ಕನ್ನಡಪ್ರಭ ವಾರ್ತೆ ಭಾರತೀನಗರ ಮಾ.29
ಭಾರತೀನಗರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಅರೆಯುವುದಕ್ಕೆ ನೀರಿಲ್ಲದೆ ಕೃಷಿ ಉಪಯೋಗಕ್ಕೆ ಮೀಸಲಿರುವ ಅಂತರ್ಜಲವನ್ನು ಪಡೆಯುತ್ತಿರುವುದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅಗತ್ಯ ನೀರಿನ ಸೌಲಭ್ಯ ಮಾಡಿಕೊಳ್ಳದಿರುವುದರಿಂದ ಕಾರ್ಖಾನೆ ಸ್ಥಗಿತಗೊಳ್ಳುವ ಆತಂಕ ಒಂದೆಡೆ ರೈತರಿಗೆ. ಈ ಮಧ್ಯೆ ಆಡಳಿತ ಮಂಡಳಿ ನೆರೆಹೊರೆಯ ಕೃಷಿಕರಿಂದ ಹಣ ನೀಡಿ ಬೋರ್‌ಗಳಿಂದ ಕಾರ್ಖಾನೆಗೆ ನೀರು ಪಡೆದುಕೊಳ್ಳುತ್ತಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಕುಸಿದು ಜಲಕ್ಷಾಮ ತಲೆದೋರುವ ಅಪಾಯವಿದೆ ಎಂಬ ಆತಂಕ ಇನ್ನೊಂದೆಡೆ.
ಏಪ್ರಿಲ್ ಮೊದಲ ವಾರದಲ್ಲೇ ಕಾರ್ಖಾನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದರಿಂದ ಬೇಸಿಗೆಯ ಬಿಸಿಲಿನಲ್ಲಿ ಕಬ್ಬು ಒಣಗುತ್ತದೆ ಎಂದು ನಾ ಮುಂದು -ತಾ ಮುಂದು ಎಂಬಂತೆ ತರಾತುರಿಯಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದಾರೆ. ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿಗೆ ಬಾಕಿ ನೀಡದೆ ಈಗಾಗಲೇ ಪ್ರತಿಭಟನೆಗಳು ಕೂಡ ನಡೆಯುತ್ತಿದೆ.
ಮೊದಲೇ ಬರದಿಂದ ಕಂಗಾಲಾಗಿರುವ ಜನತೆ ಕುಡಿಯುವ ನೀರಿಗೆ ಮುಂದೇನು ಎಂಬ ಆತಂಕದಲ್ಲಿದ್ದಾರೆ. ಈಗಿರುವಾಗ ಕಾರ್ಖಾನೆ ಆಡಳಿತ ಮಂಡಳಿ ರೈತರಿಗೆ ಹಣ ಆಮಿಷವೊಡ್ಡಿ ಅವರ ಜಮೀನಿಗೆ ಉಪಯೋಗಕ್ಕಿದ್ದ ನೀರನ್ನು ಪಡೆದುಕೊಳ್ಳುತ್ತಿರುವುದು ಇಲ್ಲಿನ ಜಾಗೃತಿ ಯುವ ಜನತೆ ಖಂಡಿಸಿದ್ದಾರೆ.
ಕಾರ್ಖಾನೆ ನಡೆಸಲು ದಿನಕ್ಕೆ 2 ಸಾವಿರ ಘನ ಅಡಿ ನೀರು ಅವಶ್ಯಕತೆ ಇರುವುದರಿಂದ ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ಜೊತೆಗೆ ನೀರಿನ ಟ್ಯಾಂಕ್ ಲಾರಿಗಳಿಂದ ಸಿಕ್ಕಸಿಕ್ಕ ಕಡೆ ಪಂಪ್‌ಸೆಟ್‌ಗಳಿಂದ ನೀರನ್ನು ಸರಬರಾಜು ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚಿಗೆ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಮೆಳ್ಳಹಳ್ಳಿ ಹೆಬ್ಬಾಳದ ಪಕ್ಕದಲ್ಲಿರುವ ಪಂಪ್‌ಹೌಸ್ ಸಮೀಪದಲ್ಲಿ 2 ಬೋರ್‌ಗಳನ್ನು ಕೊರೆಸಿ ನೀರು ಪಡೆಯುತ್ತಿದ್ದ ಕಾರ್ಖಾನೆ ಆನಂತರದ ದಿನಗಳಲ್ಲಿ ನೆರೆಯ ಕೃಷಿಕರಿಂದ 4ಕ್ಕೂ ಹೆಚ್ಚು ಬೋರ್‌ಗಳಲ್ಲಿ ನೀರು ಪಡೆಯಲು ದಿನಕ್ಕೆ 400 ರಿಂದ 500 ಗಳವರೆಗೆ ಬಾಡಿಗೆ ರೂಪದಲ್ಲಿ ನೀಡಿ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ನೀರಿಲ್ಲದೆ ರೈತರು ಬೆಳೆದಿರುವ ಕಬ್ಬು ಬೇಸಿಗೆಯ ಬಿಸಿಲಿಗೆ ಒಣಗಿ ಮಣ್ಣು ಪಾಲಾಗುವ ಭೀತಿ ಎದುರಾಗಿದೆ. ಕಾರ್ಖಾನೆ ಅಧಿಕಾರಿಗಳು ವಿಧಿಯಿಲ್ಲದೆ ರೈತರ ಪಂಪ್‌ಸೆಟ್‌ಗಳ ಮೋರೆ ಹೋಗಿದ್ದಾರೆ.
ಕಾರ್ಖಾನೆಯವರೆಗೆ ಪೈಪ್‌ಲೈನ್ ಅಳವಡಿಸಿಕೊಂಡು ಅಕ್ರಮವಾಗಿ ನೀರು ಪಡೆಯುತ್ತಿದ್ದಾರೆ. ಇದರಿಂದ ಅಂತರ್ಜಲ ಕುಸಿದುಹೋಗುತ್ತಿದೆ. ನೆರೆಹೊರೆಯ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಅಲ್ಪಸ್ವಲ್ಪ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ.
ಕಾರ್ಖಾನೆಯವರು ನೀಡುವ ಪುಡಿಗಾಸಿಗೆ ಅಮೂಲ್ಯ ಅಂತರ್ಜಲ ಮಾರಿಕೊಳ್ಳುತ್ತಿರುವ ಜಮೀನುದಾರರು ಮತ್ತು ನೆರೆ-ಹೊರೆಯ ರೈತರ ಪ್ರದೇಶದಿಂದಲೂ ನೀರು ತರಿಸಿಕೊಳ್ಳುತ್ತಿರುವುದು ಇಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಗುಡಿಗೆರೆ ಗರಭೀಕಾಲೋನಿಯ ನಿವಾಸಿಗಳು ಕಳ್ಳಿಮೆಳೆದೊಡ್ಡಿ ಗ್ರಾಮದ ಸಿದ್ದೇಗೌಡರ ಬೋರ್ವೆಲ್‌ನಿಂದ ನೀರು ಕಾರ್ಖಾನೆಯವರು ಪಡೆಯುತ್ತಿದ್ದುದನ್ನು ಖಂಡಿಸಿ ಪ್ರತಿಭಟನೆ ನಡೆಸಿರುವ ನಿದರ್ಶನ ಉಂಟು.
ಕಾರ್ಖಾನೆ ಆಡಳಿತ ಮಂಡಳಿ ರೈತರಿಗೆ ಮೀಸಲಿರುವ ಪ್ರಕೃತಿಯ ಸಂಪತ್ತಾದ ಅಂತರ್ಜಲ ಮುಟ್ಟದೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು. ಕೋಟ್ಯಂತರ ರು. ಲಾಭಗಳಿಸುವ ಕಾರ್ಖಾನೆಯವರು ಅಂತರ್ಜಲವನ್ನು ನಿರಂತರವಾಗಿ ದೋಚುತ್ತಿದ್ದಾರೆ. ಈ ಭಾಗದಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯದೆ ಬರಡು ಭೂಮಿಯಾಗಿ ರೈತರ ಬುದಕು ಇನ್ನಷ್ಟು ಕಷ್ಟಕ್ಕೆ ಸಿಲುಕುತ್ತದೆ. ಬೋರ್‌ವೆಲ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೋರೆಸಿರುವುದರಿಂದ ಕೆರೆ-ಕಟ್ಟೆ ಮತ್ತು ಬಾವಿಗಳಲ್ಲೂ ನೀರು ಬರಿದಾಗಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ನೀರಿಗೆ ಹಾಹಾಕಾರ ಪಡುವುದು ಸಂಶಯವಿಲ್ಲ.