ನಾಗಮಂಗಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯನ್ನು ತಾಲೂಕಿನ ಜನತೆ ಬೆಂಬಲಿಸಲಿದ್ದಾರೆ ಎಂದು ಕೆಜೆಪಿ ಮುಖಂಡ ಕೆ.ಕೃಷ್ಣಪ್ಪ ಶುಕ್ರವಾರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಾದ್ಯಂತ ಕೆಜೆಪಿ ಅಲೆ ಆರಂಭವಾಗಿದೆ. ತಾವು ಕೆಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿ ಮತದಾರರು ಕೆ.ಜೆ.ಪಿ.ಯನ್ನು ಬೆಂಬಲಿಸಲಿದ್ದಾರೆ ಎಂದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರವಧಿಯಲ್ಲಿ ಉತ್ತಮ ಯೋಜನೆ ನೀಡಲಾಗಿದೆ. ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಬಿ.ಎಸ್.ವೈ. ಆಡಳಿತವನ್ನು ನಾಡಿನ ಜನತೆ ಮತ್ತೊಮ್ಮೆ ಬಯಸಿದ್ದಾರೆ ಎಂದರು. ಏ.1ರಂದು ಪಟ್ಟಣದ ಬಿ.ಎಂ.ರಸ್ತೆಯಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟಿಸಲಾಗುವುದು. ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿ ಕೆಜೆಪಿ ಸೇರ್ಪಡೆಗೊಳ್ಳುವವರಿಗೆ ಮುಕ್ತ ಸ್ವಾಗತವಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಮುರಾದ್, ವಾಜೀದ್ ಪಾಷ, ನಂಜುಂಡೇಗೌಡ, ಬಲರಾಮೇಗೌಡ, ನವರಂಗ್, ಅಸ್ಲಂ ಪಾಷ ಅಮ್ಜದ್ ಪಾಷ, ತಾಜರ್ ಪಾಷ, ಶುಜಾಉದ್ದೀನ್, ಆಸೀಫ್ ಪಾಷ ಹಾಜರಿದ್ದರು.
ಮರಳಿಯಲ್ಲಿ ಇಂದಿನಿಂದ ಕಬ್ಬಡಿ
ಪಾಂಡವಪುರ: ತಾಲೂಕಿನ ಹಿರೇಮರಳಿ ಗ್ರಾಮದ ವೀರಭದ್ರೇಶ್ವರ ಕ್ರೀಡಾ ಸಮಿತಿ ಮತ್ತು ಮಂಡ್ಯ ಕ್ಷೇಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಮಾ.30 ಮತ್ತು 31 ರಂದು ಬಾಲಗಂಗಾಧರನಾಥ ಸ್ವಾಮೀಜಿ ಸ್ಮರಣಾರ್ಥವಾಗಿ ಮೈಸೂರು ವಿಭಾಗ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯವನ್ನು ಹಿರೇಮರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಹೆಚ್. ಅರ್. ಸುರೇಶ್ ತಿಳಿಸಿದ್ದಾರೆ. 1ನೇ ಬಹುಮಾನ 20 ಸಾವಿರ ನಗದು ಮತ್ತು ಪಾರಿತೋಷಕ, 2ನೇ ಬಹುಮಾನ 15ಸಾವಿರ ನಗದು, ಪಾರಿತೋಷಕ, 3ನೇ ಬಹುಮಾನ10 ಸಾವಿರ ನಗದು ಮತ್ತು ಪಾರಿತೋಷಕ, 4ನೇ ಬಹುಮಾನ 5 ಸಾವಿರ ನಗದು ಮತ್ತು ಪಾರಿತೋಷಕ. ಮಾ. 30 ಶನಿವಾರ ಸಂಜೆ 5.30 ಕ್ಕೆ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಕ್ಷೇತ್ರ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ಸಂಸದಎನ್. ಚಲುವರಾಯಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ಯಶೋಧಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ರೀಡೆ ಬಗ್ಗೆ ಹಿತ ನುಡಿಯನ್ನು ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ವಿಧಾನಪರಿಷತ್ ಸದಸ್ಯ ಅಶ್ವಥ್‌ನಾರಾಯಣ್ ಕೆಪಿಸಿಸಿ ಸದಸ್ಯರಾದ ಎಲ್.ಡಿ. ರವಿ ಕರ್ನಾಟಕ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರ ಹಾಗೂ ಜಿ.ಪಂ. ತಾ.ಪಂ. ಅಧ್ಯಕ್ಷರು ಸದಸ್ಯರು ಭಾಗವಹಿಸಲಿದ್ದಾರೆ.