ಶಿವಮೊಗ್ಗ: ಊರಿಗೊಂದು ಸ್ಮಶಾನವಿಲ್ಲದೇ ಶವವನ್ನು ಮನೆ ಮುಂದಿಟ್ಟುಕೊಂಡು ಪರದಾಡಿದ ಸನ್ನಿವೇಶ ಶಿವಮೊಗ್ಗ ಸಮೀಪದ ವಿರುಪಿನಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆಯಿತು.
ಅಂತಿಮವಾಗಿ ತಹಶೀಲ್ದಾರ್ ಮಾರ್ಗದರ್ಶನದಂತೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಉಳುಮೆ ಮಾಡುತ್ತಿದ್ದ ಸರ್ಕಾರಿ ಭೂಮಿಯಲ್ಲಿ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು.
ವಲಸೆ ಬಂದವರಿಂದ ವಿರುಪಿನಕೊಪ್ಪ ಗ್ರಾಮ ರಚನೆಯಾಗಿ ಬರೋಬ್ಬರಿ ಒಂದು ಶತಮಾನವೇ ಕಳೆದಿದೆ. ಆದರೆ ಅಲ್ಲಿಂದ ಇಲ್ಲಿಯವರೆಗೂ ಗ್ರಾಮಕ್ಕೆ ಪ್ರತ್ಯೇಕವಾದ ಸ್ಮಶಾನವಿಲ್ಲ. ಅವರಿವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದ ಜನರಿಗೆ ಸೋಮವಾರ ರುದ್ರಭೂಮಿಯ ಅನಿವಾರ್ಯತೆ ಎದುರಾಗಿದೆ. ಗ್ರಾಮಕ್ಕೆ ಸ್ವಂತದ್ದೊಂದು ಅಂತ್ಯಸಂಸ್ಕಾರದ ಸ್ಥಳ ಇಲ್ಲದ ಕಾರಣ ಮೂರು ದಿನದ ಹಿಂದಿನ ಶವವನ್ನು ಮನೆ ಮುಂದೆ ಇಟ್ಟು ಪರದಾಡಿದರು.
ಇದ್ದ ಕಾಡೆಲ್ಲ ಈಗ ನಿವೇಶನ: ಶಿವಮೊಗ್ಗ ನಗರದಿಂದ ಕೇವಲ 8 ಕಿ.ಮೀ. ದೂರದ ವಿರುಪಿನಕೊಪ್ಪ ಸುತ್ತೆಲ್ಲವೂ ಹಿಂದೆ ಕಾಡಿತ್ತು. ಆಗ ಸ್ಮಶಾನದ ಅನಿವಾರ್ಯತೆ ಎದುರಾಗಿರಲಿಲ್ಲ. ಆದರೆ ಇದೀಗ ಕಾಡೆಲ್ಲ ನಶಿಸಿ ಇರೋಬರೋ ಭೂಮಿಯೆಲ್ಲ ನಿವೇಶನಗಳಾಗಿ ಮಾರ್ಪಾಡಾಗುತ್ತಿರುವ ಸಂದರ್ಭದಲ್ಲಿ ಸ್ಮಶಾನದ ಅನಿವಾರ್ಯತೆ ಮತ್ತು ಅಗತ್ಯತೆ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ಸೋಮವಾರದ ಘಟನೆ: ಗ್ರಾಮದ ರಾಜು ಎಂಬುವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಆತಮ ಶವ ಹೂಳಲು ಸ್ಥಳ ಸಿಗಲಿಲ್ಲ. ಒಂದಿಷ್ಟು ಜಮೀನು ಇದ್ದೋರು ತಮ್ಮ ಜಮೀನಿನಲ್ಲೇ ಸಮಾಧಿ ಮಾಡುತ್ತಿದ್ದರು. ಆದೆ ಮೃತಪಟ್ಟಿರುವ ರಾಜು ಅವರ ಅಂತ್ಯಸಂಸ್ಕಾರಕ್ಕೆ ಸ್ಥಳವೇ ಇಲ್ಲದಂತಾಗಿತ್ತು. ಹಾಗಾಗಿ ಮೂರು ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಶವವನ್ನು ಮನೆಯ ಮುಂದೆಯೇ ಇಟ್ಟುಕೊಂಡಿದ್ದರು.
ಸೋಮವಾರ ಮುಂಜಾನೆ ಸ್ಮಶಾನಕ್ಕೆ ಜಾಗ ಹುಡುಕಾಡಲಾಯಿತು. ಮಧ್ಯಾಹ್ನದ ವೇಳೆಗೆ ಅಂತಿಮವಾಗಿ ಗ್ರಾಮದ ಸರ್ವೆ ನಂಬರ್ 41ರ ಸರ್ಕಾರಿ ಭೂಮಿಯನ್ನು ಸ್ಮಶಾನಕ್ಕೆಂದು ತಹಶೀಲ್ದಾರ್ ಗುರುತಿಸಿ ಒಪ್ಪಿಗೆ ಸೂಚಿಸಿದರು. ಬೀಳು ಬಿದ್ದ ಈ ಭೂಮಿಯನ್ನು ಕೆಲವು ದಿನಗಳ ಹಿಂದಷ್ಟೆ ರೈತರು ಉಳುಮೆ ಮಾಡಲು ಸಿದ್ಧತೆ ನಡೆಸಿದ್ದರು. ಅಂತಿಮವಾಗಿ ಸೋಮವಾರ ಸಂಜೆ 4ರ ಸುಮಾರಿಗೆ ರಾಜು ಅಂತ್ಯಕ್ರಿಯೆ ನಡೆಯಿತು.
ಜಿಲ್ಲಾಡಳಿತದ ಬಗ್ಗೆ ಅಸಮಾಧಾನ: ಕಳೆದ 15 ವರ್ಷಗಳಿಂದ ಗ್ರಾಮಕ್ಕೆ ಸ್ಮಶಾನ ಬೇಕು ಎಂದು ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿ ವರೆಗೂ ಅಲೆದಾಡಿದ್ದೇವೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಗ್ರಾಮದ ಹತ್ತಿರ ಇರುವ ಒಂದು ಎಕರೆ 3 ಗುಂಟೆ ಸರ್ಕಾರಿ ಜಮೀನನ್ನು ಸ್ಮಶಾನಕ್ಕೆಂದು ಮೀಸಲಿಡುವಂತೆ ಗ್ರಾಮ ಪಂಚಾಯಿತಿಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಜಿಲ್ಲಾಧಿಕಾರಿಗೆ ಕಳುಹಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಧಿಕಾರಿಗಳು ಮಾಡಿದ ನಿರ್ಲಕ್ಷ್ಯದಿಂದ ಮೂರು ದಿನದ ಶವವನ್ನು ಗ್ರಾಮದಲ್ಲಿಟ್ಟುಕೊಳ್ಳುವಂತೆ ಆಯಿತು ಎಂದು ಗ್ರಾಪಂ ಸದಸ್ಯ ಚಿದಂಬರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಯಾರೇ ತೀರಿಕೊಂಡರೂ ಗ್ರಾಮದ ಮುಂದಿನ ಹೊಲದಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಆ ಭೂಮಿಯನ್ನು ಖಾಸಗಿಯೊಬ್ಬರಿಗೆ ಮಾರಾಟವಾಗಿತ್ತು. ನಂತರ ಯಾವುದೇ ಶವ ಹೂಳಲು ಅವಕಾಶ ಕೊಡುತ್ತಿಲ್ಲ.
ಇದಕ್ಕೂ ಪೂರ್ವದಲ್ಲೇ ಗ್ರಾಮಸ್ಥರು ಗ್ರಾಮಪಂಚಾಯ್ತಿಯಿಂದ ಜಿಲ್ಲಾಡಳಿತದವರೆಗೂ ಗ್ರಾಮಕ್ಕೆ ಸ್ಮಶಾನ ಮಾಡಿಕೊಡಿ ಎಂದು ಮನವಿ ಮಾಡುವುದರ ಜತೆಗೆ ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.