ಮಳವಳ್ಳಿ ಪಟ್ಟಣದ ನ್ಯಾಯಾಲಗಳ ಸಂಕಿರಣ ಸೇರಿದಂತೆ ಅರಣ್ಯ ಇಲಾಖೆ, ಐಟಿಐ ಕಾಲೇಜು ಹಾಗೂ ತಾಲೂಕು ಹೊರ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ಅಂಬೇಡ್ಕರ್ ಭವನದ ಮುಂದಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆ ಬಂದಾಗಲೆಲ್ಲ ಈ ರಸ್ತೆಯಲ್ಲಿ ಸಂಚಾರ ಮಾಡುವುದು ತೀರಾ ಕಷ್ಟಕರವಾಗಿದ್ದು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ಎಲ್ಲಿ ತಾವು ಜಾರಿ ಬೀಳುವೆವೋ ಎಂದು ಹೆದರಿ ತಮ್ಮ ವಾಹನಗಳನ್ನು ತಳ್ಳಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.ನ್ಯಾಯಾಲಕ್ಕೆ ಹಾಗೂ ಕ್ರೀಡಾಂಗಣಕ್ಕೆ ಹೊಂದುಕೊಂಡಿರುವ ಅರಣ್ಯ ಇಲಾಖೆ, ಐಟಿಐ ಕಾಲೇಜು, ಅಂಬೇಡ್ಕರ್ ಭವನಕ್ಕೆ ಬರಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದ ರಸ್ತೆ ಬಿಟ್ಟರೆ ಈ ರಸ್ತೆಯಲ್ಲಿಯೆ ಸಂಚರಿಸಬೇಕು ಹಾಗೂ ಇನ್ನು ಅಲ್ಲಿನ ವಾಸಿಗಳು ಬೇರೆಡೆಗೆ ಹೋಗಬೇಕೆಂದರೆ ಈ ರಸ್ತೆಯಲ್ಲಿಯೆ ಬರಬೇಕು. ಬೇರ್ಯಾವ ಪರ್ಯಾಯ ಮಾರ್ಗವಿಲ್ಲ. ಅಲ್ಲದೆ, ಈ ನಿಟ್ಟಿನಲ್ಲಿ ಸಾರ್ವಜನಿಕರು ಮನೆಯಿಂದ ಹೊರಗಡೆ ಬರಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕರು ಆ ಭಾಗದ ಪುರಸಭಾ ಸದಸ್ಯರುಗಳಿಗೆ ತಿಳಿಸಿದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುವುದರಿಂದ ಈ ರಸ್ತೆಯನ್ನು ಸರಿಪಡಿಸಿ ಸಂಚಾರದಲ್ಲಿ ಉಂಟಾಗುವ ತೊಂದರೆಯನ್ನು ಸರಿಪಡಿಸಬೇಕು.
- ಮನೋಜ್ ಗೌಡ, ಮಳವಳ್ಳಿ
ಕೋತಿಗಳ ಕಾಟಕ್ಕೆ ಕ್ರಮ ಕೈಗೊಳ್ಳಿ
ಮಳವಳ್ಳಿ ಪಟ್ಟಣದ ಪ್ರತಿಯೊಂದು ಬಡಾವಣೆಗಳಲ್ಲಿ ಕೋತಿಗಳ ಹಾವಳಿ ವಿಪರೀತವಾಗಿದೆ. ವಿವಿಧ ಕಂಪನಿಗಳ ಮೊಬೈಲ್ ಟವರ್ಗಳನ್ನು ಸ್ಥಾಪಿಸಿದ್ದು, ಆ ಟವರ್ಗಳನ್ನೇ ಕೋತಿಗಳಿಗೆ ಮನೆ ಮಾಡಿಕೊಟ್ಟಂತಾಗಿದೆ. ಈ ಬಗ್ಗೆ ಪುರಸಭೆ ಮತ್ತು ವಾರ್ಡ್ಗಳ ಸದಸ್ಯರುಗಳ ಜಾಣ ಕುರುಡು, ಜಾಣ ಕಿವುಡು ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರತಿನಿತ್ಯ ಹಿಡಿಶಾಪ ಹಾಕುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.ಪಟ್ಟಣದ ಎನ್ಇಎಸ್ ಬಡಾವಣೆ, ಅನಿತಾ ಕಾನ್ವೆಂಟ್ ರಸ್ತೆ, ಶೆಟ್ಟಹಳ್ಳಿ ಓಣಿ, ವಡ್ಡರ ಕಾಲೊನಿ, ವಿನಾಯಕನಗರ, ಸಿದ್ಧಾರ್ಥ ನಗರ, ಅಶೋಕ ನಗರ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದು, ಸಾರ್ವಜನಿಕರು ಮನೆಯಿಂದ ಹೊರಗಡೆ ಬರಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕರು ಆ ಭಾಗದ ಪುರಸಭಾ ಸದಸ್ಯರುಗಳಿಗೆ ತಿಳಿಸಿದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.ಪಟ್ಟಣದಲ್ಲಿ ಕೋತಿಗಳ ಹಾವಳಿಯಿಂದ ತತ್ತರಿಸುವಂತಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕೋತಿಗಳನ್ನು ಹಿಡಿದು ಕಾಡಿನೊಳಕ್ಕೆ ಸ್ಥಳಾಂತರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೋತಿಗಳ ಹಾವಳಿಯನ್ನು ತಪ್ಪಿಸದಿದ್ದಲ್ಲಿ ಆಯಾ ವಾರ್ಡ್ನ ಸದಸ್ಯರ ಮನೆಗಳ ಮುಂದೆ ಧರಣಿಯನ್ನು ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ತಕ್ಷಣ ಕ್ರಮವನ್ನು ಜರುಗಿಸಿ ನೆಮ್ಮದಿ ಕಲ್ಪಿಸಿಕೊಡುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.
-ಸಾರ್ವಜನಿಕರು, ಮಳವಳ್ಳಿ.
ಬೀದಿ ನಾಯಿ ಹಾವಳಿ ತಪ್ಪಿಸಿ
ಮಳವಳ್ಳಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ನಾಗರಿಕರು ಸೇರಿದಂತೆ ಶಾಲಾ ಮಕ್ಕಳು ಆತಂಕದಿಂದ ಜೀವನ ಸಾಗಿಸುವಂತಾಗಿದೆ.ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿರುವ ಮಳವಳ್ಳಿ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವಂತೆ ಮೂಲಭೂತ ಸೌಲಭ್ಯಗಳ ಕೊರತೆಯೂ ಹೆಚ್ಚಾಗುತ್ತಿದೆ. ಆದರೆ, ಅತಂಕದ ಸಂಗತಿ ಎಂದರೆ ಜನಸಂಖ್ಯೆಯನ್ನು ಮೀರಿಸುವಂತೆ ಬೆಳೆಯುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ನಾಗರಿಕರು ಭಯದ ನೆರಳಲ್ಲಿ ಓಡಾಡಬೇಕಾಗಿದೆ. ಹೊಸ ಬಡಾವಣೆಗಳಲ್ಲಿ ವಾಸಿಸುತ್ತಿರುವ ಜನರು ತಮ್ಮ ಮಕ್ಕಳನ್ನು ಒಂಟಿಯಾಗಿ ಮನೆಯಿಂದ ಹೊರಗೆ ಕಳುಹಿಸಲು ಹೆದರುತ್ತಿದ್ದಾರೆ. ಶಾಲೆಗಳಿಗೆ ತೆರಳುವ ಮಕ್ಕಳನ್ನು ಒಂಟಿಯಾಗಿ ಕಳುಹಿಸಲು ಸಾಧ್ಯವಾಗದೆ ಶಾಲಾ ವಾಹನದವರೆಗೂ ಕರೆದುಕೊಂಡು ಹೋಗಿ ಬಿಟ್ಟು, ಸಂಜೆ ಮತ್ತೆ ಕರೆ ತರುವಂತಹ ಸ್ಥಿತಿ ನಿರ್ಮಾಣವಾಗಿದೆ.ಪಟ್ಟಣದ ಜನ ವಸತಿ ಪ್ರದೇಶಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಮಾಂಸದ ಅಂಗಡಿಗಳು ಮತ್ತು ಕೋಳಿ ಅಂಗಡಿಗಳ ಸಮೀಪ ಗುಂಪು ಗುಂಪಾಗಿ ನಿಲ್ಲುವ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುತ್ತವೆ. ಬೀದಿ ನಾಯಿಗಳ ಹಾವಳಿ ನಿವಾರಿಸಲು ಪುರಸಭೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾದ ಅಗತ್ಯವಿದೆ ಎಂಬುದು ನಾಗರಿಕರ ಆಗ್ರಹ.
- ಕಿರಣ್ಗೌಡ, ಎನ್ಇಎಸ್ ವಾಸಿ