಪಾಲ ಎಚ್.ಸಿ. ಕೃಷ್ಣ, ಕ್ರೀಡಾ ಕಾರ್ಯದರ್ಶಿ ಜಿ.ಎನ್.ನಾಗೇಶ್, ಸಿ.ಎಂ.ರಾಜು ಇದ್ದರು.

ಕಬ್ಬು ಬಾಕಿ ಹಣ ಪಾವತಿಗಾಗಿ ಕಾರ್ಖಾನೆ ಎದುರು ರೈತರ ಪ್ರತಿಭಟನೆ
ಮದ್ದೂರು:
ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿನ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ರೈತರು ಬುಧವಾರ ತಾಲೂಕಿನ ಎನ್‌ಎಸ್‌ಎಲ್ ಕಾರ್ಖಾನೆ ಎದುರು ಪ್ರತಿಭಟನಾ ಧರಣಿ ನಡೆಸಿದರು.
ನಾಗಮಂಗಲ ವಿಧಾನಸಭಾ ಕ್ಷೇತ್ರದ ರೈತ ಸಂಘದ ಅಧ್ಯಕ್ಷ ಕೀಳಘಟ್ಟ ನಂಜುಂಡಯ್ಯ ನೇತೃತ್ವದಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿ, ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಈ ಕೂಡಲೇ ಕಬ್ಬಿನ ಬಾಕಿ ಪಾವತಿ ಮಾಡುವಂತೆ ಆಗ್ರಹಿಸಿದರು. ಪ್ರಸಕ್ತ ಸಾಲಿನಲ್ಲಿ ರೈತರು ಕಾರ್ಖಾನೆಗೆ ಸರಬರಾಜು ಮಾಡಿದ ಟನ್ ಕಬ್ಬಿಗೆ ನಿಗದಿ ಮಾಡಿದ್ದ 2400 ಗಳಲ್ಲಿ ಆಡಳಿತ ಮಂಡಳಿ 2 ಸಾವಿರ ಪಾವತಿ ಮಾಡಿದೆ. ಉಳಿದ 400 ಮೊತ್ತ ನೀಡಲು 25 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಧರಣಿನಿರತ ರೈತರು ಒತ್ತಾಯಿಸಿದರು. ಕಾರ್ಖಾನೆ ಆಡಳಿತ ಮಂಡಳಿ 2012ನೇ ಸಾಲಿನಲ್ಲಿ ಟನ್‌ವೊಂದಕ್ಕೆ 300 ಗಳಂತೆ ಬಾಕಿ ಉಳಿಸಿಕೊಂಡಿರುವ 125 ಕೋಟಿ ಹಣ ತಕ್ಷಣ ಪಾವತಿ ಮಾಡುವಂತೆ ರೈತ ಮುಖಂಡರು ಆಗ್ರಹಪಡಿಸಿದರು. ನಂತರ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಎ.ಆರ್. ಮನಗೋಳಿ ಧರಣಿನಿರತ ರೈತರೊಂದಿಗೆ ಮಾತುಕತೆ ನಡೆಸಿ ಬಾಕಿಹಣ ಪಾವತಿಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ರೈತರು ಹಣ ಪಾವತಿ ಮಾಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು, ಸೀತಾರಾಮು, ಚನ್ನೇಗೌಡ, ತಿಮ್ಮರಾಜು, ಉಮೇಶ್, ಗಿರೀಶ್, ನಾಗರಾಜು, ಚನ್ನಪ್ಪ, ಶಿವಯ್ಯ ಭಾಗವಹಿಸಿದ್ದರು.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಪಾಂಡವಪುರ:
ಸರ್ಕಾರದ ಯೋಜನೆಗಳನ್ನು ನಿಗದಿತ ಸಮಯಕ್ಕೆ ಉತ್ತಮ ಗುಣಮಟ್ಟದಲ್ಲಿ ಮುಗಿಸಬೇಕೆಂದು ಶಾಸಕ ಸಿ.ಎಸ್. ಪುಟ್ಟರಾಜು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ತಿರುಮಲಪುರ ಗ್ರಾಮಕ್ಕೆ 15 ಲಕ್ಷ, ಸಣಬ ಗ್ರಾಮಕ್ಕೆ 20 ಲಕ್ಷ, ಸಣಬ ಹೊಸ ಬಡಾವಣೆಗೆ 25 ಲಕ್ಷ, ಕಡಬಕ್ಕೆ 18 ಲಕ್ಷ, ನಲ್ಲೇನಹಳ್ಳಿ 10 ಗ್ರಾಮದ ಪರಿಶಿಷ್ಟ ಜನಾಂಗದ ಕಾಲೋನಿಗಳಿಗೆ 90 ಲಕ್ಷ ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಎಸ್. ಪುಟ್ಟರಾಜು ಗುದ್ದಲಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮತನಾಡಿದರು. ಹಳ್ಳಿಗಳ ರಸ್ತೆ ಅಭಿವೃದ್ದಿಪಡಿಸಬೇಕೆಂದು ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಇದನ್ನು ನಿಗದಿತ ವೇಳೆಗೆ, ಗುಣಮಟ್ಟದಲ್ಲಿ ಕಾರ್ಯನಿರ್ವಹಿಸಿ ಗ್ರಾಮೀಣ ಜನತೆಗೆ ಅನುಕೂಲ ಮಾಡಿಕೊಡಬೇಕು. ನಾರಾಯಣಪುರ ಗ್ರಾಪಂ ಅಧ್ಯಕ್ಷೆ ರಾಧ ಶಿವಶಂಕರ್, ಮೀನಾಕ್ಷಮ್ಮ, ಕಾಂತರಾಜು ಅನಿಲ್ ಪುಟ್ಟೇಗೌಡ, ರಾಮಚಂದ್ರ, ಆರ್.ಎಂ. ಪರಮೇಶ್, ಕೆಂಪರಾಜು, ಬೋರಲಿಂಗೇಗೌಡ, ಯೋಗನರಸಿಂಹೇಗೌಡ, ಮಹೇಶ್, ಮರಿಲಿಂಗಯ್ಯ, ಬಲರಾಮೇಗೌಡ, ಕೆ.ಸಿ. ರಾಮೇಗೌಡ ಸೋಮು, ಎನ್‌ಇಇ ಬಾಲಸುಬ್ರಮಣ್ಯ, ರವಿವರ್ಮ, ನಾಗರಾಜು ಇತರರು ಇದ್ದರು.

ಒಳಚರಂಡಿ ಕಾಮಗಾರಿಗೆ ಚಾಲನೆ
ಮಂಡ್ಯ:
ನಗರಸಭೆ ವ್ಯಾಪ್ತಿಯಲ್ಲಿ 2ನೇ ಹಂತದ 1.89 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿಗಳಿಗೆ ಶಾಸಕ ಎಂ. ಶ್ರೀನಿವಾಸ್ ಗುದ್ದಲಿಪೂಜೆ ನೆರವೇರಿಸಿದರು. ನಗರಕ್ಕೆ ಹೊಂದಿಕೊಂಡತಿರುವ ಚಿಕ್ಕೇಗೌಡನದೊಡ್ಡಿ, ಕಲ್ಲಹಳ್ಳಿ, ವಿ.ವಿ.ನಗರ, ಬಿವಿಕೆ ಲೇಔಟ್, ತಾವರಗೆರೆ, ಮಾರುತಿ ನಗರ, ಹೊಸಹಳ್ಳಿ, ಗುತ್ತಲು, ಸಾಹುಕಾರ್ ಚನ್ನಯ್ಯ ಬಡಾವಣೆ, ಕಾವೇರಿ ನಗರ, ಕುವೆಂಪುನಗರ, ದೇವೇಗೌಡನದೊಡ್ಡಿ ಸೇರಿದಂತೆ 8520 ಮೀಟರ್ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿ, ಸರ್ಕಾರ ಸೇರಿದಂತೆ ವಿವಿಧ ಅನುದಾನಗಳಡಿ ರಸ್ತೆ ಕಾಮಗಾರಿ ಪ್ರಾರಂಭವಾಗಿವೆ.
ಟೆಂಡರ್ ಹಂತ ಮುಗಿದಿದೆ, ಶೀಘ್ರ ಕಾಮಗಾರಿ ಪ್ರಾರಂಭವಾಗುತ್ತವೆ. ರಸ್ತೆ ಕೆಲಸ ಪ್ರಾರಂಭಕ್ಕೂ ಮುನ್ನ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿದರೆ ರಸ್ತೆ ಕಾಮಗಾರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಕಾಮಗಾರಿಗಳು ನಡೆಯುವಾಗ ಗುಣಮಟ್ಟ ಪರಿಶೀಲಿಸುವ ಜವಾಬ್ದಾರಿ ಸ್ಥಳೀಯ ನಾಗರಿಕರದ್ದಾಗಿದೆ. ಉತ್ತಮ ಗುಣಮಟ್ಟದ ಕಾಮಗಾರಿಗಳು ನಡೆದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ನಾಗರಿಕರು ಇದಕ್ಕೆ ಸಹಕಾರ ನೀಡಬೇಕು. ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್, ಜಿ.ಸಿ.ನಾಗರಾಜು, ಶ್ರೀಧರ್, ಜಯಶೀಲಮ್ಮ, ನಾಗಮ್ಮ, ಹೊಸಹಳ್ಳಿ ಬೋರೇಗೌಡ, ನಾಗಮಣಿ, ನಾಗಮ್ಮ, ರಾಜೇಶ್, ವೆಂಕಟೇಶ್, ಸವಿತಾ, ಆಯಿಷಾ ತಬಸ್ಸುಂ, ಸರಸ್ವತಮ್ಮ, ನಾಗರತ್ನಮ್ಮ ಇದ್ದರು.

ಜೆಡಿಎಸ್ ಮಹಿಳಾ ಘಟಕಕ್ಕೆ ಆಯ್ಕೆ
ಮಂಡ್ಯ:
ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಪಿಇಎಸ್ ಬಡಾವಣೆಯ ಜಿ.ಬಿ. ಪ್ರಭಾ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷೆ ಎಂ.ಎಸ್. ಮಂಜುಳಾ ಉದಯಶಂಕರ್ ಆದೇಶ ಹೊರಡಿಸಿದ್ದಾರೆ. ಸ್ವರ್ಣಸಂದ್ರದ ಬಿ.ಶಿವರಾಂ ಅವರನ್ನು ಜೆಡಿಎಸ್ ಕಾರ್ಮಿಕ ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಜಿ. ಶ್ರೀರಾಮಯ್ಯ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com