ಮೈಸೂರು: ವಿಪ್ರರು ಜಾತ್ಯತೀತ ಮನೋಭಾವ ಹೊಂದುವುದು ಅವಶ್ಯಕ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಸಪ್ತಪದಿ ವಿವಾಹ ವೇದಿಕೆ ಹಾಗೂ ಮಂಗಳ ಸೂತ್ರ ಪತ್ರಿಕೆಯ ಸಂಯುಕ್ತಾಶ್ರಯದಲ್ಲಿ ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾನುವಾರ ಏರ್ಪಡಿಸಿದ್ದ ಅಂತಾರಾಜ್ಯ ಮಟ್ಟದ ಬ್ರಾಹ್ಮಣ ವಧು ವರರ ಸಮಾವೇಶದಲ್ಲಿ ಮಂಗಳ ಸೂತ್ರ ಪತ್ರಿಕೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಾನು ಬ್ರಾಹ್ಮಣ ಸಮುದಾಯದಕ್ಕೆ ಸೇರಿದ್ದು, ನನ್ನ ಕ್ಷೇತ್ರದಲ್ಲಿ ವಿಪ್ರ ಜನಾಂಗದವರು ಕೇವಲ 350 ಕುಟುಂಬಗಳು ಮಾತ್ರ ಇವೆ. ಉಳಿದಂತೆ ಲಿಂಗಾಯಿತರು, ಒಕ್ಕಲಿಗರು, ಕುರುಬರು ಮತ್ತಿತರ ಜಾತಿಯವರೇ ಹೆಚ್ಚಾಗಿದ್ದಾರೆ. ಆದರೂ ಅವರು ನನ್ನನ್ನು ಗೆಲ್ಲಿಸಿದರು. ಇದಕ್ಕೆ ಮತದಾರರ ಜಾತ್ಯತೀತ ಮನೋಭಾವ ಕಾರಣ. ಅಂತೆಯೇ ಇಂದಿನ ಆಧುನಿಕ ಜಗತ್ತಿಗೆ ಅನುಗಣವಾಗಿ ವಿಪ್ರರು ಸಹ ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳುವುದು ಅವಶ್ಯಕ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಸಭಾಪತಿ ಕೆ. ರಘುರಾಂ, ಪುರೋಹಿತರು, ಅಡುಗೆ ಕೆಲಸ ಮಾಡುವವರು ಹಾಗೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡವರಿಗೆ ಹೆಣ್ಣು ಕೊಡುತ್ತಿಲ್ಲ. ಅಲ್ಲದೆ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ಜಾತಿಯ ಮಕ್ಕಳನ್ನು ವಿವಾಹ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮೇಲುಕೋಟೆ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಲಕ್ಷ್ಮೀಕಾಂತ್ ಅಧ್ಯಕ್ಷತೆ ವಹಿಸಿದ್ದರು.