ಮಂಡ್ಯ: ಸಮಾಜಕ್ಕೆ ಬಹುದೊಡ್ಡ ಸವಾಲಾಗಿರುವ ಘನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ ಅವಶ್ಯಕವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಧರ್ ಹೇಳಿದರು.
ನಗರದ ಮರೀಗೌಡ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ, ಕೃಷಿಕ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ನಡೆದ ಸ್ವಚ್ಛತಾ ಆಂದೋಲನ, ದೈವಿವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದೆ. ತಾತ್ಕಾಲಿಕವಾದ ವಿಧಾನಗಳನ್ನು ಬಿಟ್ಟು ದೀರ್ಘಾವಧಿಯ ಪರಿಹಾರಕ್ಕಾಗಿ ವೈಜ್ಞಾನಿಕ ಚರ್ಚೆಯನ್ನು ಆರಂಭಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮರ್ಥ ನಿರ್ವಹಣೆ ಸಾಧ್ಯ: ಹೆಚ್ಚಿನ ಅಧ್ಯಯನದಿಂದ ತ್ಯಾಜ್ಯದ ಸಮರ್ಥ ನಿರ್ವಹಣೆ ಸಾಧ್ಯವಿದೆ. ನದಿ, ಕೆರೆಗಳಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ತಡೆಗಟ್ಟಬಹುದಾದ ಕ್ರಮಗಳ ಬಗ್ಗೆ ಯೋಜನೆ ರೂಪಿಸಬೇಕು. ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಪರಿಸರ ವಿಜ್ಞಾನದ ಅರಿವನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಸಮಗ್ರವಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.
ಕೃಷಿಕ ಲಯನ್ಸ್ ಸಂಸ್ಥೆ ವಲಯಾಧ್ಯಕ್ಷ ಕೆ.ಟಿ. ಹನುಮಂತು ಮಾತನಾಡಿ, ತ್ಯಾಜ್ಯ ನಿರ್ವಹಣೆ ಕುರಿತು ನಾಗರಿಕರು, ವಿದ್ಯಾರ್ಥಿಗಳು ಚಿಂತನೆ ನಡೆಸಬೇಕಾಗಿದೆ. ದೂರದೃಷ್ಟಿ ಇಟ್ಟುಕೊಂಡು ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ಹೇಳಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ನೆಲ, ಜಲ, ಗಾಳಿ, ಗಿಡ, ಮರ, ಪ್ರಾಣಿ, ಪಕ್ಷಿ, ಕೀಟಗಳನ್ನು ಗುರುತಿಸುತ್ತಾ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಕಾರ್ಯಕ್ರಮವನ್ನು ಮೂರನೇ ಬಾರಿಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಮುಂದಿನ ಪೀಳಿಗೆ ಹೆಚ್ಚು ಆನಂದದಿಂದ ಬದುಕುವಂತೆ ನೈಸರ್ಗಿಕ ಸಂಪತ್ತನ್ನು ಉಳಿಸಲು ಪ್ರಯತ್ನಗಳು ಸಾಗಿವೆ ಎಂದರು.
ಪ್ರಸ್ತುತ ದಿನಗಳಲ್ಲಿ ಪರಿಸರ ಸಂರಕ್ಷಣೆಗೆ ಶಿಕ್ಷಕರ ಪಾತ್ರ ಗಣನೀಯವಾಗಿದೆ. ಶಿಕ್ಷಕರ ಮೌಲ್ಯಗಳಲ್ಲಿ ಬದಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರು ಉತ್ತಮ ಕಾರ್ಯತತ್ಪರತೆ ಬೆಳೆಸಿಕೊಂಡು ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ನಗರಸಭೆ ಸದಸ್ಯ ಲೋಕೇಶ್, ಎಚ್.ಡಿ. ದೇವೇಗೌಡ ಅಭಿಮಾನಿ ಸಂಘದ ಅಧ್ಯಕ್ಷ ಮೊಳ್ಳೇಗೌಡ, ಕಾಳೇಗೌಡ ಪ್ರೌಢಶಾಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.