ಮನುಕುಲದ ಆದಿಕಾವ್ಯ

Updated on: 

ಮಂಡ್ಯ:  ಚುಟುಕು ಸಾಹಿತ್ಯವು ಮನುಕುಲದ ಆದಿಕಾವ್ಯವಾಗಿದ್ದು, ಬದುಕಿಗೆ ಲಾಲಿತ್ಯ ನೀಡುತ್ತದೆ ಎಂದು ಸಾಹಿತಿ ಡಾ.ಎಂ.ಜಿ.ಆರ್.ಅರಸ್ ಮಂಗಳವಾರ ಹೇಳಿದರು. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ನಾಲ್ಕನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಅವರು, ಮನುಷ್ಯ ಎಂದು ಜನ್ಮ ತಾಳಿದನೋ ಅಂದೆ ಚುಟುಕು ಸಾಹಿತ್ಯ ಉಗಮವಾಗಿದೆ ಎಂದರು. ಕಾಲದ ಮಿತಿಯಿಂದ ಸಂಕ್ಷಿಪ್ತವಾಗಿ, ನಿಗೂಢವಾಗಿ, ಅರ್ಥಗರ್ಭಿತವಾಗಿ ಎಲ್ಲವನ್ನೂ ಅಡಕಗೊಳಿಸಿ ಹೇಳುವ ಕಲೆಯೇ ಚುಟುಕು. ಸರ್ವಜ್ಞನನ ಒಂದೊಂದು ತ್ರಿಪದಿಗಳು ಚುಟುಕು ಸಾಹಿತ್ಯಕ್ಕೆ ಕೈ ಮರವಾಗಿದೆ. ಅದರಲ್ಲಿ ನೀತಿ ಇದೆ. ತತ್ವವಿದೆ. ವಿಡಂಬನೆ ಇದೆ. ಜೊತೆಗೆ ಸುಭಾಷಿತಗಳು ಆಗಿವೆ. ಉಪಮಾನ, ರೂಪಕ ದೃಷ್ಟಾಂತಗಳು ದಾರಿದೀಪವಾಗಿದೆ ಎಂದು ತಿಳಿಸಿದರು. . ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಮಾತನಾಡಿ, ಸಮಾಜದಲ್ಲಿ ಶಾಂತಿ ಸೌಹಾರ್ದಯುತ ವಾತಾವರಣ ಮಾಯವಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಾಕಿಕೊಳ್ಳಬೇಕಾಗಿದೆ ಎಂದರು. ವಿದ್ಯಾವಂತರಲ್ಲಿ ನಾನು ಎಂಬ ಮನೋಭಾವನೆ ಹೆಚ್ಚಾಗಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಪ್ರತಿ ಕ್ಷೇತ್ರದ ಬಗೆಗೆ ಅನಿಸಿಕೆ ವ್ಯಕ್ತಪಡಿಸುವ ಸಾಹಿತಿಗಳು ಸುಂದರ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಲೇಖನ ಕೃಷಿ ಮಾಡಬೇಕಿದೆ ಎಂದು ಸಲಹೆ ನೀಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ತಾಲೂಕು ಪಂಚಾಯ್ತಿ ಅಧ್ಯಕ್ಷ ಟಿ. ಶಂಕರೇಗೌಡ, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ವಿ.ನಾಗರಾಜು, ನಗರಸಭೆ ಸದಸ್ಯ ಎಸ್.ಕೆ. ಶಿವಪ್ರಕಾಶ್ಬಾಬು, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ. ಲೋಕೇಶ್, ರತ್ನ ಹಾಲಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com