ಸಾಗರ: ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಸುಧಾಕರ ಕುಗ್ವೆ ಎಂಬವರ ಜಮೀನಿಗೆ ಹೋಗಲು ರಸ್ತೆ ನಿರ್ಮಿಸುವ ಸಂಬಂಧ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಚರ್ಚೆ ಮಾಡದೆ ರೆಜಲ್ಯೂಷನ್ ಮಾಡಿರುವ ಆಡಳಿತ ಪಕ್ಷವನ್ನು ವಿರೋಧ ಪಕ್ಷದ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಏಕಪಕ್ಷೀಯ ನಿರ್ಧಾರ: ವಿರೋಧ ಪಕ್ಷ ಮುಖಂಡ ಸಂತೋಷ್ ಆರ್. ಶೇಟ್ ಮಾತನಾಡಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಸಂದರ್ಭದಲ್ಲಿ ಸುಧಾಕರ ಕುಗ್ವೆ ಎಂಬವರ ಜಮೀನು ನಗರಸಭೆ ಸ್ವಾಧೀನಪಡಿಸಿಕೊಂಡಿತ್ತು. ಉಳಿದ ಜಾಗಕ್ಕೆ ಹೋಗಲು ನಗರಸಭೆಯಿಂದ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸಂಬಂಧಪಟ್ಟವರು ನಗರಸಭೆಗೆ ಕೇಳಿಕೊಂಡಿದ್ದರು. ಆದರೆ, ರಸ್ತೆ ಮಂಜೂರು ವಿಷಯವನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡದೆ ಏಕಾಏಕಿ ಸಭೆ ಒಪ್ಪಿಗೆ ಸಿಕ್ಕಿದೆ ಎಂದು ದಾಖಲೆ ಪುಸ್ತಕದಲ್ಲಿ ಸೇರಿಸಿರುವುದು ಖಂಡನೀಯ. ಜಾಗ ಬಿಟ್ಟು ಕೊಟ್ಟವರಿಗೆ ರಸ್ತೆ ನಿರ್ಮಿಸಿಕೊಡಲು ನಮ್ಮದೇನು ತಕರಾರು ಇಲ್ಲ. ಆದರೆ, ಸಭೆಯ ಗಮನಕ್ಕೆ ತರದೆ ಕಾನೂನುಬಾಹಿರವಾಗಿ ಆಡಳಿತ ಪಕ್ಷ ಕೈಗೊಂಡಿರುವ ಏಕಪಕ್ಷೀಯ ನಿರ್ಧಾರ ಖಂಡಿಸುವುದಾಗಿ ತಿಳಿಸಿದರು.
ಬಿಜೆಪಿ ಸದಸ್ಯ ಎಸ್.ಎಲ್. ಮಂಜುನಾಥ್ ಮಾತನಾಡಿ, ಸಭೆಗೆ ಸುಳ್ಳು ಮಾಹಿತಿ ಕೊಡುವುದು ಕಾನೂನುಬಾಹಿರವಾಗಿದ್ದು, ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ, ಒಮ್ಮತದ ನಿರ್ಣಯ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಚರ್ಚೆ ನಡೆದಿಲ್ಲ: ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯ ವಿ.ಗುರು ಸಹ ನನ್ನ ವಾರ್ಡ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನನಗೂ ರಸ್ತೆ ನಿರ್ಮಿಸಿ ಕೊಡುವ ಬಗ್ಗೆ ಮಾಹಿತಿ ನೀಡಿಲ್ಲ. ಹಿಂದಿನ ಸಭೆಯಲ್ಲಿ ರಸ್ತೆ ನಿರ್ಮಿಸಿಕೊಡುವ ಸಂಬಂಧ ಚರ್ಚೆ ನಡೆದಿಲ್ಲ. ತಕ್ಷಣ ರೆಜಲ್ಯೂಷನ್ ರದ್ದುಗೊಳಿಸಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದಾಗ, ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ವಿರುದ್ಧ ಷೇಮ್- ಷೇಮ್ ಎಂಬ ಘೋಷಣೆ ಕೂಗಿದ ಘಟನೆಯೂ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಎನ್.ಲಲಿತಮ್ಮ ಮುಂದೆ ಸಭೆಯ ಗಮನಕ್ಕೆ ತಾರದೆ ಯಾವುದೆ ನಿರ್ಣಯ ಕೈಗೊಳ್ಳುವುದಿಲ್ಲ. ಸುಧಾಕರ ಅವರಿಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು. ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ವಿಳಂಬವಾಗಿರುವ ಕುರಿತು ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು, ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಭದ್ರೆಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.
ಉಪಾಧ್ಯಕ್ಷ ಸೈಯದ್ ಇಕ್ಬಾಲ್, ಪೌರಾಯುಕ್ತ ಚಂದ್ರಶೇಖರ್ ಇದ್ದರು.