ಮಳವಳ್ಳಿ: ಬೈಕ್ಗಳನ್ನು ಕಳವು ಮಾಡಿ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿ ಹಾಗೂ ನಾಲ್ಕು ಬೈಕ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಕಿರುಗಾವಲು ಪೊಲೀಸರು ಸಂಪೂರ್ಣ ಯಶಸ್ವಿಯಾಗಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಮತ್ತೇಪುರ ಗ್ರಾಮದ ವಾಸಿಯಾದ ಮಹಾಸ್ವಾಮಿ ಅಲಿಯಾಸ್ ಮಾದೇಶ ಹಾಗೂ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ವಾಸಿ ಶಿವಮಲ್ಲನಾಯಕ್ ಎಂಬುವವರ ಮಗ ರವಿನಾಯಕ್ ಎಂಬುವರೆ ಬಂಧಿತರು. ಕಿರುಗಾವಲು ಸಂತೆಮಾಳದಲ್ಲಿ ಗಸ್ತಿನಲ್ಲಿದ್ದ ಪೊಲೀಸರು ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ಹುಡುಗರು ನಂಬರ್ ಪ್ಲೇಟ್ ಇಲ್ಲದ ಮೋಟರ್ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದುದ್ದನ್ನು ಗಮನಿಸಿ ಅನುಮಾನ ಬಂದು ಅವರ ಹತ್ತಿರ ಹೋದಾಗ ಓಡಲು ಪ್ರಯತ್ನಿಸಿದರು. ಅವರಿಬ್ಬರನ್ನು ಹಿಡಿದು ತಂದು ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನದಂತೆ ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರದಲ್ಲಿ ಹೀರೊಹೊಂಡ ಸ್ಪ್ಲೆಂಡರ್ ಬೈಕ್, ಕಳೆದ ಒಂದೂವರೆ ತಿಂಗಳ ಹಿಂದೆ ಚಾಮರಾಜನಗರ ಜಿಲ್ಲೆ ಮಲೇಮಹದೇಶ್ವರ ಬೆಟ್ಟದಲ್ಲಿ ಕಳವು ಮಾಡಿದ್ದ ಬಜಾಚ್ ಡಿಸ್ಕವರಿ ಬೈಕ್, ಗುಂಡೇಗಾಲ ಗ್ರಾಮದಲ್ಲಿ ಟಿವಿಎಸ್ ಎಕ್ಸೆಲ್ ಹಾಗೂ ಕೊಳ್ಳೇಗಾಲ ಉಗ್ನಿಯ ಗ್ರಾಮದಲ್ಲಿ ಹೀರೊಹೊಂಡ ಪ್ಯಾಷನ್ ಬೈಕ್ ಅನ್ನು ಕಳವು ಮಾಡಿರುವುದು ತಿಳಿದುಬಂದಿದೆ.