ಕ.ಪ್ರ.ವಾರ್ತೆ ಮೈಸೂರು ನ. 20
ಕನಕದಾಸರು ಬಹು ದೊಡ್ಡ ವಿಚಾರವಾದಿ ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಹೇಳಿದರು.
ನಗರ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕನಕದಾಸರ 526ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ನಿಜವಾದ ವಿಚಾರವಾದಿಗಳಿಲ್ಲ. ಕನಕದಾಸರು ಮಾತ್ರ ನಿಜವಾದ ವಿಚಾರವಾದಿ. ಅವರ ಎಲ್ಲ ನೀತಿ ಬೋಧನೆಗಳೂ ಇಂದಿಗೂ ಪ್ರಸ್ತುತವಾಗಿದೆ. ಸದ್ಯದ ರಾಜಕೀಯ ಸ್ಥಿತಿಗೆ ಹೊಂದಿಕೊಂಡಂತಿವೆ ಎಂದರು.
ಮಾಡಿದುಪಕಾರ ಮರೆತವನೆ ದ್ರೋಹಿ ಎಂದಿದ್ದಾರೆ. ಅಂದರೆ ಪಕ್ಷ ಸೇರಿ ಅಧಿಕಾರ ಅನುಭವಿಸಿ ನಂತರ ಬೈದಾಡಿಕೊಂಡು ಪಕ್ಷ ಬಿಡುವವರು ದ್ರೋಹಿಗಳು. ಪರಸತಿಯ ಬಯಸುವವರು ದ್ರೋಹಿಗಳು. ಎಲ್ಲರೂ ಬಾಳೆ ಹಣ್ಣನ್ನು ಯಾರಿಗೂ ಕಾಣದ ಜಾಗದಲ್ಲಿ ಕುಳಿತು ತಿಂದು ಬಂದರೆ, ಕನಕದಾಸರು ಮಾತ್ರ ದೇವರಿಲ್ಲದ ಜಾಗ ಇಲ್ಲದ್ದರಿಂದ ಬಾಳೆ ಹಣ್ಣು ತಿನ್ನಲಾಗಲಿಲ್ಲ ಎಂದರು. ನಾವಾಗಿದ್ದರೆ ಬಾಳೆ ಹಣ್ಣು ಸಿಕ್ಕಿದ ಖುಷಿಯಲ್ಲಿ ದೇವರನ್ನು ಮರೆತಿರುತ್ತಿದ್ದೆವು ಎಂದರು.
ಮೂಲತಃ ಬನ್ನೂರಿನವರಾದ ವ್ಯಾಸರಾಯರು ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದರು. ಅವರು ಒಂದು ಗಳಿಗೆ ಸಿಂಹಾಸನದಲ್ಲಿ ಕುಳಿತ ಕಾರಣಕ್ಕೆ ವ್ಯಾಸರಾಜರಾದರು. ಬಿಜೆಪಿಯ ಹಿಂದುಳಿದ ಮೋರ್ಚಾ ಕಾರ್ಯಕರ್ತರೆಲ್ಲ ಒಮ್ಮೆ ವ್ಯಾಸರಾಜರು ಸ್ಥಾಪಿಸಿದ ಸೋಸಲೆ ಮಠ ಮತ್ತು ಸಮೀಪದಲ್ಲಿನ ಕನಕ ಬಂಡೆ ಹಾಗೂ ಪ್ರತಿಮೆ ಪೂಜೆ ಸಲ್ಲಿಸಿ ಬರಬೇಕು ಎಂದು ಕರೆ ನೀಡಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ಎಸ್.ಎ. ರಾಮದಾಸ್, ಕನಕದಾಸರ ಪದಗಳನ್ನು ಹೇಳಿದರೆ ಸಾಲದು, ಅವರ ತತ್ವವನ್ನು ಅನುಸರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎಚ್.ವಿಜಯಶಂಕರ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಪ್ಪಗೌಡ, ಯಶಸ್ವಿನಿ ಸೋಮಶೇಖರ್, ಸೋಮಸುಂದರ್, ಸಂಘಟನ ಪ್ರಧಾನ ಕಾರ್ಯದರ್ಶಿ ಶ್ರೀವತ್ಸ, ನಗರ ಬಿಜೆಪಿ ಮಾಜಿ ಅಧ್ಯಕ್ಷ ಶಿವಕುಮಾರ್, ಪಾಲಿಕೆ ಸದಸ್ಯರಾದ ಶಿವಕುಮಾರ್, ಗಿರೀಶ್‌ಪ್ರಸಾದ್, ಎಂ.ಕೆ. ಶಂಕರ್, ವನಿತ ಪ್ರಸನ್ನ, ಹಿಂದುಳಿದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ಇದ್ದರು.
ಏಕತೆಗಾಗಿ ಶ್ರಮಿಸಿದ ಕನಕದಾಸ
ಮೇಲ್ವರ್ಗದ ತುಳಿತಕ್ಕೆ ಒಳಗಾಗಿದ್ದರೂ ಕೂಡ ಆಧ್ಯಾತ್ಮಿಕ ಪರಿಶ್ರಮದಿಂದ ಸರ್ವರಲ್ಲೂ ಏಕತೆಯನ್ನು ಎತ್ತಿ ಹಿಡಿದ ಏಕೈಕ ವ್ಯಕ್ತಿ ಕನಕದಾಸರು ಎಂದು ಗಂಗೋತ್ರಿ ನರ್ಸರಿ, ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಅಧ್ಯಕ್ಷ ರಂಗಪ್ಪ ಹೇಳಿದರು.
ಗಂಗೋತ್ರಿ ವಿದ್ಯಾಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರು ಆಧ್ಯಾತ್ಮಿಕ ಸಿದ್ಧಿಯಿಂದ ದೇವರನ್ನು ಕೂಡ ಒಲಿಸಿಕೊಳ್ಳಬಹುದೆಂದು ಸಾಕ್ಷೀಕರಿಸಿದ ವ್ಯಕ್ತಿಯಾಗಿದ್ದಾರೆ. ಅಸ್ಪರ್ಶ್ಯತೆ ಆಚರಣೆ ಕಾಲದಲ್ಲಿಯೂ ಎಲ್ಲ ಸವಾಲುಗಳನ್ನು ಮೆಟ್ಟಿ, ಆಧ್ಯಾತ್ಮಿಕ ಪರಿಶ್ರಮದಿಂದ ಸರ್ವರಲ್ಲೂ ಏಕತೆಯನ್ನು ಎತ್ತಿ ಹಿಡಿದರು. ಕುಲ ಕುಲ ಕುಲವೆಂದು ಹೊಡೆದಾಡದಿರಿ ಕೀರ್ತನೆಯ ಮೂಲಕ ಮನೆ ಮನೆಗೆ ತೆರಳಿ ಸಮಾನತೆ ತರಲು ಯತ್ನಿಸಿದ್ದಾಗಿ ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕಿ ಕಾಂತಿನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಜಾತಿಯ ಬಗ್ಗೆ ಹೆಚ್ಚಿನ ಒಲವು ಕೊಡದೆ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದರು.
ಕನಕರದು ಸಮಾನತೆಯ ಸಮಾಜದ ಕನಸು: ಸಂದೇಶ್
ಶ್ರೇಷ್ಠ ಸಂತ ಕನಕದಾಸರು ಭವಿಷ್ಯದ ಪೀಳಿಗೆಯ ಬಗ್ಗೆ ಚಿಂತಿಸಿ ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ಮೌಲ್ಯ ತಿಳಿಸಿಕೊಟ್ಟಿದ್ದಾರೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಹೇಳಿದರು.
ನಗರದ ಜೆಡಿಎಸ್ ನಗರ ಘಟಕ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಮುಂದಿನ ಪೀಳಿಗೆ ಬಗ್ಗೆ ಚಿಂತಿಸಿದ ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ಮೌಲ್ಯಗಳನ್ನು ಕೊಟ್ಟಿದ್ದಾರೆ. ಸಮಾನತೆಯ ಸಮಾಜ ನಿರ್ಮಾಣ ಅವರ ಕನಸು. ಹಿಂದುಳಿದ ಸಮಾಜದಲ್ಲಿ ಹುಟ್ಟಿದ ಅವರು ಸಮಾಜದ ಉದ್ಧಾರಕ್ಕಾಗಿ ಸಾಹಿತ್ಯ ರಚನೆ ಮಾಡಿದರು ಎಂದರು.
ಪಕ್ಷದ ಮುಖಂಡ ಎಚ್.ವಾಸು ಮಾತನಾಡಿದರು. ಮೇಯರ್ ಎನ್.ಎಂ.ರಾಜೇಶ್ವರಿ, ಸದಸ್ಯರಾದ ಕೆ.ಟಿ. ಚೆಲುವೇಗೌಡ, ಮಹದೇವಪ್ಪ, ನಟರಾಜ್, ಬಾಲು, ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ, ಮಹಿಳಾ ನಗರ ಘಟಕದ ಅಧ್ಯಕ್ಷೆ ಪ್ರೇಮಾ ಶಂಕರೇಗೌಡ, ಕೆ.ಆರ್. ಕ್ಷೇತ್ರದ ಅಧ್ಯಕ್ಷ ಬಸವರಾಜು, ಚಾಮರಾಜ ಕ್ಷೇತ್ರದ ಅಧ್ಯಕ್ಷ ಅನಂತನಾರಾಯಣ, ರಾಜ್ಯ ಸಮಿತಿ ಸದಸ್ಯ ರವಿಚಂದ್ರೇಗೌಡ ಇದ್ದರು.
Advertisement