ಮಂಡ್ಯ: ಈ ಹಿಂದೆ ಎರಡು ಬಾರಿ ಶಂಕುಸ್ಥಾಪನೆಯಾದರೂಯಾವುದೇ ಕಾಮಗಾರಿ ಆರಂಭವಾಗದೇ ನನೆಗುದಿಗೆ ಬಿದ್ದಿದ್ದ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ಐದು ಬೃಹತ್ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆ ಜಿಲ್ಲಾ ಮಂತ್ರಿ ಅಂಬರೀಷ್ ಶನಿವಾರ ಪುನಃ ಶಂಕುಸ್ಥಾಪನೆ ಮಾಡಿದರು.
ತೂಬಿನಕೆರೆ ಹೆಲಿಪ್ಯಾಡ್ ಜಾಗದಲ್ಲಿ ನಡೆದ ಸಮಾರಂಭದಲ್ಲಿ ಕೆರೆಗಳಿಗೆ ನೀರು ತುಂಬಿಸುವ 18 ಕೋಟಿ ರು.ಗಳ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಅಂಬರೀಷ್, ಐದು ಕೆರೆಗಳು ನೀರಿನಿಂದ ಭರ್ತಿಯಾಗಿ ಸುತ್ತ ಮುತ್ತಲಿನ 28 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಬೆಳೆಗಳಿಗೆ ಸಾಕಷ್ಟು ನೀರು ಸಿಗಲಿದೆ ಎಂದರು. ಜಕ್ಕನಹಳ್ಷಿ ಆಲಗೂಡು, ಎಲೆಚಾಕನಹಳ್ಳಿ, ಕಾಳೇನಹಳ್ಳಿ, ರಾಗಿ ಮುದ್ದನಹಳ್ಳಿ, ಉರಮಾರಕಸಲಗೆರೆ ಗ್ರಾಮಗಳ ಕೆರೆಗಳನ್ನು ಎತ ನೀರಾವರಿ ಮೂಲಕ ತುಂಬಿಸುವ ನಿರ್ಧಾರ ಮಾಡಲಾಗಿದೆ. ಈ ಯೋಜನೆಯು ಮುಂದಿನ 9 ತಿಂಗಳಲ್ಲಿ ಮುಗಿಸುವ ಕಾಲ ಮಿತಿ ಹಾಕಿಕೊಳ್ಳಲಾಗಿದೆ. ಈ ಯೋಜನೆಯು ಪೂರ್ಣಗೊಂಡರೆ ಲೋಕಪಾವನಿ ನದಿಯಿಂದ 18.5 ಕ್ಯುಸೆಕ್ ನೀರು ನದಿಗಳಿಗೆ ಸಿಗಲಿದೆ ಎಂದು ಹೇಳಿದರು.
ಶತಃಸಿದ್ಧ: ತೂಬಿನಕೆರೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಮಂಡ್ಯದ ನೂತನ ಟೌನ್ ಶಿಪ್ ಯೋಜನೆಯಿಂದ ರೈತರು ಭೂಮಿ ಕೊಡುವುದಿಲ್ಲ ಎಂತಾದರೆ ನಾನು ಈ ಯೋಜನೆ ಕೈ ಬಿಡುವುದು ಶತಃಸಿದ್ಧ. ಆದರೆ ರೈತರಿಗೆ ಅನ್ಯಾಯ ಮಾಡಿ ನಾವು ಉಪ ನಗರ ಸ್ಥಾಪನೆ ಮಾಡುವ ಯಾವುದೇ ಉದ್ದೇಶ ನನ್ನ ಬಳಿ ಇಲ್ಲ ಎಂದರು.
ಸೈಟ್ ಕೂಡ ಕೊಡುತ್ತೇವೆ: ರೈತರಿಗೆ ಯೋಗ್ಯ ಬೆಲೆ ಕೊಡುತ್ತೇವೆ. ಭೂಮಿ ಕಳೆದುಕೊಂಡವರಿಗೆ ಸೈಟ್ ಕೂಡ ಕೊಡುತ್ತೇವೆ. ಇದರಿಂದ ಮುಂದಿನ ದಿನಗಳಲ್ಲಿ ಬಹಳ ಲಾಭಗಳು ಸುತ್ತಮುತ್ತಲಿನ ಹಳ್ಳಿಗಳಿಗೆ ಆಗಲಿದೆ. ಇಷ್ಟಾದರೂ ನಮಗೆ ಅನ್ಯಾಯವಾಗುತ್ತದೆ ಎಂದು ಹೇಳಿದರೆ ನಾವು ರೈತರನ್ನು ಪೀಡಿಸಿ ಟೌನ್ಶಿಫ್ ಮಾಡುವ ಆಲೋಚನೆ ಮಾಡುವುದಿಲ್ಲ. ರೈತರ ಮನ ಒಲಿಸಿದ ನಂತರವೇ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ಅಡ್ಡಿ ಆಗದು: ಸಮಾರಂಭದಲ್ಲಿ ಮಾತನಾಡಿದ ಶಾಸಕ ರಮೇಶ್ಬಾಬು ಬಂಡಿಸಿದ್ದೇಗೌಡ, ಏತ ನೀರಾವರಿ ಯೋಜನೆಗೆ ಸಚಿವ ಅಂಬರೀಷ್ ಶಂಕುಸ್ಥಾಪನೆ ಮಾಡಿರುವುದರಿಂದ ಮುಂದಿನ ಕಾಮಗಾರಿಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಯೋಜನೆಗೆ ಅಗತ್ಯ ಹಣಕಾಸಿನ ನೆರವು ಸಿಗಲಿದೆ. ಮಂಡ್ಯ ಉಪ ನಗರ ಉದ್ದೇಶಕೈ ಬಿಡಬೇಕು ಎಂದು ಮನವಿ ಮಾಡಿದರು. ತಾಪಂ ಸದಸ್ಯ ಹೇಮಲತಾ ಬಸವರಾಜು ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, ನೀರಾವರಿ ಮುಖ್ಯ ಎಂಜನಿಯರ್ ಶಿವಶಂಕರ್, ಅಧೀಕ್ಷಕ ಎಂಜನಿಯರ್ ಶಂಕರಗೌಡ ಹಾಗೂ ಕೆ ಆರ್ಎಸ್ ಇಇ ಶ್ರೀರಂಗರಾಜು ಉಪಸ್ಥಿತರಿದ್ದರು.