ನೀರಿಗಾಗಿ ಇಂದು ಪ್ರತಿಭಟನೆ

Updated on: 

ಕ.ಪ್ರ.ವಾರ್ತೆ ಮೈಸೂರು ಮೇ 19
ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಪರಿಹರಿಸಲು ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ಧ ಮೈಸೂರು ಗ್ರಾಹಕರ ಪರಿಷತ್ತು ಮೇ 20ರ ಮಧ್ಯಾಹ್ನ 3.30ಕ್ಕೆ ನಗರಪಾಲಿಕೆ ಎದುರು ಪ್ರತಿಭಟನೆ ನಡೆಸಲಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಮೈಗ್ರಾಪದ ಪ್ರೊ. ಬಿ.ಎಸ್. ಶಂಕರ, ಮೈಸೂರಿನಲ್ಲಿ ನೀರು ಸರಬರಾಜು ನಿರ್ವಹಣೆಗೆ ಒಂದು ಸ್ವಾಯತ್ತ ನಿಕಾಯ ಸ್ಥಾಪಿಸಿ, ನಿಕಾಯ ನಿಯಂತ್ರಿಸಲು ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣಾ ಆಯೋಗದಂತಹ ಆಯೋಗ ಸ್ಥಾಪಿಸಬೇಕು ಎಂದಿದ್ದಾರೆ.
ಮೈಸೂರು ಪ್ರತಿ ವರ್ಷವೂ ಅಪಾಯದೊಡನೆ ಆಟವಾಡುತ್ತಿದೆ. ಪ್ರತಿ ಬೇಸಿಗೆಯಲ್ಲಿ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಬಹಳ ಇಳಿಯುತ್ತದೆ. ನಗರದ ಅನೇಕ ಭಾಗಗಳಿಗೆ ದಿನಗಟ್ಟಲೆ ವಾರಗಟ್ಟಲೆ ನೀರು ಸರಬರಾಜಾಗುವುದಿಲ್ಲ. ಜನರು ಹತಾಶರಾಗುತ್ತಾರೆ.
ಆದ್ದರಿಂದ ಯೋಜನೆ ಮತ್ತು ನಿರ್ವಹಣೆಯಿಂದ ಇಂತಹ ಅನಾಹುತ ತಪ್ಪಿಸಬಹುದು. ಇಲ್ಲವೇ ಕಡೆಪಕ್ಷ ಅದರ ಪರಿಣಾಮವನ್ನು ಬಹಳಷ್ಟು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಅದು ಅಲ್ಪಕಾಲೀನ ಮತ್ತು ಮಧ್ಯಕಾಲೀನ ಕ್ರಮ ಕೈಗೊಳ್ಳಬೇಕು. ವಿಶ್ವಾಸರ್ಹವಲ್ಲದ ದೇವರಾಯನ ಕಾಲುವೆಯಿಂದ ನೀರನ್ನು ರೇಚಿಸುವ ಬದಲು ಸೆಟ್ಟಿಕಟ್ಟೆಯ ಮೇಲ್ಭಾಗದಲ್ಲಿ ನದಿಯಿಂದಲೇ ನೀರನ್ನು ರೇಚಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸರ್ಕಾರದ ಮುಂದಿಟ್ಟಿರುವ ಯೋಜನೆ ಸೇರಿದೆ. ಇದನ್ನು ತುರ್ತಾಗಿ, ಏನೇ ಆದರೂ ಮುಂದಿನ ಬೇಸಿಗೆಗೆ ಮುಂಚೆ ಮುಗಿಯುವಂತೆ ಕೈಗೆತ್ತಿಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಡೊನೇಷನ್‌ಗೆ ಕಡಿವಾಣ ಹಾಕಿ
ಕ.ಪ್ರ.ವಾರ್ತೆ ಮೈಸೂರು ಮೇ 19
ನಗರದ ಖಾಸಗಿ ಮತ್ತು ಅನುದಾನಿತ ವಿದ್ಯಾಸಂಸ್ಥೆಗಳಲ್ಲಿನ ಡೊನೇಷನ್ ಹಾವಳಿಗೆ ಕಡಿವಾಣ ಹಾಕಬೇಕು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಸಂಸ್ಥೆ ಮತ್ತು ಯುವ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಡೊನೇಷನ್ ಹಾವಳಿಯಿಂದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜನಾಂಗಗಳು ಶಿಕ್ಷಣದಿಂದ ವಂಚಿತವಾಗುತ್ತಿವೆ. ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಲಿತರಿಗೆ ಕಡ್ಡಾಯ ಉಚಿತ ಪ್ರವೇಶ ನೀಡಬೇಕು. ಸರ್ಕಾರ ಅಥವಾ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಬೇಕು.
ಶಿಕ್ಷಣ ಇಲಾಖೆ ಆಯುಕ್ತರು ಶುಲ್ಕಗಳ ಬಗ್ಗೆ ಹೊರಡಿಸಿರುವ ಆದೇಶದ ಪ್ರತಿಯನ್ನು ಎಲ್ಲಾ ಶಾಲಾ, ಕಾಲೇಜುಗಳ ನಾಮಫಲಕಗಳಲ್ಲಿ ಪ್ರಕಟಿಸಬೇಕು ಮತ್ತು ಜಿಲ್ಲೆಯಲ್ಲಿನ ಡೊನೇಷನ್ ಹಾವಳಿಗೆ ಕಡಿವಾಣ ಹಾಕಲು ಪ್ರಾದೇಶಿಕ ಆಯುಕ್ತರು, ಜಿಲ್ಲಾಡಳಿತ ಮತ್ತು ಸಮಜ ಕಲ್ಯಾಣ ಇಲಾಖೆ ಮುಂದಾಗಬೇಕು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಸಂಸ್ಥೆ ಅಧ್ಯಕ್ಷ ಸಿ. ಚಿದಂಬರ ಮತ್ತು ಉಪಾಧ್ಯಕ್ಷ ಕೆ. ಮುರುಳಿದಾಸ್ ಒತ್ತಾಯಿಸಿದ್ದಾರೆ.
ನಗರದ ಮರಿಮಲ್ಲಪ್ಪ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಪ್ರವೇಶದಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಕ್ಷೇತ್ರದಲ್ಲಿನ ವಿದ್ಯಾರ್ಥಿಗಳಿಗೆ ಪ್ರವೇಶ ಕೋರಲು ತೆರಳಿದ್ದ ನನ್ನೊಂದಿಗೆ ಸಚಿವ ವಿ. ಶ್ರೀನಿವಾಸಪ್ರಸಾದ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಏಕವಚನದಲ್ಲಿ ನಿಂದಿಸಿರುವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪಂಚಾಕ್ಷರಸ್ವಾಮಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಪಿ. ಪ್ರಶಾಂತ್‌ಗೌಡ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com