ಜಾರ್ಜ್, ಉಮಾಶ್ರೀ ರಾಜಿನಾಮೆ ನೀಡಲಿ

Updated on: 

ಮಂಡ್ಯ: ರಾಜ್ಯದಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳ ನೈತಿಕ ಹೊಣೆ ಹೊತ್ತು ಗೃಹ ಸಚಿವ ಜಾರ್ಜ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಉಮಾಶ್ರೀ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಧರಣಿ ಕುಳಿತರು.
ಮಹಿಳಾ ಕಾನೂನುಗಳು ಬಲಿಷ್ಠವಾಗಿದ್ದರೂ ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸದೆ ಆರೋಪಿಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ನಿದ್ರಾವಸ್ಥೆಯಲ್ಲಿದೆ ಎಂದು ದೂರಿದರು.
ಸಂಪೂರ್ಣ ವಿಫಲ: ಗೃಹ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಇಲಾಖೆಗಳನ್ನು ಶಿಸ್ತುಬದ್ಧವಾಗಿ, ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ನಿರ್ವಹಿಸುವಲ್ಲಿ ವಿಫಲರಾಗಿರುವ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಉಮಾಶ್ರೀ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯಗಳನ್ನು ಪ್ರತಿಬಂಧಿಸಲು ಟಾಡಾ ಕಾಯ್ದೆ ರೀತಿಯ ಮತ್ತು ಅತ್ಯಾಚಾರ ಆರೋಪಿಗಳನ್ನು ಗಡಿಪಾರು ಮಾಡಿ ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಕಠಿಣ ಶಿಕ್ಷೆ ವಿಧಿಸಲು ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ವಜಾಗೊಳಿಸಿ: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕರ್ತವ್ಯ ಲೋಪ ಎಸಗುವ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಜಾಗೊಳಿಸಿ, ಅತ್ಯಾಚಾರ ಆರೋಪಿಗಳಿಗೆ ಅನುಸರಿಸುವ ಕಾಯ್ದೆಯನುಸಾರ ಕೇಸು ದಾಖಲಿಸಿ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹ ಪಡಿಸಿದರು.
ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸಮಿತಿ ಸದಸ್ಯ ಆರ್. ವೆಂಕಟೇಶ್, ವೆಂಕಟಗಿರಿಯಯ್ಯ, ಜಿಲ್ಲಾ ಮುಖಂಡರಾದ ಬಿ.ಎಂ.ಸತ್ಯ, ಡಿ.ಕೆ.ಅಂಕಯ್ಯ, ಥಾಮಸ್ ಬೆಂಜಮೀನ್, ಕಂಚಿನಕೋಟೆ ಮೂರ್ತಿ, ವೆಂಕಟೇಶ್, ರಮೇಶ್, ಕೇಶವಮೂರ್ತಿ, ಬಿ.ಶ್ರೀನಿವಾಸ, ಲಕ್ಷ್ಮಮ್ಮ, ಮಹದೇವಮ್ಮ, ಮಂಜುಳಾ, ನಾಗಮ್ಮ, ಜೆ.ರಾಮಯ್ಯ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com