ಮೈಸೂರು: ಇಂದಿನ ರಾಜಕೀಯದಲ್ಲಿ ನೈತಿಕ ಮೌಲ್ಯ ಮರೆಯಾಗಿದೆ ಎಂದು ಕುವೆಂಪು ವಿದ್ಯಾ ಪರಿಷತ್ತಿನ ಅಧ್ಯಕ್ಷ ಡಾ. ಡಿ.ಕೆ. ರಾಜೇಂದ್ರ ವಿಷಾದಿಸಿದರು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಹಾಗೂ ಕುವೆಂಪು ವಿದ್ಯಾ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಜಯಲಕ್ಷ್ಮೀಪುರಂನ ಸಂಸ್ಥೆಯ ವಿವೇಕಾನಂದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ದಿವಂಗತ ಕೆ.ವಿ. ಶಂಕರಗೌಡ ಸ್ಮಾರಕೋಪನ್ಯಾಸ ಮಾಲೆಯಲ್ಲಿ ಸಾಧಕರಾಗಿ ಕೆ.ವಿ. ಶಂಕರಗೌಡ ಎಂಬ ವಿಷಯ ಕುರಿತು ಅವರು ಮಾತನಾಡಿ, ಅವರನ್ನು ನಿತ್ಯಸಚಿವರೆಂದು ಪ್ರೊ. ದೇಜಗೌ ಕರೆಯುತ್ತಿದ್ದರು ಎಂದು ಅವರು ಸ್ಮರಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ನೀಲಗಿರಿ ತಳವಾರ ಇದ್ದರು. ಜಿ.ಎಸ್. ವೀಣಾ ನಿರೂಪಿಸಿದರು. ಉಪನ್ಯಾಸಕ ಡಾ.ಎಂ. ವೆಂಕಟೇಶ್ ಇದ್ದರು.
ಹಿಂಸೆಗಳ ನಿವಾರಣೆಗೆ ಬೌದ್ಧ ಧರ್ಮ ಒಂದೇ ಪರಿಹಾರ
ಮಂಡ್ಯ: ಜಗತ್ತಿನಲ್ಲಿ ನಡೆಯುವ ಎಲ್ಲಾ ಹಿಂಸೆಗಳ ನಿವಾರಣೆಗೆ ಬೌದ್ಧ ಧರ್ಮ ಒಂದೇ ಪರಿಹಾರ ಎಂದು ವಕೀಲ ಜೆ.ರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಗಾಂಧಿಭವನದಲ್ಲಿ ನಡೆದ ಎಕೆ 47 ಪಕ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬುದ್ಧ ಸಾರಿದ ಸುಳ್ಳು ಹೇಳದಿರುವುದು, ಪ್ರಾಣ ಹತ್ಯೆ, ಅತ್ಯಾಚಾರ, ಮದ್ಯಪಾನ, ಕಳ್ಳತನ ಪಂಚಶೀಲನ್ನು ತ್ಯಜಿಸಿ ಉತ್ತಮ ಜೀವನ ನಿರ್ವಹಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಡಿಎಸ್ಎಸ್ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ, ಜಿಪಂ ಮಾಜಿ ಅಧ್ಯಕ್ಷ ಬಿ. ಲಿಂಗಯ್ಯ, ರಾಮಕೃಷ್ಣ, ಹಿರಿಯ ವಕೀಲ ಎಸ್. ಎಲ್. ಪುಟ್ಟ ಮಾದಯ್ಯ, ಅಮ್ಮದ್ ಪಾಷ, ಥಾಮಸ್ ಬೆಂಜಮಿನ್, ಹಿರಿಯ ಪತ್ರಕರ್ತ ಕೆಂಪೇಗೌಡ ಉಪಸ್ಥಿತರಿದ್ದರು.
ಬಯಲು ಶೌಚಾಲಯದಿಂದ ದೌರ್ಜನ್ಯ ಹೆಚ್ಚಳ
ಮಂಡ್ಯ: ಬಯಲು ಶೌಚಾಲಯ ಬಳಕೆಯಿಂದ ಪರಿಸರ ಮಾಲಿನ್ಯದ ಜೊತೆಗೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಕೂಡ ಹೆಚ್ಚಳವಾಗಿದೆ ಎಂದು ಇಂಡುವಾಳು ಗ್ರಾಪಂ ಕಾರ್ಯದರ್ಶಿ ಕೆ.ಸಿ. ಪೂರ್ಣಿಮಾ ಆತಂಕ ವ್ಯಕ್ತಪಡಿಸಿದರು. ವಾರ್ತಾ ಇಲಾಖೆ ಮಂಡ್ಯ, ಇಂಡುವಾಳು ಗ್ರಾಮ ಪಂಚಾಯ್ತಿ, ಸಮರ್ಪಣಾ ಸಾಂಸ್ಕೃತಿಕ ಕಲಾ ಬಳಗದ ವತಿಯಿಂದ ಮೋಳೆಕೊಪ್ಪಲು ಗ್ರಾಮದಲ್ಲಿ ನಡೆದ ಪರಿಸರ ಸ್ವಚ್ಛತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊ ಬ್ಬರು ಮನೆಯಲ್ಲೆ ಶೌಚಾಲಯ ನಿರ್ಮಾಣ ಮಾಡಿಕೊಂಡರೆ ಹೆಣ್ಣು ಮಕ್ಕಳ ಗೌರವ ಹೆಚ್ಚಿಸುವ ಜೊತೆಗೆ ಮಹಿಳಾ ದೌರ್ಜನ್ಯ ಕಡಿಮೆ ಮಾಡಬಹುದು ಎಂದು ಹೇಳಿದರು. ಪಿಡಿಓ ಕೆ.ಸಿ. ಯೋಗೇಶ್ ಮಾತನಾಡಿದರು. ಗೌರಮ್ಮ, ಜಿ.ಎನ್.ಎಸ್. ಬಾಬು ಉಪಸ್ಥಿತರಿದ್ದರು. ಎನ್. ಶೇಖರ್, ಚಲುವರಾಜು ಹಾಜರಿದ್ದರು.
ಬೀದಿ ನಾಟಕ
ಮೋಳೆ ಕೊಪ್ಪಲು ಗ್ರಾಮದಲ್ಲಿ ಕಲಾವಿದರಿಂದ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಬೀದಿನಾಟಕ ಕಾರ್ಯಕ್ರಮ ನಡೆಯಿತು.
ರೈತರು ಡೈರಿಗೆ ಉತ್ತಮ ಗುಣಮಟ್ಟದ ಹಾಲು ಹಾಕಲಿ
ಪಾಂಡವಪುರ: ರೈತರು ಡೈರಿಗೆ ಉತ್ತಮ ಗುಣಮಟ್ಟದ ಹಾಲು ಹಾಕುವ ಮೂಲಕ ಮಂಡ್ಯ ಹಾಲು ಒಕ್ಕೂಟವನ್ನು ರಾಜ್ಯದಲ್ಲೇ ಮಾದರಿ ಹಾಲು ಒಕ್ಕೂಟವನ್ನಾಗಿ ಮಾಡಲು ಸಹಕರಿಸಬೇಕು ಎಂದು ಮನ್ನೂನ್ ನಿರ್ದೇಶಕ ಜಿ.ಇ. ರವಿಕುಮಾರ್ ತಿಳಿಸಿದರು. ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಯೂನಿಯನ್ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ರೈತರು ಡೈರಿಗಳಿಗೆ ಗುಣಮಟ್ಟದ ಹಾಲು ಪೂರೈಸುವ ಮೂಲಕ ಓಕ್ಕೂಟದ ಪ್ರಗತಿಗೆ ಸಹಕರಿಸಿ ಎಂದು ಮನವಿ ಮಾಡಿದರು. ಎಚ್.ಎಂ. ಸೋಮೇಗೌಡ, ಉಮೇಶ್, ಎಚ್.ಜೆ.ಜಗದೀಶ್, ಉಪ ವ್ಯವಸ್ಥಾಪಕ ಡಾ. ಶ್ಯಾಮಸುಂದರ್, ಸಹಾಯಕ ವ್ಯವಸ್ಥಾಪಕ ಟಿ. ದೇಶರಾಜು ಉಪಸ್ಥಿತರಿದ್ದರು.
ಸನ್ಮಾನ
ಪಾಂಡವಪುರ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮನ್ಮೂಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ಮತ್ತು ನಿರ್ದೇಶಕ ಜಿ.ಇ. ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾಂಪೌಂಡ್ ಕಾಮಗಾರಿಗೆ ಶಂಕುಸ್ಥಾಪನೆ ನಾಳೆ
ನಾಗಮಂಗಲ: ಪಟ್ಟಣದ ದೇವಲಾಪುರ ಹ್ಯಾಂಡ್ಪೋಸ್ಟ್ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಆ.4 ರಂದು ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿ ನಿಲಯ ನಿರ್ಮಾಣ ಮತ್ತು ಕಾಲೇಜು ಕಾಂಪೌಂಡ್ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಸಮಾರಂಭವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಶಂಕುಸ್ಥಾಪನಾ ಫಲಕ ಉದ್ಘಾಟಿಸುವರು. ಶಾಸಕ ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸುವರು. ಸಂಸದ ಸಿ.ಎಸ್.ಪುಟ್ಟರಾಜು, ಮಂಜುಳಾ ಪರಮೇಶ್, ತಾ.ಪಂ. ಅಧ್ಯಕ್ಷ ಮೂಡ್ಲೀಗೌಡ, ಕರಡಹಳ್ಳಿ ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮೀ ಬಸವೇಗೌಡ ಪಾಲ್ಗೊಳ್ಳುವರು ಎಂದು ಪ್ರಾಂಶುಪಾಲ ಗಂಗಾರಾಮ್ ತಿಳಿಸಿದ್ದಾರೆ.
ಸುಸಜ್ಜಿತ ರಂಗಮಂದಿರ ನಿರ್ಮಾಣ: ಶಾಸಕ
ನಾಗಮಂಗಲ: ತಾಲೂಕಿನ ಕೇಂದ್ರ ಸ್ಥಾನದಲ್ಲಿ 3 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಲು ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಎನ್.ಚಲುವರಾಯಸ್ವಾಮಿ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಹಿಂಬದಿಯಲ್ಲಿ ಸ್ಥಳ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಜಾನಪದ, ಸಾಹಿತ್ಯ ಸೇರಿದಂತೆ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಬಿಎಂಶ್ರೀ, ಜೀಶಂಪ, ಡಾ. ಎಚ್.ಎಲ್. ನಾಗೇಗೌಡ, ಹ.ಕ.ರಾಜೇಗೌಡ, ಕ.ರಾ.ಕೃಷ್ಣಸ್ವಾಮಿಯವರಂತಹ ದಿಗ್ಗಜರು ಜನಿಸಿರುವ ಕೇಂದ್ರ ಸ್ಥಾನದಲ್ಲಿ ರಂಗಮಂದಿರ ನಿರ್ಮಾಣದ ಅವಶ್ಯಕತೆ ಇದೆ ಎಂದರು. ಎಸ್.ಎಚ್. ರಮಾನಂದ್, ಮಧು, ನಟರಾಜ್, ಎಂ.ಡಿ.ಸಿ.ಸಿ. ಬಿ. ರಾಜೇಗೌಡ, ಅನ್ಸರ್ ಪಾಷ ಹಾಜರಿದ್ದರು.
ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿ: ಮಂಜುಳಾ
ಶ್ರೀರಂಗಪಟ್ಟಣ: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಂಡು ದೈಹಿಕವಾಗಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕು ಎಂದು ರಾಜ್ಯ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಮಂಜುಳಾ ಹೇಳಿದರು. ತಾಲೂಕಿನ ಗೌರಿಪುರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕೆ.ಶೆಟ್ಟಹಳ್ಳಿ ಹೋಬಳಿಯ ಕೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಟೋಟಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರೆ ಶಾರೀರಿಕವಾಗಿ ಮತ್ತು ಮಾನಸಿಕರಾಗಿ ಸಿದ್ಧರಾಗಿ ಯಾವಾಗಲೂ ಕ್ರಿಯಾಶೀಲರಾಗಿ ಚಟುವಟಿಕೆಯಿಂದ ಇರುತ್ತಾರೆ ಎಂದರು. ಬಿಇಒ ಹೊನ್ನರಾಜು ಕ್ರೀಡಾಪಟುಗಳಿಗೆ ಪ್ರವನ ಬೋಧಿಸಿದರು. ಗ್ರಾಪಂ ಸದಸ್ಯ ಗವಿಗೌಡ, ಮಹದೇವು, ಶಾಲೆಯ ಮುಖ್ಯ ಶಿಕ್ಷಕ ಸಿಂಗ್ರಿಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ: ಶ್ರೀಧರಮೂರ್ತಿ
ಕೆ.ಆರ್.ಪೇಟೆ: ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ತಹಶೀಲ್ದಾರ್ ಶ್ರೀಧರಮೂರ್ತಿ ಮನವಿ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, ತಾಲೂಕಿನ ಜನತೆಯ ಸಮಸ್ಯೆಗಳನ್ನು ಅರಿತು ಜನಪರವಾಗಿ ಕೆಲಸ ಮಾಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಿದೆ ಎಂದರು. ಯೋಜನೆಗಳ ಫಲಾನುಭವಿಗಳು ತಾಲೂಕು ಕಚೇರಿಯಲ್ಲಿ ಅರ್ಜಿಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರು ಹಾಗೂ ಜನಸಾಮಾನ್ಯರ ಕೆಲಸ- ಕಾರ್ಯಗಳನ್ನು ಮಾಡಿಕೊಡಲು ಸತಾಯಿಸದೇ ನಿಗಧಿತ ಅವಧಿಯೊಳಗೆ ಕೆಲಸ ಮಾಡಿಕೊಡಿ, ಬಡಜನತೆಯ ಸೇವೆಯಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ತಾಪಂ ಇಒ ಎನ್.ಕೆಂಚಪ್ಪ, ವನಜಾಕ್ಷಿ, ವಿವಿಧ ಇಲಾಖೆ ಅಧಿಕಾರಿಗಳಾದ ಅಣ್ಣಯ್ಯ, ರಂಗನಾಥ್, ದುರ್ಗಪ್ಪ, ಕಿಜರ್ ಅಹಮದ್, ಸುಧಾಮಣಿ, ನಂದಕುಮಾರ್, ರಾಧಾಕೃಷ್ಣ, ಬಸವರಾಜು, ಚಂದ್ರಶೇಖರ್ ಇದ್ದರು.
ಅಧಿಕಾರಿಗಳ ಸಭೆ
ಕೆ.ಆರ್.ಪೇಟೆ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ಸರ್ವೇ ಇಲಾಖೆಗೆ ಬಂದಿರುವ ಅರ್ಜಿ ಶೀಘ್ರ ವಿಲೇವಾರಿ ಮಾಡಿ
ಶ್ರೀರಂಗಪಟ್ಟಣ: ಸರ್ವೇ ಇಲಾಖೆಗೆ ಬಂದಿರುವ ಅರ್ಜಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಿ ರೈತರ ಕೆಲಸಕ್ಕೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಹೊರವಲಯದಲ್ಲಿರುವ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಇಲಾಖೆಗಳ ಮತ್ತು ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ರೈತ ಜಮೀನು ಸೇರಿದಂತೆ ಮತ್ತಿತರ ಭೂ ದಾಖಲಾತಿಗಾಗಿ ಇಲಾಖೆ ಬರುತ್ತಾರೆ. ರೈತರಿಗೆ ವಿಳಂಬ ಮಾಡುತ್ತಿರುವ ಬಗ್ಗೆ ಸರ್ವೇ ಇಲಾಖೆಯ ಕಾರ್ಯ ವೈಖರಿಗಳ ಬಗ್ಗೆ ಹಲವಾರು ದೂರುಗಳು ಬಂದಿವೆ ಎಂದರು. ತಹಸೀಲ್ದಾರ್ ಮಲ್ಲಿಕಾರ್ಜುನ, ತಾಪಂ ಇಒ ಅಮರ್ನಾಥ್, ಲೋಕೋಪಯೋಗಿಇಲಾಖೆಯ ಎಇಇ ಚಂದ್ರಪ್ಪ ಉಪಸ್ಥಿತರಿದ್ದರು.
ವಿಶೇಷ ದಾಖಲು ಆಂದೋಲನಕ್ಕೆ ಚಾಲನೆ
ಮಳವಳ್ಳಿ: ಪ್ರಸ್ತುತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರಲು ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿಶೇಷ ದಾಖಲಾತಿ ಆಂದೋಲನಕ್ಕೆ ತಾಲೂಕು ಪಂಚಾಯತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಮಂಡ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಹಾಗೂ ಸರ್ವ ಶಿಕ್ಷಣ ಅಭಿಯಾನ ಮಂಡ್ಯ ಸಂಯುಕ್ತ ಆಶ್ರಯದಲ್ಲಿ ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯೋಜಿಸಿದ್ದ ಕಾರ್ಯಕ್ರಮದ ಜಾಥಕ್ಕೆ ಚಾಲನೆ ನೀಡಿದ ಅವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳೊಂದಿಗೆ ಪಥಸಂಚಲನ ನಡೆಸಿ ದಾರಿಯುದ್ದಕ್ಕೂ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಘೋಷಣೆಗಳನ್ನು ಕೂಗಿದರು. ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಪುರಸಭಾಧ್ಯಕ್ಷೆ ಸರೋಜಮ್ಮ ಮುತ್ತುರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಂ ರಾಮು, ರಾಜ್ಯ ಸರ್ಕಾರಿ ನೌಕರರ ಸಂಘಧ ಅಧ್ಯಕ್ಷ ಎಂ.ಮಹೇಶ್, ಸಿಆರ್ಪಿ ಚಂದ್ರಶೇಖರಾಚಾರಿ, ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹಾಗೂ ತಾಲೂಕು ವಿವಿಧ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಆಂದೋಲನಕ್ಕೆ ಚಾಲನೆ
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ತರುವ ವಿಶೇಷ ದಾಖಲಾತಿ ಆಂದೋಲನಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಚಾಲನೆ ನೀಡಿದರು.
ದೌರ್ಜನ್ಯ; ಶಾಂತಿ ಕಾಲೇಜಿನ ವಿದ್ಯಾರ್ಥಿಗಳ ಆಕ್ರೋಶ
ಮಳವಳ್ಳಿ: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಪಟ್ಟಣದ ಶಾಂತಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯಾಚಾರ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬೆಳಿಗ್ಗೆ ಎಂದಿನಂತೆ ತರಗತಿಗಳನ್ನು ಮುಗಿಸಿಕೊಂಡು ಮಧ್ಯಾಹ್ನ 1ರ ಸುಮಾರಿಗೆ ಜಮಾವಣೆಗೊಂಡ ಕಾಲೇಜಿನ ವಿದ್ಯಾರ್ಥಿಗಳು ಮೈಸೂರು ರಸ್ತೆಯಲ್ಲಿ ದಾರಿಯುದ್ದಕ್ಕೂ ಅತ್ಯಾಚಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪಟ್ಟಣದ ಮೈಸೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಮತ್ತು ಮಕ್ಕಳ ಮೇಲೆ ಈ ರೀತಿಯ ಅತ್ಯಾಚಾರ ದೌರ್ಜನ್ಯಗಳು, ಅಮಾನವೀಯ ಕೃತ್ಯಗಳು ನಿರಂತರವಾಗಿ ಸಾಗಿದ್ದು ಕೂಡಲೆ ರಾಜ್ಯ ಸರ್ಕಾರ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವಂತೆ ದಂಡಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದೌರ್ಜನ್ಯಕ್ಕೆ ವಿರೋಧ
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಪಟ್ಟಣದ ಶಾಂತಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಪಡುವಲ ಆಂಜನೇಯಸ್ವಾಮಿ ದೇವರ ಸಂಭ್ರಮದ ಮೆರವಣಿಗೆ
ನಾಗಮಂಗಲ: ಪ್ರಥಮ ಶ್ರಾವಣ ಶನಿವಾರದ ಅಂಗವಾಗಿ ಪಟ್ಟಣದ ಹೊರವಲಯದಲ್ಲಿರುವ ಪಡುವಲ ಆಂಜನೇಯಸ್ವಾಮಿ ದೇವರ ಉತ್ಸವ ಮೆರವಣಿಗೆ ಹಾಗೂ ಕಲ್ಯಾಣ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಪಟ್ಟಣದಲ್ಲಿರುವ ಕಲ್ಯಾಣವೆಂಕರಮಣಸ್ವಾಮಿ ದೇಗುಲದಲ್ಲಿ ಸೂರ್ಯಹೋಮ, ವೆಂಕಟೇಶ್ವರ ಮೂಲಹೋಮ, ಮಂಗಳ ಅಷ್ಠಕಹೋಮ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು. ವಾಸವಿ ಭಜನಾ ಮಂಡಳಿ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಅನ್ನಸಂತರ್ಪಣೆ ಕಾರ್ಯ ನೆರವೇರಿತು. ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ವರ್ತಕರ ಸಮಸ್ಯೆಗಳನ್ನು ಆಲಿಸಲು ಪೊಲೀಸರ ಸಭೆ
ಭಾರತೀನಗರ: ವರ್ತಕರ ಸಮಸ್ಯೆಗಳನ್ನು ಆಲಿಸಲು ಡಿವೈಎಸ್ಪಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ವರ್ತಕರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ವರ್ತಕರು ಹಲವಾರು ಸಮಸ್ಯೆಗಳನ್ನು ತೋಡಿಕೊಂಡರು. ಭಾರತೀನಗರದಲ್ಲಿ ಶೌಚಾಲಯ ಸಮಸ್ಯೆ ಹೆಚ್ಚಾಗುತ್ತಿದೆ. ರಸ್ತೆಗಳಿಗೆ ದಿಬ್ಬವನ್ನು ಹಾಕಬೇಕು. ಮಾಂಸದ ಅಂಗಡಿಗಳಿಂದ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಮಾಂಸ ಮಾರಾಟಕ್ಕೆ ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕು. ಟ್ರಾಫಿಕ್ ಸಮಸ್ಯೆ ನಿವಾರಿಸಬೇಕೆಂದು ಮನವಿ ಮಾಡಿದರು. ಡಿವೈಎಸ್ಪಿ ಶಿವಕುಮಾರ್ ಮಾತನಾಡಿ, ಸಾರ್ವಜನಿಕರ ಭದ್ರತೆಗಾಗಿ ಪೊಲೀಸ್ ಇಲಾಖೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಯಾವ ಸಂದರ್ಭದಲ್ಲಾದರೂ ಕೂಡ ಸಮಸ್ಯೆ ಕಂಡುಬಂದರೆ ದೂರವಾಣಿ ಮೂಲಕ ತಮ್ಮ ಇಲಾಖೆಗೆ ತಿಳಿಸಿದರೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಂಗಡಿಗಳ ಮುಂದೆ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಶಾಂತಿ ಸುವ್ಯವಸ್ಥೆಗೆ ಪೊಲೀಸರ ಜೊತೆ ಕೈಜೋಡಿಸಬೇಕೆಂದು ತಿಳಿಸಿದರು. ವೆಂಕಟೇಶ್, ಎಸ್ಐ ಗೋಪಾಲ್ ಸೇರಿದಂತೆ ವರ್ತಕರು ಉಪಸ್ಥಿತರಿದ್ದರು.