ರಾಯಚೂರು: ಇಲ್ಲಿನ ಹಳೆಯ ಆಶ್ರಯ ಕಾಲನಿಯಲ್ಲಿ ವಾಸವಾಗಿರುವ 206 ಬಡ ಕುಟುಂಬಗಳಿಗೆ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಹಕ್ಕುಪತ್ರ ವಿತರಣೆಗೆ ಒಂದು ವಾರದ ಗಡುವು ನೀಡಲಾಗಿದೆ. ನಗರಸಭೆ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ಹೋರಾಟ ನಡೆಲಾಗುವುದು ಎಂದು ಕರ್ನಾಟಕ ರೈತ ಸಂಘದ ಮುಖಂಡ ಎಸ್.ರಾಜಶೇಖರ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಘ ಹಾಗೂ ಕರ್ನಾಟಕ ರೈತ ಸಂಘದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಯ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಹಕ್ಕುಪತ್ರ ವಿತರಣೆಗೆ ಸೂಚಿಸಬೇಕಿದೆ ಎಂದು ಒತ್ತಾಯಿಸಿದರು.
ಪ್ರಭಾವಿಗಳ ಹಿಂಬಾಲಕರಿಗೆ ಮನೆ: ಸರ್ಕಾರ ನಗರ ಹೊರವಲಯದ 53 ಎಕರೆ ಪ್ರದೇಶದಲ್ಲಿ ಬಡ ನಿವೇಶನ ರಹಿತರಿಗೆ 1,125 ಆಶ್ರಯ ಮನೆಗಳನ್ನು ನಿರ್ಮಿಸಿದೆ. ಬಹುತೇಕ ನಿವೇಶನ ಶಾಸಕರು, ಪ್ರಭಾವಿಗಳ ಹಿಂಬಾಲಕರಿಗೆ ಮನೆ ಹಂಚಿಕೆ ಮಾಡಿ ಈ ಹಿಂದೆ ಹಕ್ಕುಪತ್ರ ನೀಡಲಾಗಿದೆ. ಅದೇ ಪ್ರದೇಶದಲ್ಲಿ ಹಲವು ವರ್ಷಗಳಿಂದ ವಾಸಿಸುವ 206 ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡುವಲ್ಲಿ ನಗರಸಭೆ ಹಾಗೂ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿವೆ ಎಂದು ಆರೋಪಿಸಿದರು.
ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಎರಡೂ ಸಂಘಟನೆಗಳು ಕಳೆದ ಐದು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಆಡಳಿತಗಳು ಮಾತ್ರ ಆಸಕ್ತಿ ವಹಿಸಿಲ್ಲ. ಜು.2ರಂದು ನಗರಸಭೆ ಮುಂದೆ ಹಲವು ದಿನಗಳ ಧರಣಿ ನಡೆಸಿದ ನಂತರ ಪೌರಾಯುಕ್ತರು, ಶಾಸಕ ಡಾ. ಶಿವರಾಜ ಪಾಟೀಲ್ ಜತೆಗೂಡಿ ವಾರದಲ್ಲಿ ಹಕ್ಕುಪತ್ರ ನೀಡುವ ಭರವಸೆ ಕೊಟ್ಟಿದ್ದರು. ಆದರೆ ಆದರೆ ಅನೇಕ ದಿನಗಳು ಕಳೆದರೂ ಹಕ್ಕುಪತ್ರದ ವಿಚಾರದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು.
ಒತ್ತುವರಿ: ಆಶ್ರಯ ಕಾಲನಿಯನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈಗಾಗಲೇ ರಾಜಕೀಯ ನಾಯಕರ ಹಿಂಬಾಲಕರು ಪಡೆದ ಮನೆಗಳನ್ನು ಮಾರಾಟ ಮಾಡಿಕೊಳ್ಳಲಾಗುತ್ತಿದೆ. ಕೆಲವರು ನಗರಸಭೆ ಸದಸ್ಯರ ಪ್ರಭಾವದಿಂದ ಮಧ್ಯವರ್ತಿಗಳ ಮೂಲಕ ನಿವೇಶನ ಮಾರಾಟಕ್ಕೆ ಮುಂದಾಗಿದ್ದಾರೆಂದು ದೂರಿದರು.
ಹಕ್ಕುಪತ್ರ ಹೊಂದಿರದ 206 ಬಡ ಕುಟುಂಬಗಳಿಗೆ ಪ್ರಭಾವಿ ವ್ಯಕ್ತಿಗಳು ಗೂಂಡಾಗಳ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದಾರೆ. ನಗರಸಭೆ, ಶಾಸಕರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಕ್ಷಣವೇ ಬಡವರಿಗೆ ವಾರದೊಳಗೆ ಹಕ್ಕುಪತ್ರ ನೀಡಬೇಕು. ತಪ್ಪಿದಲ್ಲಿ ಆ.13ರ ನಂತರ ಅನಿರ್ದಿಷ್ಟ ಹೋರಾಟ ಆರಂಭಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭ ಸಂಘದ ಮುಖಂಡರಾದ ನೂರಜಾನ್, ಮಣಿ, ನಾಗೇಶ, ಗೌಸ್, ನಬಿಸಾಬ್, ಗುರುಸ್ವಾಮಿ ಇದ್ದರು.
Advertisement