-ವಿಶೇಷ ವರದಿ
ಯಾದಗಿರಿ: ಜಿಲ್ಲೆಯ ಬಹುತೇಕ ಪ್ರದೇಶ ನೀರಾವರಿಗೊಳಪಟ್ಟಿದ್ದು, ಕೇಂದ್ರ- ರಾಜ್ಯ ಸರ್ಕಾರ ಕೃಷಿಕರ ಅಭಿವೃದ್ಧಿಗೆ ಹತ್ತು ಹಲವು ಯೋಜನೆ ಜಾರಿಗೊಳಿಸಿವೆ. ಆದರೆ ಅವುಗಳು ಜಿಲ್ಲೆಯ ರೈತರ ಪಾಲಿಗೆ ಗಗನಕುಸುಮ.
ಏಕೆಂದರೆ, ನೀರಾವರಿ ಪ್ರದೇಶದ ಬೆಳೆಗಾರರಿಗೆ ತೋಟಗಾರಿಕೆ ಬೆಳೆ ನಿರ್ವಹಣೆ, ಕಾಲಕಾಲಕ್ಕೆ ಮಾಹಿತಿ, ಸರ್ಕಾರದ ಸೌಲಭ್ಯ, ಸಬ್ಸಿಡಿ, ನೂತನ ತಂತ್ರಜ್ಞಾನ ಉಪಕರಣಗಳ ಬಳಕೆಯ ಕುರಿತು ಮಾರ್ಗದರ್ಶನ ನೀಡಬೇಕಾದ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿಂದ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ.
ಜಿಲ್ಲೆಯ ತೋಟಗಾರಿಕೆ ಇಲಾಖೆಯಲ್ಲಿ ಒಟ್ಟು 59 ಹುದ್ದೆಗಳು ಖಾಲಿಯಿದ್ದರೆ ಜಿಲ್ಲಾ ಕಚೇರಿಯಲ್ಲೇ 19 ಹುದ್ದೆಗಳ ಪೈಕಿ ನಾಲ್ವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಪನಿರ್ದೇಶಕರ ಹುದ್ದೆಯನ್ನು ಗುಲ್ಬರ್ಗ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರಿಗೆ ಪ್ರಭಾರಿ ವಹಿಸಲಾಗಿದೆ. ಇನ್ನು ಮೂರು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗಳೂ ಖಾಲಿಯಿವೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಈಗಾಗಲೇ ಕೆಲಸದ ಒತ್ತಡದಲ್ಲಿರುವ ಗುಲ್ಬರ್ಗ ದೊಡ್ಡ ಜಿಲ್ಲೆಯ ಅಧಿಕಾರಿಗೆ ಯಾದಗಿರಿ ಜಿಲ್ಲೆಗೂ ಪ್ರಭಾರಿಯಾಗಿ ನೇಮಿಸಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಜಿಲ್ಲೆಯಲ್ಲಿ ನೀರಾವರಿ ಸವಲತ್ತುಗಳಿದ್ದರೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ಕೊರತೆಯಿಂದ ಆ ಕ್ಷೇತ್ರದಲ್ಲಿ ರೈತರು ಆಸಕ್ತಿ ತೋರದೆ ಇರುವುದು ತೋಟಗಾರಿಕೆ ಬೆಳೆಗೆ ಭಾರೀ ಹಿನ್ನೆಡೆಯಾಗಿದೆ.
ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣ 5.16 ಲಕ್ಷ ಹೆಕ್ಟೇರ್ ಇದ್ದು, ಇದರಲ್ಲಿ 3.9 ಲಕ್ಷ ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಅದರಲ್ಲಿ ತೋಟಗಾರಿಕಾ ಕ್ಷೇತ್ರ 7,152 ಹೆಕ್ಟೇರ್. 2,035 ಹೆಕ್ಟೇರ್ನಲ್ಲಿ ಹಣ್ಣುಗಳನ್ನು, 3,231 ಹೆಕ್ಟೇರ್ನಲ್ಲಿ ತರಕಾರಿ, 1,346 ಹೆಕ್ಟೇರ್ನಲ್ಲಿ ಸಾಂಬಾರು ಬೆಳೆ, 393 ಹೆಕ್ಟೇರ್ನಲ್ಲಿ ತೆಂಗು, 129 ಹೆಕ್ಟೇರ್ನಲ್ಲಿ ಹೂವಿನ ಬೆಳೆಗಳನ್ನು ಬೆಳೆಯುವ ಕ್ಷೇತ್ರವಿದೆ.
ಯೋಜನೆ ರೈತರಿಗೆ ತಲುಪುತ್ತಿಲ್ಲ: ಇದರ ಜೊತೆಗೆ ನಾರಾಯಣಪುರ, ಹತ್ತಿಕುಣಿ ಜಲಾಶಯದಲ್ಲಿ ತೋಟಗಾರಿಕೆ ನರ್ಸರಿಗಳಿದ್ದು ಜಿಲ್ಲೆಯಲ್ಲಿ 2.46 ಲಕ್ಷ ಹೆಕ್ಟೇರ್ ಕ್ಷೇತ್ರವನ್ನು ತೋಟಗಾರಿಕೆಗೆ ಬಳಸಿಕೊಳ್ಳಬಹುದು. ಆದರೆ ಪ್ರಸ್ತುತ 7,152 ಹೆಕ್ಟೇರ್ ಮಾತ್ರ ತೋಟಗಾರಿಕೆಗೆ ಬಳಕೆಯಾಗುತ್ತಿದೆ. ಸಿಬ್ಬಂದಿಗಳ ಕೊರತೆಯಿಂದ ಸರ್ಕಾರದ ಹಲವಾರು ಪ್ರಮುಖ 25-35 ಪ್ಯಾಕೇಜು ಯೋಜನೆಗಳನ್ನು ಜಿಲ್ಲೆಯ ರೈತರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.
ರೈತರು ತೋಟಗಾರಿಕೆ ಬಗ್ಗೆ ಆಸಕ್ತಿ ತೋರದ ಕಾರಣ ತರಕಾರಿಯನ್ನೂ ಹೊರ ಜಿಲ್ಲೆಯಿಂದ ತರಿಸಿಕೊಳ್ಳುವ ಅನಿವಾರ್ಯತೆ ಒದಗಿದೆ ಎಂದು ಜಿಪಂ ಮಾಜಿ ಸದಸ್ಯ, ಪ್ರಗತಿಪರ ರೈತ ಶಂಕ್ರಣ್ಣ ವಣಿಕ್ಯಾಳ ಕಳವಳ ವ್ಯಕ್ತಪಡಿಸಿದರು.
ಮಾರುಕಟ್ಟೆ ವ್ಯವಸ್ಥೆಯಿಲ್ಲ: ಜಿಲ್ಲೆಯಲ್ಲಿ ರೈತರು ಬೆಳೆದ ಹಣ್ಣು ಮತ್ತು ತರಕಾರಿ ಮಾರಲು ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಜೊತೆಗೆ ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್ ಇಲ್ಲ. ಅದಕ್ಕಾಗಿ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಆಸಕ್ತಿ ತೋರುತ್ತಿಲ್ಲ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರು ಅವರ ಜೊತೆ ಈ ಕುರಿತು ಚರ್ಚಿಸಿದ್ದೇನೆ. ಅವರು ಸಿಎಂ ಗಮನ ಸೆಳೆದು ಸೂಕ್ತ ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ. ಆದರೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ತೋಟಗಾರಿಕೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿ ಜಿಲ್ಲೆಯ ರೈತರಿಗೆ ತೋಟಗಾರಿಕೆಯ ಸವಲತ್ತು ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
'ಪ್ಯಾಕೇಜ್ ಹೌಸ್'ನಿಂದ ವಂಚಿತ
ಈ ಯೋಜನೆಯನ್ನು ಸಿಎಂ ಬಜೆಟ್ನಲ್ಲಿ ಘೋಷಣೆ ಮಾಡಿದ್ದು, ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಂಡರೂ ಯಾದಗಿರಿಯಲ್ಲಿ ಮಾತ್ರ ಜಾರಿಯಲ್ಲಿಲ್ಲ. ಅಧಿಕ ನೀರಾವರಿ ಪ್ರದೇಶವಿದ್ದರೂ ಯೋಜನೆಯಿಂದ ವಂಚಿತವಾಗಿದೆ. ಪ್ರತಿ ರೈತರಿಗೆ ತೋಟಗಾರಿಕಾ ಕ್ಷೇತ್ರ ಅಭಿವೃದ್ಧಿಗಾಗಿ ಹಣ ನೀಡಿ ಇದರಿಂದ ತೋಟಗಾರಿಕೆಗೆ ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ. ಆದರೆ ಈ ಯೋಜನೆಯ ಬಗ್ಗೆ ಯಾವೊಬ್ಬ ಚುನಾಯಿತ ಶಾಸಕರೂ ವಿಧಾನಸಭೆಯ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತೆತ್ತದೆ ರೈತರ ಬಗ್ಗೆ ಕಾಳಜಿ ತೋರದಿರುವುದು ವಿಷಾದಕರ ಸಂಗತಿ.