ಮೈಸೂರು: ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಭಾನುವಾರ ಚಾಲನೆ ನೀಡಿದರು.
ಜಿಲ್ಲಾ ಬ್ಯಾಡ್ಮಿಂಟನ್ ಸಂಘವು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿಗೆ ಅವರು ಚಾಲನೆ ನೀಡಿದರು. ಈ ವೇಳೆ ಪತ್ರಿಕೋದ್ಯಮಿ ಮತ್ತು ಸಂಘದ ಕಾರ್ಯಕಾರಿ ಅಧ್ಯಕ್ಷ ರಾಜಶೇಖರ ಕೋಟಿ ಅವರು, ತಮ್ಮ ಸಂಘಟನೆ ಹಲವು ವರ್ಷಗಳಿಂದ ಬ್ಯಾಡ್ಮಿಂಟನ್ಗೆ ಉತ್ತೇಜನ ನೀಡುತ್ತ ಬಂದಿದೆ. ಆದರೆ ಬ್ಯಾಡ್ಮಿಂಟನ್ ಆಡಲು ಸ್ವಂತ ಜಾಗ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರದಿಂದ ಸೂಕ್ತ ಸ್ಥಳದಲ್ಲಿ ಬ್ಯಾಡ್ಮಿಂಟನ್ ಪಂದ್ಯಕ್ಕೆ ಸ್ಥಳಾವಕಾಶ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್ ಅವರು, ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಸ್ಥಳ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಎಂಡಿಎ ಆಯುಕ್ತ ಎಸ್.ಪಾಲಯ್ಯ ಮಾತನಾಡಿ, ಎಂಡಿಎ ವತಿಯಿಂದ ಸೂಕ್ತ ಸ್ಥಳ ದೊರಕಿದರೆ ನೀಡುವುದಾಗಿ ತಿಳಿಸಿದರು. ಇದೆ ವೇಳೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿನ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಸಂಘದ ಉಪಾಧ್ಯಕ್ಷ ಎಸ್.ಜಿ.ಪ್ರಭು, ಯುವಜನ ಕ್ರೀಡೆ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್ ಇದ್ದರು.