ಕನ್ನಡಪ್ರಭ ವಾರ್ತೆ ಮಂಡ್ಯ ಮಾ.29
ರೈತರ ಪರವಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ವಿಧಾನಸೌಧಕ್ಕೆ ಕಳುಹಿಸಲು ಈ ಬಾರಿ ಮತದಾರರು ಚಿಂತಿಸಬೇಕು ಎಂದು ಯುವ ಮುಖಂಡ ಪಚ್ಚೆ ನಂಜುಂಡಸ್ವಾಮಿ ಮನವಿ ಮಾಡಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ರಾಜಕೀಯ ಚಿಂತನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಕಷ್ಟ ಮತ್ತು ನ್ಯಾಯಯುತ ಬೆಲೆ ಒದಗಿಸಲು ಹೋರಾಟ ಮಾಡಿದ ಹೋರಾಟಗಾರರಿಗೆ ಮತ ನೀಡಬೇಕು ಎಂದರು.
ರಾಜಕಾರಣಿಗಳು ಶ್ರೀಸಾಮಾನ್ಯನ ಕಷ್ಟ ಮತ್ತು ಆ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸದೆ ಬೇನಾಮಿ ಹೆಸರಿನಲ್ಲಿ ಅಕ್ರಮ ಆಸ್ತಿ, ಹಣ ಸಂಪಾದಿಸಿ ರಾಜಕೀಯ ಮಾಡುತ್ತಿದ್ದಾರೆ. ಇವರಿಗೆ ಈ ಬಾರಿ ಮತದಾರರು ಬುದ್ಧಿ ಕಲಿಸಬೇಕು ಎಂದರು.
ರೈತ ಸಂಘ ಕಾವೇರಿ ನೀರು ಹೋರಾಟದ ಬಗ್ಗೆ ಜಾಗೃತಿ ಮೂಡಿಸಿ ರೈತರ ಬೆಳೆಗಳಿಗೆ ನೀರೊದಗಿಸಲು ಮುಂದಾಗಿದೆ. ಕಬ್ಬು, ಭತ್ತ, ರಾಗಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಲು ನಿರಂತರ ಹೋರಾಟದಿಂದ ಬೆಲೆ ಹೆಚ್ಚಳ ಮಾಡಿಸುವಲ್ಲಿ ಕಾರಣವಾಗಿದೆ ಎಂದರು.
ಸ್ಥಳೀಯ ಶಾಸಕರು ವಿಧಾನ ಸಭೆಯಲ್ಲಿ ಜಿಲ್ಲೆಯ ಬಗ್ಗೆ ಯಾವುದೇ ಅಭಿವೃದ್ಧಿಪರ ಯೋಜನೆಗಳ ಮಸೂದೆ ಮಂಡಿಸದೆ ನಿದ್ರಿಸುತ್ತಿದ್ದರು. ಅವರ ಬೇಜವಾಬ್ದಾರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಮುಖಂಡ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ರಾಜಕೀಯ ಪಕ್ಷಗಳು ಕೇವಲ ಓಟಿಗಾಗಿ ಬೃಹತ್ ಕಾರ್ಯಕ್ರಮ, ಮನರಂಜನೆ, ಬಾಡೂಟ ಹಾಕಿಸಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಮತದಾರರು ಜಾಗೃತರಾಗಿ ರೈತರ ಬದುಕಿಗೆ ಸ್ಪಂದಿಸುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಸಲಹೆ ನೀಡಿದರು.
ಕುಟುಂಬ ರಾಜಕಾರಣದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರ ಮುಂಚೂಣಿಯಲ್ಲಿದೆ. ಈ ಬಾರಿ ರೈತ ಸಂಘವನ್ನು ಬೆಂಬಲಿಸಿ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು. ಕ್ಷೇತ್ರಕ್ಕೆ ರೈತ ಪರ ಹೋರಾಟ ಮಾಡುವ ಹೊಸ ಮುಖವನ್ನು ವಿಧಾನಸಭೆಗೆ ಕಳುಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ನರಸರಾಜು, ತಾಲೂಕು ಅಧ್ಯಕ್ಷ ಕೆಂಪೇಗೌಡ, ಮರಿಲಿಂಗೇಗೌಡ, ಬಾಲಚಂದ್ರು, ಇಂಡುವಾಳು ಸಿದ್ದರಾಜು, ಹನಿಯಂಬಾಡಿ ನಾಗರಾಜು, ಬಡಗಲಪುರ ನಾಗೇಂದ್ರ, ಶಿವಳ್ಳಿ ಶಂಕರ್, ಸುರೇಶ್ ಇದ್ದರು.