ರಾಯಚೂರು: ಗ್ರಾಹಕರು ಮತ್ತು ಬ್ಯಾಂಕಿನ ಸಿಬ್ಬಂದಿ ಮಧ್ಯದ ಸೌಹಾರ್ದ ಸಂಬಂಧವೇ ಭ್ರಮಾರಾಂಬ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಪ್ರಗತಿಗೆ ಕಾರಣ. ಬ್ಯಾಂಕು ಕಳೆದ 14 ವರ್ಷಗಳಿಂದ ಆರ್ಥಿಕ ಪ್ರಗತಿ ಸಾಧಿಸುತ್ತಿದೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರೇಶ ಹಿರೇಮಠ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಭ್ರಮಾರಂಬಾ ಪತ್ತಿನ ಸೌಹಾರ್ದ ಸಹಕಾರಿ ರಾಯಚೂರು ಶಾಖೆಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯಲ್ಲಿ ಮಾತನಾಡಿ, ರಿಸರ್ವ್ ಬ್ಯಾಂಕಿನ ನಿಯಮಗಳನುಸಾರ ಸಹಕಾರಿ ನಿಯಮಿತವು ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಇತರೆ ಭಾಗಗಳಿಗೆ ಶಾಖೆಗಳನ್ನು ವಿಸ್ತರಿಸುವ ಯೋಚನೆಯಿದೆ ಎಂದರು.
ಲಿಂಗಸ್ಗೂರು ತಾಲೂಕಿನ ಮಸ್ಕಿಯಲ್ಲಿ ಬ್ಯಾಂಕಿನ ಮೂಲ ಶಾಖೆಯಿದ್ದು, 2005ರಲ್ಲಿ ಲಿಂಗಸ್ಗೂರು, 2008ರಲ್ಲಿ ಸಿರಗುಪ್ಪ, 2010ರಲ್ಲಿ ಮಾನವಿ ತಾಲೂಕಿನ ಕವಿತಾಳ ಹಾಗೂ 2013ರಲ್ಲಿ ರಾಯಚೂರು ನಗರದಲ್ಲಿ ಬ್ಯಾಂಕು ಶಾಖೆ ತೆರೆದಿದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
1.24 ಕೋಟಿ ನಿವ್ವಳ ಲಾಭ: ಸದ್ಯ ಒಟ್ಟು 5 ಶಾಖೆಗಳು 77 ಕೋಟಿ ಠೇವಣಿ ಹೊಂದಿದ್ದು, 55 ಕೋಟಿ ಸಾಲ ಸೌಲಭ್ಯ ಒದಗಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕು 1.24 ಕೋಟಿ ನಿವ್ವಳ ಲಾಭ ಗಳಿಸಿದೆ. ಅದರಲ್ಲೂ ರಾಯಚೂರು ಶಾಖೆ 11.20 ಲಕ್ಷ ಷೇರು ಬಂಡವಾಳದೊಂದಿಗೆ ಆರಂಭವಾಗಿದ್ದು, ಸದ್ಯ 4.5 ಕೋಟಿ ಠೇವಣಿ ಹೊಂದಿದೆ. 2.8 ಕೋಟಿ ಸಾಲವನ್ನು ವಿತರಿಸಿದೆ ಎಂದು ತಿಳಿಸಿದರು.
ರಾಯಚೂರು ಶಾಖೆಯ ಹಿರಿಯ ಸಮನ್ವಯಕಾರ ಎಸ್.ಕಮಲ್ ಕುಮಾರ ಮಾತನಾಡಿ, ಆರ್ಥಿಕ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅದು ಸಂಗ್ರಹಿಸುವ ಠೇವಣಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತೆಯೇ ಭ್ರಮರಾಂಬ ಸಹಕಾರ ಸಂಸ್ಥೆಯು ಗ್ರಾಹಕರ ವಿಶ್ವಾಸ ಗಳಿಸಿ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕಿನ ಚಾರ್ಟರ್ಡ್ ಅಕೌಂಟೆಂಟ್ ಎ.ಕೆ. ಚನ್ನಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಿದರು.
ಸನ್ಮಾನ: ಸಮಾರಂಭದಲ್ಲಿ ಈಚೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ನವೀನ್ ಕುಮಾರ್ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.