ಗ್ರಾಮೀಣ ಸಂಸ್ಕೃತಿಯಿಂದ ಜಾನಪದ ಜೀವಂತ

ಕ.ಪ್ರ.ವಾರ್ತೆ , ಮೈಸೂರು , ಜು. 7
ಭಾರತದಲ್ಲಿ ಗ್ರಾಮೀಣ ಸಂಸ್ಕೃತಿಯಿಂದಾಗಿ ಜಾನಪದ ಜೀವಂತವಾಗಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಡಾ. ಆರ್ವಿಯಸ್ ಸುಂದರಂ ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ ವಿಶೇಷ ನೆರವು ಯೋಜನೆಯಡಿ ಆಯೋಜಿಸಿರುವ ಜಾನಪದ ಕಾರ್ಯಾಗಾರದ ಅಂಗವಾಗಿ ಭಾನುವಾರ ನಡೆದ ಮೂರನೇ ಗೋಷ್ಠಿಯಲ್ಲಿ ಜಾನಪದ ಅಧ್ಯಯನಕ್ಕೆ ವಿದೇಶಿ ವಿದ್ವಾಂಸರ ಕೊಡುಗೆ ಎಂಬ ವಿಷಯ ಕುರಿತು ಮಾತನಾಡಿದರು.
ಜಾನಪದ ಹುಟ್ಟಿದ್ದು ವಿದೇಶದಲ್ಲಿಯಾದರೂ ಇಂದು ಅಲ್ಲಿ ಅದು ಮರೆಯಾಗಿದೆ. ಜಾಗತೀಕರಣದ ಪ್ರಭಾವದಿಂದಾಗಿ ಜರ್ಮನ್, ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಆ ಸಂಸ್ಕೃತಿ ಕ್ಷೀಣಿಸುತ್ತಿದೆ. ಆದರೆ, ಭಾರತದಲ್ಲಿ ಜಾಗತೀಕರಣದ ನೆರಳಿದ್ದರೂ ಇಲ್ಲಿನ ಗ್ರಾಮೀಣ ಸಂಸ್ಕೃತಿಯ ಪ್ರಬಾವದಿಂದ ಅದು ಜೀವಂತವಾಗಿದೆ ಎಂದರು.
ವಿದೇಶಿಗರು ಜಾನಪದವನ್ನು ನಗರೀಕರಣವಾಗಿ, ಆಧುನೀಕರಣವಾಗಿ ಹಾಗೂ ಯಾವುದೇ ಚೌಕಟ್ಟಿಲ್ಲದೆ ನೋಡಿದ ಕಾರಣ ಅದು ಅಲ್ಲಿ ನೆಲೆಯಾಗಲಿಲ್ಲ. ಆದರೆ, ನಮ್ಮ ದೇಶದಲ್ಲಿ ಇಲ್ಲಿನ ಸಂಸ್ಕೃತಿ, ಜಾತಿ, ಧರ್ಮ ಈ ಎಲ್ಲವೂ ಇರುವುದರಿಂದ ಜನರ ಬದುಕೇ ಜಾನಪದವಾಗಿದೆ. ಆದ್ದರಿಂದ ಅದು ಗಟ್ಟಿಯಾಗಿ ಉಳಿಯಲು ಸಾಧ್ಯವಾಯಿತು ಎಂದು ತಿಳಿಸಿದರು.
ಪಾಶ್ಚಾತ್ಯ ವಿದ್ವಾಂಸರು ಭಾಷಾ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದರು. ಆದರೆ, ಜಾನಪದ ಅಧ್ಯಯನಕ್ಕೆ ಮಹತ್ವ ನೀಡಲಿಲ್ಲ. ಆದ್ದರಿಂದ ವಿದೇಶಿಗರ ವೈಜ್ಞಾನಿಕ ಸಿದ್ಧಾಂತ ಪರಿಗಣಿಸದೆ, ಇಂದಿನ ಜಾಗತೀಕರಣದ ನಡುವೆಯೂ ನಮ್ಮ ಜಾನಪದ ಪರಂಪರೆ ಉಳಿಸಿ ಬೆಳೆಸಲು ಒಂದು ಚೌಕ್ಕಟ್ಟಿನ ಅಧ್ಯಯನ ಅವಶ್ಯಕ ಎಂದರು.
ಜಾನಪದ ಅಧ್ಯಯನಕ್ಕೆ ದೇಸಿ ವಿದ್ವಾಂಸರ ಕೊಡುಗೆ ಎಂಬ ವಿಷಯ ಕುರಿತು ಮಾತನಾಡಿದ ಜಾನಪದ ವಿದ್ವಾಂಸ ಡಾ. ಬೋರೇಗೌಡ ಚಿಕ್ಕಮರಳಿ, ಸ್ವಾತಂತ್ರ್ಯ ಸಂದರ್ಭದಲ್ಲಿ ಜಾನಪದ ಸಾಹಿತ್ಯ ರಾಷ್ಟ್ರೀಯವಾದವಾಗಿ ಮಹತ್ವ ಪಡೆದಿತ್ತು. ಲಾವಣಿ, ಗೀತೆಗಳ ಮೂಲಕ ಹಾಡುಕಟ್ಟಿದ ದೇಸಿ ವಿದ್ವಾಂಸರ ಕೊಡುಗೆ ಅನನ್ಯ ಎಂದು ಹೇಳಿದರು.
ಜಾನಪದ ಮೌಖಿಕ ಪಠ್ಯ ಎಂಬ ವಿಷಯ ಕುರಿತು ವಿದ್ವಾಂಸ ಡಾ. ಎ.ವಿ. ನಾವಡ ಮಾತನಾಡಿದರು.
ನಂತರ ನಡೆದ ನಾಲ್ಕನೇ ಗೋಷ್ಠಿಯಲ್ಲಿ ಹತ್ತೊಂಬತ್ತನೇ ಶತಮಾನದ ಉತ್ತರಾರ್ಥ ಜಾನಪದ ತಿಳಿವಳಿಕೆಯ ಸಾಮಾನ್ಯ ಸ್ವರೂಪ ಎಂಬ ವಿಷಯ ಕುರಿತು ಎ.ಸಿ. ಲಲಿತ, ಜಾನಪದ ಅಧ್ಯಯನ ಆವಶ್ಯಕತೆ ಎಂಬ ವಿಷಯ ಕುರಿತು ಡಾ. ಮಂಜುನಾಥ ಬೇವಿನಕಟ್ಟೆ
ಹಾಗೂ ವಾಕ್ ಪರಂಪರೆ ಪರಿಕಲ್ಪನೆ ಮತ್ತು ವಿಶ್ಲೇಷಣೆ ಎಂಬ ವಿಷಯ ಕುರಿತು ಡಾ. ವಿಜಯಲಕ್ಷ್ಮಿ ಮನಾಪುರ ಮಾತನಾಡಿದರು.
ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್, ಸ್ಯಾಪ್ ಯೋಜನೆಯ ಸಂಯೋಜಕ ಪ್ರೊ. ಕೆ.ಎನ್. ಗಂಗಾನಾಯಕ್ ಉಪಸಂಯೋಜಕ ಡಾ. ಎಂ. ನಂಜಯ್ಯ ಹೊಂಗನೂರು ಇದ್ದರು. ಸಂಶೋಧಕಿ ಪುಷ್ಪಲತಾ ನಿರೂಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com