ಜೋಗದಲ್ಲಿ ಶವ ಮೇಲೆತ್ತಲು ಜ್ಯೋತಿರಾಜ್ ಹರಸಾಹಸ

ಕ.ಪ್ರ.ವಾರ್ತೆ ಜೋಗ್‌ಫಾಲ್ಸ್  ಆ.12
ಜೋಗ ಜಲಪಾತದ ರಾಜಾಫಾಲ್ಸ್‌ನಲ್ಲಿ ನೀರು ಪಾಲಾಗಿದ್ದ ಹುಬ್ಬಳ್ಳಿಯ ಮೂವರ ಶವಗಳನ್ನು ಮೇಲೆತ್ತಲು ಸೋಮವಾರ ಚಿತ್ರದುರ್ಗದ ಜ್ಯೋತಿ ರಾಜ್ (ಕೋತಿ ರಾಮ) ಭಾರಿ ಪ್ರಯತ್ನ ನಡೆಸಿದರೂ ಯಾವುದೇ ರೀತಿಯ ಪ್ರಯೋಜನ ಕಾಣಲಿಲ್ಲ.
ಸೋಮವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಜಲಪಾತದ ರಾಜಾ ಫಾಲ್ಸ್‌ನಿಂದ ಹಗ್ಗದ ಸಹಾಯದೊಂದಿಗೆ ಕೆಳಕ್ಕಿಳಿಯಲು ಪ್ರಾರಂಭಿಸಿದ ಜ್ಯೋತಿ ರಾಜ್ ಜಲಪಾತದ ಕೆಳಭಾಗದಲ್ಲಿ ಸುಮಾರು 2 ಗಂಟೆಗಳ ಕಾಲ ಭಾರಿ ಹುಡುಕಾಟ ನಡೆಸಿದರು. 2 ಶವಗಳು ಪತ್ತೆಯಾದರೂ ಜಲಪಾತದ ನೀರಿನ ಸೆಳೆತ ಹೆಚ್ಚಿದ್ದರಿಂದ ಶವಗಳನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ.
ಜಲಪಾತದ ಮೇಲ್ಭಾಗದಿಂದ ಕೆಳಕ್ಕಿಳಿದ ಜ್ಯೋತಿರಾಜ್ ನಂತರ ಮೆಟ್ಟಿಲುಗಳ ಮೂಲಕ ಮೇಲಕ್ಕೆ ಬಂದರು.
ಜಲಪಾತದ ಕೆಳಭಾಗದಲ್ಲಿ ಜೋಗ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಅರುಣ್, ನಾಗರಾಜ್ ಮತ್ತಿತರರು ಹಾಜರಿದ್ದರೆ, ಜಲಪಾತದ ಮೇಲ್ಭಾಗದಲ್ಲಿ ಸಿದ್ಧಾಪುರ ಠಾಣೆಯ ಸಿಪಿಐ ವೀರೇಂದ್ರಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಹಾಜರಿದ್ದರು.

15ರಂದು ಕವಿಗೋಷ್ಠಿ
ಶಿವಮೊಗ್ಗ: ಕರ್ನಾಟಕ ಲೇಖಕಿಯರ ಸಂಘ 15ರಂದು ಕರ್ನಾಟಕ ಸಂಘದಲ್ಲಿ ಕಾವ್ಯಧಾರೆ ಕವಿಗೋಷ್ಠಿ ಆಯೋಜಿಸಿದೆ. ಲೇಖಕ- ಲೇಖಕಿಯರಿಂದ ಕವನಗಳನ್ನು ಆಹ್ವಾನಿಸಿದ್ದು, ಅವುಗಳ ಪೈಕಿ 20 ಆಯ್ದ ಕವಿತೆಗಳನ್ನು ಅತ್ಯುತ್ತಮವಾದುದೆಂದು ಪರಿಗಣಿಸಿದ್ದು, ಅವುಗಳನ್ನು ವಾಚನ ಮಾಡಲು ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಗೋಷ್ಠಿಯನ್ನು ಲೇಖಕಿ ವಿಜಯಶ್ರೀ ಉದ್ಘಾಟಿಸಲಿದ್ದಾರೆ.

ವಿಪ್ರ ಸಮಾಜಕ್ಕೆ ದಿವಾಕರರ ಕೊಡುಗೆ ಏನು?
ಶಿವಮೊಗ್ಗ: ಬಿಜೆಪಿ ಶಿವಮೊಗ್ಗದ ವಿಪ್ರ ಸಮಾಜ ಸೇರಿದಂತೆ, ಎಲ್ಲಾ ವರ್ಗಗಳ ಶ್ರೇಯಸ್ಸಿಗಾಗಿ ಕೆಲಸ ಮಾಡಿದೆ. ಶಿವಮೊಗ್ಗದ 70ಕ್ಕೂ ಹೆಚ್ಚು ವಿಪ್ರ ಸಂಘಟನೆಗಳು, ಬಿಜೆಪಿಯ ಜನ ಪ್ರತಿನಿಧಿಗಳ ಸಾಧನೆಯನ್ನು ಮೆಚ್ಚಿ ಪುರಸ್ಕರಿಸಿದೆ. ಹೀಗಾಗಿ ಈ ವಿಚಾರದಲ್ಲಿ ಕೆ. ದಿವಾಕರ್ ಅವರ ಪ್ರಮಾಣಪತ್ರ ನಮಗೆ ಅಗತ್ಯವಿಲ್ಲ. ಇಷ್ಟಾಗಿಯೂ ಶಿವಮೊಗ್ಗಕ್ಕೆ ಅಥವಾ ವಿಪ್ರ ಸಮಾಜಕ್ಕೆ ದಿವಾಕರರ ಕೊಡುಗೆಯಾದರೂ ಏನು ಉಳಿದವರ ಸಾಧೆನಗಳ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ, ಹಕ್ಕು ಅವರಿಗೆ ಇಲ್ಲ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ.
ಇತ್ತೀಚೆಗೆ ವಿಪ್ರ ನೌಕರರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆ. ದಿವಾಕರ್ ತಮ್ಮ ಎಲ್ಲೆ ಮೀರಿ ಬಿಜೆಪಿಯ ಜನ ಪ್ರತಿನಿಧಿಗಳ ವಿರುದ್ಧ ಮಾತನಾಡಿದ್ದಾರೆ. ದಿವಾಕರ್‌ಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿದ್ದು ಬಿಜೆಪಿಯೇ. ನಮ್ಮಿಂದ ಎಲ್ಲಾ ಸವಲತ್ತು, ರಾಜಕೀಯ ಸ್ಥಾನಮಾನ ಗಳಿಸಿ ಮೆರೆದ ದಿವಾಕರ್ ಈಗ ಜಾತಿ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇವರೇ ಬಾಳೆಎಲೆಯಂತೆ ಪಕ್ಷವನ್ನು ತೊರೆದಿರುವುದು ಎಂಬುದನ್ನು ಅವರು ನೆನಪಿಟ್ಟುಕೊಳ್ಳಲಿ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್, ಬಿಜೆಪಿ ಮುಖಂಡ ಎಸ್. ಅನಂತಶಾಸ್ತ್ರಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com