ಪ್ರವಾಸಿ ತಾಣ, ತ್ಯಾಜ್ಯದ ಕಣ

Updated on: 

-ಮಾ. ವೆಂಕಟೇಶ್
ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಿಲ್ಲ. ಪ್ರತಿದಿನ ದೇಶ - ವಿದೇಶಗಳ ಜನರು ಭೇಟಿ ನೀಡುವುದಿದೆ. ಇಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆಯ ನಂತರ ಖರೀದಿಗಾಗಿ ದೇವರಾಜ ಮಾರುಕಟ್ಟೆ ಸುತ್ತಮುತ್ತಲಿನ ವ್ಯಾಪಾರಿ ಕೇಂದ್ರಗಳಿಗೂ ಬರುವುದಿದೆ.
ನಗರದ ಹೃದಯ ಭಾಗದಲ್ಲಿನ ಚಿಕ್ಕಗಡಿಯಾರ ಇದೀಗ ಒಂದು ಸುಂದರ ಉದ್ಯಾನವನದಂತೆ ಕಂಗೊಳಿಸುತ್ತಿದೆ. ಇಲ್ಲಿ ಹಲವರು ವಿಹರಿಸುವುದಿದೆ. ಆದರೆ ಇದರ ಅನತಿ ದೂರದಲ್ಲಿ ಇರುವ ಬೋಟಿ ಬಜಾರ್‌ನ ಅಕ್ಕಪಕ್ಕದ ರಸ್ತೆಯತ್ತ ಒಮ್ಮೆ ನೋಡಿದರೆ ಇದು ದೇಶದ ಎರಡನೇ ಸ್ವಚ್ಛ ನಗರವೇ ಎಂಬ ಅನುಮಾನ ಕಾಡುವುದು ಸಹಜ.   
ಶಿವರಾಂಪೇಟೆಯ ಪಕ್ಕದಲ್ಲಿನ ಕೊತ್ವಾಲ್ ರಾಮಯ್ಯ ರಸ್ತೆ ಹಾಗೂ ಸೀಬಯ್ಯ ಜಂಕ್ಷನ್‌ನಲ್ಲಿ ವ್ಯಾಪಾರ ಮಳಿಗೆಗಳಿವೆ. ಅದರ ಅಕ್ಕಪಕ್ಕದಲ್ಲಿ ಸಾವಿರಾರು ಮನೆಗಳಿವೆ. ಹೀಗಿದ್ದರೂ ಆ ಭಾಗದಲ್ಲಿನ ರಸ್ತೆಯಲ್ಲಿ ಬಾಳೆಗೋನೆ,  ಹಣ್ಣಿನ ಸಿಪ್ಪೆ, ಕೊಳೆತ ಹಣ್ಣು, ಹುಲ್ಲು ಮತ್ತಿತರ ತ್ಯಾಜ್ಯವನ್ನು ವ್ಯಾಪಾರಸ್ಥರು ತಂದು ಸುರಿಯುವುದನ್ನು ಕಾಣಬಹುದು. ಇಂತಹ ಕಸವನ್ನು ಪ್ರತಿದಿನ ತೆರವುಗೊಳಿಸದ ಕಾರಣ, ವಾಹನಗಳು ಅದರ ಮೇಲೆ ಓಡಾಡಿ ಕೊಳೆತ ಹಣ್ಣುಗಳು ಅಪ್ಪಜಿಯಾಗಿ ಅದರ ರಸ ಹೊರಬಂದು ಸೊಳ್ಳೆ ಮತ್ತು ನೊಣಗಳ ವಾಸಸ್ಥಾನವಾಗಿದೆ. ಇಂತಹ ಅನೈರ್ಮಲ್ಯ ಪರಿಸ್ಥಿತಿಯಿಂದ ನಿವಾಸಿಗಳು ಡೆಂಘೀಯಂತಹ ರೋಗಕ್ಕೂ ತುತ್ತಾಗಿ ಪರಿತಪಿಸುವಂತಾಗಿದೆ.
ಪರಿಸರ ಹಾಳು: ತ್ಯಾಜ್ಯ ರಾಶಿ  ಮಾರ್ಗ ಮಧ್ಯೆ ಇರುವುದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿದೆ. ಅಲ್ಲದೆ ಆ ಕಸದ ಮೇಲೆ ಕೆಲವರು ಮೂತ್ರವನ್ನು ವಿಸರ್ಜಿಸಿ ಪರಿಸರ ಹಾಳು ಮಾಡುತ್ತಿದ್ದಾರೆ. ಇದರಿಂದ  ಅಕ್ಕಪಕ್ಕದವರು ದುರ್ವಾಸನೆಯಿಂದ ನರಳುವಂತಾಗಿದೆ. ಸಮರ್ಪಕವಾಗಿ ಪೌರಕಾರ್ಮಿಕರು ಕಸವನ್ನು ಎತ್ತುತ್ತಿಲ್ಲ. ಲಾರಿಯವರು ಕಸವನ್ನು ತುಂಬಿದರೂ ಅದನ್ನು ಸಾಗಿಸದೆ ಎರಡು ಮೂರು ದಿನಗಳು ಅಲ್ಲಿಯೆ ನಿಲ್ಲಿಸಿಕೊಂಡಿರುತ್ತಾರೆ. ಸಿಬ್ಬಂದಿಗಳನ್ನು ಕೇಳಿದರೆ ವಾಹನ ಕೆಟ್ಟಿದೆ ಎಂದು ನೆಪ ಹೇಳುತ್ತಾರೆ ಎಂಬುದು ಸಾರ್ವಜನಿಕರ  ದೂರು.
ಈ ಭಾಗದ ವ್ಯಾಪ್ತಿಯು ಉತ್ತರಕ್ಕೆ ವಾಲ್ಮೀಕಿ ರಸ್ತೆ ಮತ್ತು ಕಾಳಿದಾಸ ರಸ್ತೆ ಸೇರುವ ಬಿಂದುವಿನಿಂದ ಕಾಳಿದಾಸ ರಸ್ತೆಯ ಮೂಲಕ ಕೆಆರ್‌ಎಸ್ ರಸ್ತೆಯವರೆಗೆ. ನಂತರ ಕೆಆರ್‌ಎಸ್ ರಸ್ತೆಯ ಮೂಲಕ ದಾಸಪ್ಪ ವೃತ್ತದವರೆಗೆ. ಅಲ್ಲಿಂದ ಜೆಎಲ್‌ಬಿ ರಸ್ತೆಯ ಮೂಲಕ ದಾಸಪ್ಪ ವೃತ್ತದಿಂದ ಜಗಜೀವನರಾಂ ವೃತ್ತದಲ್ಲಿ ಸಾಗಿ  ಇರ್ವಿನ್ ರಸ್ತೆಯ ಆಯುರ್ವೇದಿಕ್ ಆಸ್ಪತ್ರೆ ವೃತ್ತವರೆಗೆ. ವಿಶ್ವೇಶ್ವರಯ್ಯ ವೃತ್ತದಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಕಬೀರ್ ರಸ್ತೆ ಸೇರುವ ಬಿಂದುವರೆಗೆ. ನಂತರ ಕಬೀರ್ ರಸ್ತೆ ಮೂಲಕ ಬೆಂಕಿನವಾಬ್ ರಸ್ತೆ, ಶ್ರೀ ಟಾಕೀಸ್ ವೃತ್ತ ನಂತರ ಬೆಂಕಿನವಾಬ್ ರಸ್ತೆ ಮೂಲಕ ಇರ್ವಿನ್ ರಸ್ತೆ ಸೇರುವ ರಸ್ತೆಯ ಮೂಲಕ ಇರ್ವಿನ್ ರಸ್ತೆ ಸೇರುವ ಬಿಂದುವಿನಿಂದ ಕೆ.ಟಿ. ಸ್ಟ್ರೀಟ್ ರಸ್ತೆ ಬಿಂದುವರೆಗೆ.
ಪೂರ್ವಕ್ಕೆ ಕೆ.ಟಿ. ರಸ್ತೆ ಮತ್ತು ಇರ್ವಿನ್ ರಸ್ತೆ ಸೇರುವ ಬಿಂದುವಿನಿಂದ ಕೆ.ಟಿ ರಸ್ತೆಯ ಮೂಲಕ ಪ್ರಭಾ ಚಿತ್ರಮಂದಿರ ವೃತ್ತದ ಮೂಲಕ ಗಾಂಧಿವೃತ್ತ ದೊಡ್ಡಗಡಿಯಾರದ ವೃತ್ತ, ಅಶೋಕರಸ್ತೆಯಲ್ಲಿ ಚಲಿಸಿ ಚಾಮರಾಜ ವೃತ್ತ ಸೇರುವ ಬಿಂದು. ದಕ್ಷಿಣಕ್ಕೆ  ಚಾಮರಾಜ ವೃತ್ತದಿಂದ ಆಲ್ಪರ್ಟ್ ವಿಕ್ಟರ್ ರಸ್ತೆ ಮೂಲಕ ಕೆ.ಆರ್. ವೃತ್ತದವರೆಗೆ. ನಂತರ ಸಯ್ಯಾಜಿರಾವ್ ರಸ್ತೆ ಮೂಲಕ ಚಿಕ್ಕಗಡಿಯಾರ ವೃತ್ತ ಮತ್ತು ಚಿಕ್ಕಗಡಿಯಾರ ಮೂಲಕ ವಿನೋಬ ರಸ್ತೆಯ ಮುಖೇನ ಎನ್.ಎಸ್. ರಸ್ತೆ, ಡಿ. ದೇವರಾಜ ಅರಸ್ ರಸ್ತೆ, ಜೆಎಲ್‌ಬಿ ರಸ್ತೆ, ಜನರಲ್ ಕಾರ್ಯಪ್ಪ ವೃತ್ತ,  ಹುಣಸೂರು ರಸ್ತೆ ಮೂಲಕ ವಿನೋಬ ರಸ್ತೆ ಸೇರುವ ಬಿಂದುವರೆಗೆ. ಪಶ್ಚಿಮಕ್ಕೆ ಹುಣಸೂರು ರಸ್ತೆ ಮೂಲಕ ವಾಲ್ಮೀಕಿ ರಸ್ತೆ ಸೇರುವ ಬಿಂದುವಿನಿಂದ ಕಾಳಿದಾಸ ರಸ್ತೆ ಸೇರುವ ಬಿಂದುವರೆಗೆ.
ಗಮನ ಹರಿಸಲಿ: ಈ ಭಾಗದಲ್ಲಿ ಸುಮಾರು 12 ಸಾವಿರ ಜನಸಂಖ್ಯೆ, 2800 ಮನೆಗಳು ಹಾಗೂ 1 ಸಾವಿರಕ್ಕೂ ಅಧಿಕ ಉದ್ದಿಮೆಗಳಿವೆ. ದೇವರಾಜ ಮಾರುಕಟ್ಟೆ, ಶಿವರಾಂ ಪೇಟೆ, ಬೋಟಿ ಬಜಾರ್‌ನ ಹಣ್ಣಿನ ಮಂಡಿ, ಮಾಂಸದ ಮಾರುಕಟ್ಟೆ ಹಾಗೂ ಮುಂತಾದ ವ್ಯಾಪಾರ ಕೇಂದ್ರಗಳು ಇರುವುದರಿಂದ ತ್ಯಾಜ್ಯದ ಉತ್ಪಾದನೆ ಅಧಿಕವಾಗಿದೆ. ಸೂಕ್ತ ಸವಲತ್ತು ಕಲ್ಪಿಸಿ ಸ್ವಚ್ಛತೆಗೆ ಅಧಿಕಾರಿಗಳು ಗಮನ ಹರಿಸಬೇಕು.

ಮೈಸೂರಿನ ಹೃದಯ ಭಾಗವಾಗಿರುವ ಈ ವಾರ್ಡ್‌ನ್ನು ಸುಂದರವಾಗಿ ಹಾಗೂ ಸ್ವಚ್ಛವಾಗಿ ಇರಿಸಿಕೊಳ್ಳಬೇಕು ಎಂಬುದು ನನ್ನ ಪ್ರಮುಖ ಆಶಯ. ಆದರೆ ಅದಕ್ಕೆ ಬೇಕಾದ ಸಿಬ್ಬಂದಿ ಹಾಗೂ ವಾಹನದ ಕೊರತೆಯಿದೆ. ಅಲ್ಲದೆ ಈ ಪ್ರದೇಶವು ವ್ಯಾಪರ ಕೇಂದ್ರವಾಗಿರು ಕಾರಣ ಇಲ್ಲಿ ತ್ಯಾಜ್ಯದ ಉತ್ಪಾದನೆ ತುಂಬ ಹೆಚ್ಚು. ಬೀದಿಬದಿ ವ್ಯಾಪಾರಿಗಳು ಹಾಗೂ ಮಂಡಿ ವರ್ತಕರು ಕಸವನ್ನು ಹಾಕುವುದಿದೆ. ಇಲ್ಲಿನ ಮಂಡಿಗಳನ್ನು ಸದ್ಯದಲ್ಲಿಯೇ ಎಪಿಎಂಸಿಗೆ ವರ್ಗಾಯಿಸಲಾಗುವುದು. ಆಗ ಈ ಸಮಸ್ಯೆ ತಪ್ಪಲಿದೆ. ಈಗಾಗಲೇ ವರ್ತಕರೊಂದಿಗೆ ಚರ್ಚಿಸಲಾಗಿದ್ದು, ಇನ್ನು ಒಂದು ತಿಂಗಳ ಕಾಲಾವಕಾಶ ಕೋರಿದ್ದಾರೆ.  
-ಎಂ.ಜೆ. ರವಿಕುಮಾರ್, ವಾರ್ಡ್  35, ನಗರ ಪಾಲಿಕೆ ಸದಸ್ಯರು, ಮಾಜಿ ಉಪಮೇಯರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com