ರಾಯಚೂರು: ಇಲ್ಲಿಗೆ ಸಮೀಪದ ಯರಮರಸ್ ಬಳಿಯ ನಿರ್ಮಾಣ ಹಂತದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಕಾಮಗಾರಿಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವಲ್ಲಿ ಆಗಿರುವ ವಿಳಂಬ ಖಂಡಿಸಿ ಸೋಮವಾರ ರೈತರು ಹೋರಾಟಕ್ಕೆ ಮುಂದಾಗಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ರೈತರಿಂದ ವಿದ್ಯುತ್ ಯೋಜನೆಗೆ ಭೂಸ್ವಾಧೀನ ಪಡಿಸಿಕೊಂಡು ಕಾಮಗಾರಿ ಆರಂಭಿಸಿದ್ದರೂ ಪರಿಹಾರ ನೀಡದಿರುವ ಬಗ್ಗೆ ತೀವ್ರ ಅಸಮಾಧಾನಗೊಂಡ ರೈತರು ಸೋಮವಾರ ಕಾಮಗಾರಿ ಸ್ಥಳಕ್ಕೆ ಧಾವಿಸಿ ಕಾಮಗಾರಿಗೆ ಅಡ್ಡಿಪಡಿಸಿದರು. ಈ ವೇಳೆ ಕೆಪಿಸಿ ಅಧಿಕಾರಿಗಳು ರೈತರ ಮನವೊಲಿಸಲು ಮುಂದಾದರು. ಆದರೆ ರೈತರು ಅಧಿಕಾರಗಳ ಮಾತಿಗೆ ಒಪ್ಪದೇ ಕಾಮಗಾರಿ ಸ್ಥಗಿತಗೊಳಿಸಲು ಒತ್ತಾಯಿಸಿದರು. ಯೋಜನೆಗಾಗಿ ಏಗನೂರು ಗ್ರಾಮದ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಪ್ರತಿ ಎಕರೆಗೆ 16 ಲಕ್ಷ ಪರಿಹಾರ ನಿಗದಿಪಡಿಸಲಾಗಿತ್ತು. ಆದರೆ 15 ಎಕರೆ ಭೂಮಿಗೆ ಪರಿಹಾರ ನೀಡುವ ವಿಷಯಕ್ಕೆ ಸಂಬಂಧಿಸಿ ಆ ಜಮೀನಿನ ಮಾಲೀಕತ್ವದಲ್ಲಿನ ಗೊಂದಲದಿಂದ ವಿವಾದ ಉಂಟಾಗಿತ್ತು. ಈ ಕುರಿತಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸರ್ಕಾರ ನಿರ್ಧಾರ ಕೈಗೊಳ್ಳದ್ದರಿಂದ ರೈತರಿಗೆ ಪರಿಹಾರ ದೊರೆತಿರಲಿಲ್ಲ. ಇದೇ ಕಾರಣಕ್ಕೆ ಸೋಮವಾರ ರೈತರು ಪರಿಹಾರಕ್ಕೆ ಆಗ್ರಹಿಸಿ, ನಿರ್ಮಾಣ ಹಂತದಲ್ಲಿರುವ 800 ಮೆವ್ಯಾ ವಿದ್ಯುತ್ ಯರಮರಸ್ ಶಾಖೋತ್ಪನ್ನ ವಿದ್ಯುತ್ ಯೋಜನೆಯ ಎರಡು ಘಟಕಗಳ ಕಾಮಗಾರಿಗೆ ತಡೆಯೊಡ್ಡಿದ್ದು ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement