ಮೈಸೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಲುವಾಗಿ ಎಲ್ಲರಿಗೂ ಉಪಯೋಗವಾಗಲೆಂದೇ 'ವಾಲ್ಮೀಕಿ ಯಾರು?' ಕೃತಿ ರಚಿಸಿದ್ದೇನೆಯೇ ಹೊರತು ಯಾರನ್ನೂ ನೋಯಿಸುವ, ವಿವಾದ ಸೃಷ್ಟಿಸುವ ಉದ್ದೇಶದಿಂದಲ್ಲ ಎಂದು ಹಿರಿಯ ವಿದ್ವಾಂಸ ಡಾ.ಕೆ.ಎಸ್. ನಾರಾಯಣಚಾರ್ಯ ಸ್ಪಷ್ಟಪಡಿಸಿದ್ದಾರೆ. ವಾಲ್ಮೀಕಿ ಜಯಂತಿಗಾಗಿ ರಜೆ ಹಾಗೂ ವಾಲ್ಮೀಕಿ ಭವನಗಳ ನಿರ್ಮಾಣ ಬಗೆಗಿನ ಸರ್ಕಾರದ ನಿರ್ಧಾರವನ್ನು ಮುನ್ನುಡಿಯಲ್ಲಿಯೇ ಸ್ವಾಗತಿಸಿ ಬರೆದಿದ್ದೇನೆ. ನನ್ನ ಹೃದಯವನ್ನೇ ವಾಲ್ಮೀಕಿಗೆ ಸಮರ್ಪಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ವಾಲ್ಮೀಕಿಯನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂಬುದು ನನ್ನ ಆಶಯ. ಬೇಡನಾದರೂ, ಬ್ರಾಹ್ಮಣನಾದರೂ ನನಗೆ ಒಂದೇ ರೀತಿಯಲ್ಲಿ ಪೂಜ್ಯ. ವಾಲ್ಮೀಕಿ ತನ್ನ ಬಗ್ಗೆ ತಾನೇ ಬರೆದುಕೊಂಡ ಮೂಲ ರಾಮಾಯಣದ ವಾಕ್ಯಗಳನ್ನು ನಾನು ಉದಾಹರಿಸಿದ್ದೇನೆಯೆ ವಿನಾ ಅದು ನನ್ನ ಸ್ವಂತ ಸೃಷ್ಟಿಯೋ, ಸಂಶೋಧನೆಯೋ ಅಲ್ಲ. ಈಗ ಇವುಗಳನ್ನು ನನ್ನ ಸ್ವಂತ ಕಲ್ಪನೆ ಎಂಬಂತೆ ಬಿಂಬಿಸಿ, ಪ್ರಚುರಪಡಿಸಿ, ವಿವಾದ ಸೃಷ್ಟಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.