ನಾಗಮಂಗಲ: ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಮುಗಿಬಿದ್ದು ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟು ಗೊಂದಲ, ಗದ್ದಲ ಆರಂಭಿಸಿದ್ದರಿಂದ ಶೌಚಾಲಯ ನಿರ್ಮಾಣದ ಬಗ್ಗೆ ಜಾಗೃತಿ ಹಾಗೂ ಪ್ರಗತಿ ಪರಿಶೀಲಿಸಲು ಜಿಪಂ ಸಿಇಒ ರೋಹಿಣಿ ಸಿಂಧೂರಿ ಬುಧವಾರ ಕರೆದಿದ್ದ ಸಭೆ ಅರ್ಧಕ್ಕೆ ಮೊಟಕುಗೊಂಡಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂರಿ, ತಮ್ಮ ಮನವಿಗೆ ಸ್ಪಂದಿಸದ ಹಾಗೂ ಸಭೆ ಸುಗಮವಾಗಿ ನಡೆಯಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅರ್ಧದಲ್ಲಿಯೇ ಸಭೆಯಿಂದ ಹೊರ ನಡೆದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ಎಲ್ಲ ಸಮಸ್ಯೆಗಳಿಗೂ ಕುಳಿತಲ್ಲೇ ಪರಿಹಾರ ಕಂಡು ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಸಮಸ್ಯೆಗಳನ್ನು ಪರಿಶೀಲಿಸಿ, ಹಂತ ಹಂತವಾಗಿ ಕ್ರಮ ತೆಗೆದು ಕೊಳ್ಳಬಹುದು ಎಂದು ಸಮಜಾಯಿಷಿ ನೀಡಿದರೂ ಸಭೆಯಲ್ಲಿ ಗೊಂದಲ ನಿಲ್ಲಲಿಲ್ಲ.ಚುನಾಯಿತ ಪ್ರತಿನಿಧಿಗಳ ಸಹಕಾರ ಅಗತ್ಯವಿದೆ. ಸಹಕಾರ ನೀಡದಿದ್ದರೆ, ಶೌಚಾಲಯ ಗುರಿ ಹೊಂದಲು ನಾಗಮಂಗಲ ತಾಲೂಕು ಬೇಡ.
ಜಿಲ್ಲೆಯಲ್ಲಿ ಇನ್ನೂ ಆರು ತಾಲೂಕುಗಳಿವೆ ಅಲ್ಲಿಯೇ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಿಇಒ ಹೇಳಿದರು.ನಿರ್ಮಲ ಭಾರತ್ ಹಾಗೂ ಖಾತ್ರಿ ಯೋಜನೆ ಅಡಿ ಸರ್ಕಾರದ ಆದೇಶದಂತೆ ತಾಲೂಕಿನಾದ್ಯಂತ ನಿರ್ಮಿಸಲು ಉದ್ದೇಶಿಸಿರುವ ಶೌಚಾಲಯಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಗಳ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪಟ್ಟಣದ ಶಿಕ್ಷಕರ ಭವನದಲ್ಲಿ ಸಭೆ ಆಯೋಜಿಲಾಗಿತ್ತು.ಸಭೆ ಆರಂಭದಲ್ಲಿ ಸಿಇಒ ರೋಹಿಣಿ ಸಿಂಧೂರಿ ಮಾತನಾಡಿ, ನಿರ್ಮಲ ಭಾರತೆ ಯೋಜನೆಯಡಿ ಶೌಚಾಲಯ ನಿರ್ಮಿಸಲು ತಾಲೂಕಿನಲ್ಲಿ 12 ಸಾವಿರ ಗುರಿ ಹೊಂದಿದ್ದು, 950 ಶೌಚಾಲಯ ಈಗಾಗಲೇ ನಿರ್ಮಾಣಗೊಂಡಿವೆ. ಉಳಿಕೆ ಶೌಚಾಲಯಗಳ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶೌಚಾಲಯ ನಿರ್ಮಾಣ ಮಾಡಲು ಸಮಸ್ಯೆಗಳಿದ್ದರೆ ಸಭೆ ಗಮನಕ್ಕೆ ತನ್ನಿ ಎನ್ನುತ್ತಿದ್ದಂತೆ ಗ್ರಾಪಂ ಸದಸ್ಯರು ಸಮಸ್ಯೆಗಳ ಸುರಿಮಳೆಗರೆದರು. ಶೌಚಾಲಯ ನಿರ್ಮಾಣ ಮಾಡಿಕೊಂಡಿರುವವರಿಗೆ ಹಣ ಸಂದಾಯ ಮಾಡಿಲ್ಲ. ಸಲ್ಲದ ಸಬೂಬು ಹೇಳಿ ಫಲಾನುಭವಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ.ಗ್ರಾಮಗಳಲ್ಲಿ ಚರಂಡಿ ಶುಚಿಯಾಗಿಲ್ಲ. ಕುಡಿಯುವ ನೀರು ಪೂರೈಸುತ್ತಿಲ್ಲ. ಶೌಚಾಲಯ ನಿರ್ಮಿಸುವ ಕೆಲಸ ಬಿಟ್ಟರೆ ಗ್ರಾಮಗಳಲ್ಲಿ ಇನ್ಯಾವ ಕೆಲಸ ನಡೆಯುತ್ತಿಲ್ಲ. ಶೌಚಾಲಯ ನಿರ್ಮಾಣದ ಜೊತೆಗೆ ಗ್ರಾಮಗಳಲ್ಲಿನ ಸಮಸ್ಯೆ ಬಗ್ಗೆ ಗಮನಹರಿಸಬೇಕು ಎಂದು ಸದಸ್ಯರು ಆಗ್ರಹಿಸಿ, ಗದ್ದಲ ಆರಂಭಿಸಿದರು.ಸಭೆಯಲ್ಲಿ ಹತ್ತಾರು ಜನರು ಏರು ದನಿಯಲ್ಲಿ ಸಮಸ್ಯೆ ಹೇಳುತ್ತಿದ್ದರು. ಯಾರು ಏನು ಹೇಳುತ್ತಿದ್ದಾರೆ ಎಂದು ಯಾರಿಗೂ ಕೇಳಿಸುತ್ತಿರಲಿಲ್ಲ. ತಾಪಂ ಅಧ್ಯಕ್ಷ ಮೂಡ್ಲೀಗೌಡ ಸಭೆ ನಿಯಂತ್ರಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಜಿಪಂ ಸಿಇಒ ಮಧ್ಯಪ್ರವೇಶಿಸಿ, ಒಬ್ಬೊಬ್ಬರಾಗಿ ಸಮಸ್ಯೆ ಹೇಳಿ, ಪರಿಹಾರ ಕಂಡುಕೊಳ್ಳೋಣ ಎಂದು ಮನವಿ ಮಾಡಿದರೂ ಸ್ಪಂದಿಸದ ಸದಸ್ಯರು ತಮ್ಮ ಮಾತಿನ ಭರಾಟೆ ಮುಂದುವರಿಸಿದರು. ರೋಹಿಣಿ ಪದೇ ಪದೆ ಮನವಿ ಮಾಡಿದರೂ ಗದ್ದಲ ಕಡಿಮೆಯಾಗಲಿಲ್ಲ. ಇದರಿಂದ ಬೇಸರಗೊಂಡ ಜಿಪಂ ಸಿಇಒ ಸಭೆಯಿಂದ ಹೊರ ನಡೆದರು.