ತುಮಕೂರು: ತುಮಕೂರು ಪ್ರಾದೇಶಿಕ ಸಾರಿಗೆ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪಂಗಡದ 13 ಅಭ್ಯರ್ಥಿಗಳಿಗೆ ಆಟೋರಿಕ್ಷಾ, ಲಘು ಮೋಟಾರು ಮತ್ತು ಭಾರಿ ಸಾರಿಗೆ ವಾಹನ ಚಾಲನಾ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಎಸ್ಎಸ್ಎಲ್ಸಿ ತೇರ್ಗಡೆ ಹಾಗೂ ವಾಹನ ಚಲಾಯಿಸುವ ದೈಹಿಕ ಸಾಮರ್ಥ್ಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಶೇ.75ರಷ್ಟು ಸಹಾಯಧನ ನೀಡಲಾಗುವುದು. ಭಾರಿ ವಾಹನ ಸಾಗಾಣಿಕೆ ವಾಹನ ತರಬೇತಿಗೆ ಅರ್ಜಿ ಸಲ್ಲಿಸುವವರು ಎಸ್ಎಸ್ಎಲ್ಸಿ ಉತ್ತೀರ್ಣ ಹೊಂದುವುದರೊಂದಿಗೆ ಲಘು ಮೋಟಾರು ವಾಹನ ಚಾಲನಾ ಪತ್ರ ಹೊಂದಿ ಕನಿಷ್ಠ ಒಂದು ವರ್ಷ ಪೂರೈಸಿರಬೇಕು. ಸರ್ಕಾರಿ ಆಸ್ಪತ್ರೆಯಿಂದ ವೈದ್ಯಕೀಯ ಪ್ರಮಾಣಪತ್ರ ಹಾಜರುಪಡಿಸಬೇಕು. 20 ವರ್ಷ ಮೇಲಿರುವ ಆಸಕ್ತ ಅಭ್ಯರ್ಥಿಗಳು ಆ.19ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಂಪರ್ಕಿಸಿ.
ರಂಗ ಕಲೆ ಅಸ್ತಿತ್ವವನ್ನೇಕಳೆದುಕೊಳ್ಳುತ್ತಿದೆ: ದೇವರಾಜು
ತುಮಕೂರು: ಆಧುನಿಕ ಮಾಧ್ಯಮಗಳ ಪ್ರಭಾವದಿಂದಾಗಿ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ರಂಗ ಕಲೆ ತನ್ನ ಇರುವಿಕೆಯನ್ನು ಕಳೆದುಕೊಳ್ಳುತ್ತಿದೆ ಎಂದು ಕನ್ನಡ ಭಾಷ ಬೋಧಕ ದೇವರಾಜು ಅಭಿಪ್ರಾಯಪಟ್ಟರು.
ಮೆಳೇಕಲ್ಲಹಳ್ಳಿಯ ಕುಸುಮ ಕಲಾ ಸಂಘದಿಂದ ನಾಗಸಂದ್ರದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶ್ರಾವಣದ ವರಗೆ ನಮ್ಮ ರಂಗ ನಡೆ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಿಗೆ ಎಂಬ ವಿನೂತನ ಕಾರ್ಯಕ್ರಮದ ಎರಡನೆ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕೆಲ ಉತ್ಸಾಹಿ ಜನಗಳ ಪ್ರಯತ್ನದಿಂದಾಗಿ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣಸಿಗುವ ಸನ್ನಿವೇಶಗಳಲ್ಲಿ ಒಂದು ಯುವ ತಂಡ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಿಗೆ ರಂಗ ಮಾಧ್ಯಮದಲ್ಲೆ ಪ್ರಭಲವಾದ ಮತ್ತು ಅಷ್ಟೇ ಕ್ಲಿಷ್ಟವಾದ ಬೀದಿನಾಟಕ ಪ್ರಾಕಾರವನ್ನು ಪರಿಚಯಿದುವುದರ ಜೊತೆಗೇ ಇಂದಿನ ಸಮಾಜದಲ್ಲಿನ ಸಮಸ್ಯೆಗಳನ್ನೇ ಕಥಾವಸ್ತುವಾಗಿ ಮಾಡಿ ಪ್ರದರ್ಶನ ನೀಡುತ್ತಿರುವುದು ಸ್ವಾಗತಾರ್ಹ ಎಂದರು. ಉಪಪ್ರಾಚಾರ್ಯ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮಹದೇವಯ್ಯ, ಮೋಹನ್ ರಾಜ್, ನಂದಾ, ತ್ರಿವೇಣಿ, ನವೀನ್ ಕುಮ್ ಭಾಗವಹಿಸಿದ್ದ ಕಾರ್ಯಕ್ರಮವನ್ನು ಜಯಪ್ರಕಾಶ್ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.
ಡೆಂಘೀ ಜ್ವರಕ್ಕೆ ಮಧುಗಿರಿಯ ಯುವಕ ಬಲಿ
ಮಧುಗಿರಿ: ಮಧುಗಿರಿ ಪಟ್ಟಣದ ಸಿದ್ದನಾಯಕನ ಬೀದಿ ನಿವಾಸಿ ಚೇತನ್ (16) ಎಂಬಾತ ಡೆಂಘೀ ಜ್ವರಕ್ಕೆ ತುತ್ತಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ಚೇತನ್ಗೆ ಮೊದಲು ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ವೈದ್ಯರು ಇಲ್ಲಿ ಆಗಲ್ಲ ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು ಪೋಷಕರಿಗೆ ಸಲಹೆ ನೀಡಿದ್ದಾರೆ. ತಕ್ಷಣ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಚೇತನ್ ಮೃತಪಟ್ಟಿದ್ದಾನೆ. ಈತ ಮಧುಗಿರಿ ರಾಘವೇಂದ್ರ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿ ಏನ್ನಲಾಗಿದೆ.
ಕಬಡ್ಡಿ.. ಕಬಡ್ಡಿ..
ಹುಳಿಯಾರಿನ ವಾಸವಿ ಶಾಲಾ ಆವರಣದಲ್ಲಿ ನಡೆಯುತ್ತಿರುವ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸೀಗೇಬಾಗಿ ಹಾಗೂ ಬಸವೇಶ್ವರ ಶಾಲೆಯ ಬಾಲಕಿಯರು ಕಬ್ಬಡಿ ಫೈನಲ್ ಪಂದ್ಯದಲ್ಲಿ ಸೆಣಸಿದರು.
ಜೀವನದಲ್ಲಿ ಜುಗುಪ್ಸೆ: 3 ವರ್ಷದ ಮಗು ಜತೆ ತಾಯಿ ಆತ್ಮಹತ್ಯೆ
ಕುಣಿಗಲ್: ಜೀವನದಲ್ಲಿ ಜುಗುಪ್ಸೆಗೊಂಡ ಗೃಹಿಣಿಯೊಬ್ಬರು ತನ್ನ ಮೂರು ವರ್ಷದ ಗಂಡು ಮಗುವಿನೊಂದಿಗೆ ಪಟ್ಟಣದ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೆಬ್ಬೂರು ಸಮೀಪದ ಗರಗದಕುಪ್ಪೆಯ ಲಲಿತಾ (25) ಮತ್ತು ಆಕೆಯ ಮಗ ಜಯಚಂದ್ರ(3) ಮೃತರು. ಈಕೆ ಬಾಗೇನಹಳ್ಳಿ ವಾಸಿ ರಾಮಕೃಷ್ಣ ಎಂಬುವರ ಪತ್ನಿ. ಬೆಂಗಳೂರಿನ ಆಡುಗೋಡಿಯಲ್ಲಿ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಬಾಗೇನಹಳ್ಳಿಗೆ ಬಂದು, ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹಗಳು ಸಂಪೂರ್ಣವಾಗಿ ಕೊಳೆತಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದರಿಂದ ಶುಕ್ರವಾರ ರಾತ್ರಿ ಪೊಲೀಸರು ಮೃತದೇಹಗಳನ್ನು ಹೊರ ತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಭಿಕ್ಷೆ ಬೇಡಿ ಕಿರಣ್ಕುಮಾರ್ ಕುಟುಂಬಕ್ಕೆ ಪರಿಹಾರ
ತಿಪಟೂರು: ಪೊಲೀಸ್ ದೌರ್ಜನ್ಯದಿಂದ ಜೂ.16ರಂದು ತಾಲೂಕಿನ ಕರಡಾಳು ಸಂತೆ ಮೈದಾನದಲ್ಲಿ ಮೃತಪಟ್ಟ ಹತ್ಯಾಳು ಗ್ರಾಮದ ಕಿರಣ್ಕುಮಾರ್ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡುವಲ್ಲಿ ಬೇಜವಾಬ್ದಾರಿಯುತವಾಗಿ ವರ್ತಿಸಿರುವುದನ್ನು ಖಂಡಿಸಿ ಸಾರ್ವಜನಿಕರಿಂದ ಭಿಕ್ಷೆ ಎತ್ತಿ ಸಂತ್ರಸ್ಥ ಕುಟುಂಬಕ್ಕೆ ನೀಡುವ ಕಾರ್ಯಕ್ರಮಕ್ಕೆ ಸಮಿತಿ ಸಂಚಾಲಕ ಲೋಕೇಶ್ವರ ನೇತೃತ್ವದಲ್ಲಿ ಮುಂದಾಗಿದೆ. ನಗರದ ಹಾಸನ ವೃತ್ತದಲ್ಲಿ ಭಿಕ್ಷಾಟನೆಗೆ ಚಾಲನೆ ನೀಡಿ ಮಾತನಾಡಿದ ಲೋಕೇಶ್ವರ, ಕಿರಣ್ ಕುಮಾರ್ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನವಿದೆ. ಸರ್ಕಾರವಾಗಲಿ, ಶಾಸಕರಾಗಲಿ ಈ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಇದನ್ನು ಗಮನಿಸಿ ತಾಲೂಕಿನ ಜನತೆ ಆಕ್ರೋಶಭರಿತರಾಗಿದ್ದು, ಭಿಕ್ಷಾಟನೆಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದರು.
ವಿದ್ಯಾರ್ಥಿಗಳಲ್ಲಿ ಸಾಧನೆಯ ಛಲವಿರಬೇಕು
ಹುಳಿಯಾರು: ವಿದ್ಯಾರ್ಥಿಯಾದವರು ಜೀವನದಲ್ಲಿ ಗುರಿಯಿಟ್ಟುಕೊಂಡು ಮುನ್ನೆಡೆಯಬೇಕು ಎಂದು ತುಮಕೂರಿನ ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಹೋಬಳಿಯ ದಬ್ಬಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ವ್ಯಕ್ತಿತ್ವ ವಿಕಸನ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಾನವರ ಜೀವನದಲ್ಲಿ ವಿದ್ಯಾರ್ಥಿ ಹಂತ ಪ್ರಮುಖವಾದದ್ದು ಈ ಹಂತದಲ್ಲಿ ನಾವು ಏನು ಕಲಿತೇವೆಯೋ ಅದರಿಂದ ನಮ್ಮ ಮುಂದಿನ ಜೀವನ ನಿರ್ಮಾನವಾಗುತ್ತದೆ ಆದಕ್ಕಗಾಗಿ ಪ್ರತಿ ವಿದ್ಯಾರ್ಥಿ ಮುಖ್ಯವಾಗಿ ಗುರಿ ಹೊಂದಿ ಸಾಧನೆಯತ್ತ ಗಮನ ಮಾಡಬೇಕಿದೆ ಎಂದರು. ಮುಖ್ಯಶಿಕ್ಷಕ ಎಂ.ಜಿ. ಕೆಂಚಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಡಿ.ಬಿ. ರವಿಕುಮಾರ್, ಹೆಂಜಾರಪ್ಪ ಇತರರು ಮಾತನಾಡಿದರು. ದಸೂಡಿ, ಬೆಳ್ಳಾರ, ದಬ್ಬಗುಂಟೆ ಶಾಲೆಗಳಾ ಮಕ್ಕಳು ಹಾಜರಿದ್ದರು. ದಾನಿಗಳಾದ ಪುಟ್ಟಯ್ಯ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹೊಸಕೆರೆ ಸರ್ಕಾರಿ ಶಾಲೆಯಲ್ಲಿ ಉಚಿತ ತಪಾಸಣೆ ಶಿಬಿರ ಇಂದು
ಮಧುಗಿರಿ: ಬೆಂಗಳೂರು ಡರ್ಮಟೋಲಜಿಕಲ್ ಸೊಸೈಟಿ, ರೋಟರಿ ಕ್ಲಬ್ ಹಾಗೂ ಎಚ್.ಚಿಕ್ಕರುದ್ರಪ್ಪ ಟ್ರಸ್ಟ್ ಅಭ್ಯುದಯ ಸಂಘದ ಸಂಯುಕ್ತಾಶ್ರಯದಲ್ಲಿ ದಿವಂಗತ ಚಿಕ್ಕಣ್ಣ ಸ್ಮರಣಾರ್ಥ ತಾಲೂಕಿನ ಹೊಸಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಆ.3ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಉಚಿತ ಚರ್ಮ ರೋಗ ಮತ್ತು ಇತರೇ ವೈದ್ಯಕೀಯ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ ಎಂದು ಅಭ್ಯುದಯ ಸಂಘದ ಅಧ್ಯಕ್ಷ ಲಲಿತ ಮಲ್ಲಪ್ಪ ತಿಳಿಸಿದ್ದಾರೆ. ಈ ಶಿಬಿರದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಮತ್ತು ಬೆಂಗಳೂರು ಹಾಗೂ ತುಮಕೂರಿನ ನುರಿತ ವೈದ್ಯರು ಭಾಗವಹಿಸಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಿದ್ದಾರೆ. ಹೊಸಕೆರೆ ಗ್ರಾಮದ ಸುತ್ತಮುತ್ತಲ ಜನರು ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ
ಮಧುಗಿರಿ: ಕರ್ನಾಟಕ ರಾಜ್ಯ ಬಹಾಯಿ ಮಂಡಳಿ, ಬಹಾಯಿ ಸ್ಥಳೀಯ ಆಧ್ಯಾತ್ಮಿಕ ಸಭೆ ಕೆರೆಗಳಪಾಳ್ಯ ಆಶ್ರಯದಲ್ಲಿ ಆ.3ರಂದು ಭಾನುವಾರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕೆರೆಗಳಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಡಾ.ಅಹಮದ್ ಅನ್ಸಾರಿ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಿದ್ದಲಿಂಗಮೂರ್ತಿ ತಿಳಿಸಿದ್ದಾರೆ. ಶಿಬಿರದಲ್ಲಿ ಜನರಲ್ ತಜ್ಞರು, ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರು, ಕಣ್ಣಿನ, ಮಕ್ಕಳ, ಚರ್ಮ, ಮೂಳೆ ತಜ್ಞರು ರೋಗಿಗಳನ್ನು ಪರೀಕ್ಷಿಸಿ ಉಚಿತ ಔಷಧಿ ನೀಡಲಿದ್ದಾರೆ.
ಆಸ್ತಿಗಿಂತ ಆರೋಗ್ಯ ಮುಖ್ಯ: ಪಿ. ಶ್ರೀನಿವಾಸ್
ತಿಪಟೂರು: ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಂತ ಜೀವನ ನಡೆಸಬೇಕಾದರೆ ಪರಿಸರ ನೈರ್ಮಲ್ಯತೆ ಅವಶ್ಯಕ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ. ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಕಸಬಾ ವಲಯದ ಧರ್ಮಸ್ಥಳ ಯೋಜನೆ ವತಿಯಿಂದ ಚಿಕ್ಕಮಾರ್ಪನಹಳ್ಳಿಯಲ್ಲಿ ನಡೆದ ಸೃಜನಶೀಲ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಹಣ, ಆಸ್ತಿಗಿಂತ ಆರೋಗ್ಯ ಮುಖ್ಯ. ಆರೋಗ್ಯವಿದ್ದರೆ ಕಷ್ಟಗಳು ಬಂದರು ಧೈರ್ಯದಿಂದ ಎದುರಿಸಬಹುದು ಎಂದರು. ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಶಿವಣ್ಣ, ಸಾಂತ್ವನ ಕೇಂದ್ರ ಅಧಿಕಾರಿ ಕುಮಾರ್, ಗ್ರಾಮಾಂತರ ಠಾಣಾ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. 500ಕ್ಕೂ ಹೆಚ್ಚು ಜನರಿಗೆ ರಕ್ತ ಪರೀಕ್ಷೆ, ರಕ್ತ ಹೀನತೆ ಹಾಗೂ ಸ್ವಚ್ಚತೆ ಬಗ್ಗೆ ಮಾಹಿತಿ ನೀಡಲಾಯಿತು. ಸರಿತಾ ನಿರೂಪಿಸಿ, ವಂದಿಸಿದರು.
ನೋಟ್ಬುಕ್ ವಿತರಣೆ
ಮಧುಗಿರಿ ಕಸಬಾ ಡಿ.ವಿ.ಹಳ್ಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತುಂಗೋಟಿ ರಾಮಣ್ಣ ಉಚಿತ ನೋಟ್ಬುಕ್ ವಿತರಿಸಿದರು. ಮುಖ್ಯ ಶಿಕ್ಷಕ ಕೆ.ಎನ್.ಹನುಮಂತರಾಯಪ್ಪ ಇದ್ದರು.
ಕಾಡು ಹಂದಿ ಹಿಡಿಯಲು ಹೋಗಿ ವ್ಯಕ್ತಿ ಸಾವು
ಶಿರಾ: ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಯರದಕಟ್ಟೆ ಗ್ರಾಮದ ಬಳಿ ಕಾಡು ಹಂದಿಯನ್ನು ಹಿಡಿಯಲು ಹೋದ ವ್ಯಕ್ತಿಯೊಬ್ಬ ವಿದ್ಯುತ್ ಆಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ರಮೇಶ್ (40) ಎಂದು ತಿಳಿದು ಬಂದಿದೆ. ಭೋವಿ ಕಾಲೋನಿಯ ರಮೇಶ್, ಮೂಡಲಗಿರಿಯಪ್ಪ, ರಾಜಪ್ಪ ಸೇರಿದಂತೆ ಸುಮಾರು 5 ಮಂದಿ ಇದ್ದ ತಂಡ ಹಂದಿ ಹಿಡಿಯಲು ಕಾಡಿನೊಳಕ್ಕೆ ಹೋಗಿದ್ದರು. ಹಂದಿಗಳನ್ನು ಹಿಡಿಯುವ ಸಲುವಾಗಿ ಈರಮ್ಮ ಎನ್ನುವವರು ಗಂಗಾ ಕಲ್ಯಾಣ ಯೋಜನೆಯಡಿ ಇತ್ತೀಚೆಗೆ ಕೊಳವೆ ಬಾವಿ ಕೊರೆಸಿ ವಿದ್ಯುತ್ ಕಂಬವನ್ನು ಹಾಕಿಸಿದ್ದು, ಸದರಿ ವಿದ್ಯುತ್ ಕಂಬದಿಂದ ಅಕ್ರಮವಾಗಿ ತಂತಿಗಳ ಮೂಲಕ ತಂತಿ ಬೇಲಿ ರಚಿಸಿಕೊಂಡು ಹಂದಿ ಹಿಡಿಯಲು, ತಂಡ ವಿದ್ಯುತ್ ಸರಬರಾಜು ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಹಂದಿಗಳು ಏಕಾಏಕಿ ಈ ಗುಂಪಿನ ಮೇಲೆ ನುಗ್ಗಿದಾಗ ರಮೇಶ್ ಎನ್ನುವ ವ್ಯಕ್ತಿ ತಾವೇ ಅಕ್ರಮವಾಗಿ ಸರಬರಾಜು ಮಾಡಿಕೊಂಡಿದ್ದ ತಂತಿಗೆ ಸಿಲುಕಿ, ವಿದ್ಯುತ್ ಶಾಕ್ನಿಂದ ಸಾವನ್ನಪಿದ್ದಾನೆ ಎನ್ನಲಾಗಿದೆ. ಈ ಸಂಬಂಧ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಡಿ.ಎಸ್.ಪಿ. ರಾಮಾನಾಯ್ಕ, ಸಿಪಿಐ ರಾಮಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು.
ವಿಶೇಷ ಪೂಜೆ
ತುಮಕೂರಿನ ಅಮರಜ್ಯೋತಿ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಶನೈಶ್ಚರಸ್ವಾಮಿಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರಾವಣ ಮಾಸದ ಅಂಗವಾಗಿ ದೇವಾಲಯದಲ್ಲಿ ಅಭಿಷೇಕ, ಪೂಜೆ, ವಿಶೇಷ ಅಲಂಕಾರ ಮತ್ತು ಹೋಮ ನಡೆಯಿತು.
ಮಹಿಳೆಯರ ಸುರಕ್ಷತೆ ಸಂಸ್ಕೃತಿ ಮುಂದುವರೆಯಲಿ
ಶಿರಾ: ಮಹಿಳೆಯನ್ನು ತಾಯಿ ಸ್ಥಾನದಲ್ಲಿ ಕಾಣುತ್ತಿರುವ ಸಂಸ್ಕೃತಿಯನ್ನು ನಾವು ಮನ್ನಣೆ ನೀಡಬೇಕು. ಇದನ್ನು ಪಾಲಿಸಲೇಬೇಕು ಎಂದು ಶಿರಾ ಗ್ರಾಮಾಂತರ ಸಿಪಿಐ ಹನುಮಂತರಾಯಪ್ಪ ತಿಳಿಸಿದರು. ಅವರು ಶಿರಾ ತಾಲೂಕಿನ ಬರಗೂರಿನಲ್ಲಿ ಜ್ಞಾನ ಜ್ಯೋತಿ ಕಾಲೇಜ್ ಅವರಣದಲ್ಲಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಸುರಕ್ಷತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯಾಸಂಗ ಮಾಡುವ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ವ್ಯಾಮೋಹದಲ್ಲಿ ಬೀಳದೆ ಬುದ್ದಿವಂತರಾದರೆ ಮಾತ್ರ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ದೇಶ ಸೇವೆ ಮಾಡಬಹುದು ಎಂದರು. ಸಮಾರಂಭದಲ್ಲಿ ಪ್ರಾಂಶುಪಾಲ ಡಿ.ಎನ್. ಪರಮೇಶ್ ಗೌಡ, ಪತ್ರಕರ್ತ ವಲಿಸಾಬ್, ಮುಖ್ಯ ಪೇದೆ ನರಸಿಂಹ ಮೂರ್ತಿ, ಕುರುಬರರಾಮನಹಳ್ಳಿ ತಿಪ್ಪೇಸ್ವಾಮಿ ರವಿಶಂಕರ್, ಉಪಾನ್ಯಸಕ ರಮೇಶ್, ರವಿ, ಮೂಡಲಗಿರಿಯಪ್ಪ, ಶಿಕ್ಷಕಿರು ಹಾಜರಿದ್ದರು.
ಮದ್ಯವರ್ಜನ ಶಿಬಿರ ಸಮಾರೋಪ
ಶಿರಾ: ಮದ್ಯವ್ಯಸನದಿಂದ ಹಾಳಾದವರೇ ಹೆಚ್ಚು. ಇದನ್ನು ಅರಿತಿದ್ದರೂ ಮತ್ತೆ ಮತ್ತೆ ಅದರ ಚಟಕ್ಕೆ ಬಲಿಯಾಗಿ ಸಮಾಜದ ದೃಷ್ಟಿಯಲ್ಲಿ ಕೀಳು ಎನ್ನಿಸಿಕೊಳ್ಳುವ ಕರ್ಮ ವಿಪರ್ಯಾಸ ಎಂದು ಶಿಡ್ಲೇಕೋಣದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ನುಡಿದರು. ತಾಲೂಕಿನ ತೊಗರಗುಂಟೆ ಅಮ್ಮಾಜಮ್ಮ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಏರ್ಪಡಿಸಲಾಗಿದ್ದ 714ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಡಿ. ಮಲ್ಲೇಶ್ ನಿಮ್ಮ ಮನೋಬಲ ಸದಾ ನಿಮ್ಮನ್ನು ಕುಡಿತದಿಂದ ದೂರವಿಟ್ಟಿರಲಿ ಎಂದು ಆಶಿಸಿದರು. ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ದೊಡ್ಡೇಗೌಡ, ಯೋಜನೆ ಜಿಲ್ಲಾ ನಿರ್ದೇಶಕ ಪಿ.ಕೆ. ಪುರುಷೋತ್ತಮ್, ಯೋಜನಾಧಿಕಾರಿ ದಿನೇಶ್, ಮೇಲ್ಕುಂಟೆ ದೇವಾಲಯದ ಅರ್ಚಕ ರಂಗಣ್ಣಿ ಇದ್ದರು.
ಪ್ರತಿಭಾನ್ವಿತರಿಗೆ ಸನ್ಮಾನ
ಶಿರಾದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಜಯಕರ್ನಾಟಕ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ರಾಜ್ಯಾಧ್ಯಕ್ಷ ಜಗದೀಶ್, ತಾಲೂಕು ಅಧ್ಯಕ್ಷ ಉಮೇಶಗೌಡ, ಗೌರವಾಧ್ಯಕ್ಷ ವಿಜಯಕುಮಾರ್, ಬಿಜೆಪಿ ಮುಖಂಡ ಬಿ.ಕೆ. ಮಂಜುನಾಥ್, ಸಹಕಾರಿ ಧುರೀಣ ಎಸ್.ಎನ್. ಕೃಷ್ಣಯ್ಯ, ನಗರಸಭಾಧ್ಯಕ್ಷೆ ಜ್ಞಾನಪೂರ್ಣ, ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ, ಕಾಂಗ್ರೆಸ್ ಯುವ ಮುಖಂಡ ಹಲಗುಂಡೇ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್. ರವಿ, ನಾಗರಾಜು ಕಾಟಪ್ಪ ಇದ್ದರು.
ಅತ್ಯಾಚಾರ ತಡೆ ಜಾಗೃತಿ ಜಾಥಾ
ಶಿರಾ: ಪ್ರಸ್ತುತ ಸಮಾಜದಲ್ಲಿ ಅತ್ಯಾಚಾರ ಪ್ರಕರಣದಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿ ಸಾಮಾನ್ಯ ಜನರು ಭಯ ಭೀತಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಜನ ಸಮಾನ್ಯರಲ್ಲಿ ಅರಿವು ಮೂಡಿಸುವಂತಹ ಜಾಗೃತಿ ಜಾಥಾಗಳ ಅವಶ್ಯಕತೆ ಇದೆ ಎಂದು ನಗರ ಠಾಣಾ ಪಿ.ಎಸ್.ಐ. ಕೊಟ್ರೇಶ್ ತಿಳಿಸಿದರು. ಅವರು ನಗರದಲ್ಲಿ ತಾಲೂಕು ವಿದ್ಯಾರ್ಥಿ ಘಟಕ ಹಾಗೂ ವಿವಿಧ ಶಾಲಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅತ್ಯಾಚಾರ ತಡೆ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಮಾತನಾಡಿ ಹೆಣ್ಣು ಮಕ್ಕಳನ್ನು ಗೌರವಿಸಿ ರಾಜ್ಯವನ್ನು ಕಾಪಾಡಿ ಅತ್ಯಾಚಾರಿಗಳಿಂದ ಎಚ್ಚರದಿಂದಿರಿ ಎಂದರು. ವಿದ್ಯಾರ್ಥಿ ಮುಖಂಡ ರಾಜಶೇಖರ್ ಮಾತನಾಡಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಎಂದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಮಧುಸೂದನ್, ಕಿರಣ್, ಶ್ರೀನಿವಾಸ್, ಶಶಿಕುಮಾರ್, ಶ್ರೀರಂಗನಾಥ್ ಮತ್ತಿತರರು ಹಾಜರಿದ್ದರು.
ಜಾಗೃತಿ ಜಾಥಾ
ಶಿರಾದಲ್ಲಿ ವಿದ್ಯಾರ್ಥಿ ಘಟಕದ ವತಿಯಿಂದ ಅತ್ಯಾಚಾರ ತಡೆ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಣ ವ್ಯಾಪಾರೀಕರಣ ಆಗುತ್ತಿದೆ: ಚಟ್ನಳ್ಳಿ ಮಹೇಶ್
ತಿಪಟೂರು: ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಆಸ್ತಿ ವಿದ್ಯೆ ಹೊರತು ಶ್ರೀಮಂತಿಕೆಯಲ್ಲ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು. ಪಟ್ಟಣದ ಎಸ್ವಿಪಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಎನ್ಎಸ್ಎಂ ಬಾಲಿಕಾ ಪ್ರೌಢಶಾಲೆ ಹಾಗೂ ಎಸ್ವಿಪಿ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಎಸ್ವಿಪಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಗುರುಗಳು ಶಿಕ್ಷಣದ ಜೊತೆಗೆ ಮೌಲ್ಯ ಮತ್ತು ಸಂಸ್ಕೃತಿ ಬೆಳಸುತ್ತಿದ್ದರು. ಆದರೆ ಇಂದು ಶಿಕ್ಷಣದಲ್ಲಿ ಆಡಂಬರ ಆವರಿಸಿ ಮೌಲ್ಯಗಳು ಮೂಲೆಗುಂಪಾಗಿ, ಸಂಸ್ಕೃತಿಯೆಂಬುದು ವೈಭವೀಕರಣವಾಗುತ್ತಿದೆ ಎಂದರು. ಪ್ರಾಧ್ಯಾಪಕ ಎಂ.ಕೆ. ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಸನ್ನಡತೆ, ಸಚ್ಚಾರಿತ್ರ್ಯಗಳನ್ನು ಬೆಳೆಸಿಕೊಳ್ಳಬೇಕೆಂದರು. ಶ್ರೀ ವಿದ್ಯಾಪೀಠದ ಅಧ್ಯಕ್ಷ ಎಸ್.ಕೆ. ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಿಕ್ಷಕರು, ಉಪನ್ಯಾಸಕರು ಹಾಗೂ ಶಾಲಾ ಕಾಲೇಜು ಸಿಬ್ಬಂದಿ ಇದ್ದರು.