ಅಧಿಕಾರಿಗಳೇ ಜನರನ್ನು ಹಿಂಸಿಸಬೇಡಿ

Updated on: 

ತಿಪಟೂರು: ಅಧಿಕಾರಿಗಳು ಲಂಚದ ಆಸೆಗೆ ಕೈಚಾಚದೆ, ಪ್ರಾಮಾಣಿಕತೆ, ದಕ್ಷತೆಯಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವತ್ತ ಗಮನಹರಿಸಿ ಎಂದು ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಗಂಗಲಿಂಗಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಮೇಲಧಿಕಾರಿಗಳನ್ನು ಮೆಚ್ಚಿಸುವಂತಹ ಮತ್ತು ಅಂಕಿ ಅಂಶಗಳಿಗೋಸ್ಕರ ಕೆಲಸ ಮಾಡದೆ ಸಾರ್ವಜನಿಕರ ಹಿತಾಸಕ್ತಿಗನುಗುಣವಾಗಿ ಕೆಲಸ ಮಾಡಬೇಕು. ಕೆಲಸಕ್ಕೆ ತಕ್ಕಂತೆ ಸರ್ಕಾರ ಸಂಬಳ ನೀಡುತ್ತಿದ್ದು, ಇದು ಸಾಲದೆಂದು ಬಡ, ಅಸಹಾಯಕರಿಂದ ಲಂಚ ಪಡೆದರೆ ಅವರ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ ಎಂದರು.
ಪುರಸಭಾ ಮಾಜಿ ಅಧ್ಯಕ್ಷ, ತರಕಾರಿ ನಾಗರಾಜು ಪಟ್ಟಣದ ಮುಖ್ಯರಸ್ತೆ ಬಿ.ಎಚ್.ರಸ್ತೆ,  ಎನ್.ಎಚ್. 206 ರಸ್ತೆಯ ವಿಸ್ತರಣೆ ನಡೆಯುವಾಗ ಅಧಿಕಾರಿಗಳು ಕಾನೂನು ಗಾಳಿಗೆ ತೂರಿ ಮನಸೋ ಇಚ್ಛೆ ನಡೆದುಕೊಂಡಿದ್ದರಿಂದ ಸರ್ಕಾರಕ್ಕೆ ಸದ್ಯ13ಕೋಟಿ ಗೂ ಹೆಚ್ಚು ಹಣ ನಷ್ಟವಾಗಿದೆ. ಈ ರಸ್ತೆ 1999ರಲ್ಲಿಯೇ ಎನ್‌ಹೆಚ್‌ಗೆ ವರ್ಗಾವಾಗಿದ್ದು ರಸ್ತೆ ಮಧ್ಯಭಾಗದಿಂದ 72 ಅಡಿಗೆ ವಿಸ್ತರಿಸಬೇಕಾಗಿದ್ದು, ಇದನ್ನು ಕೇವಲ 40 ಮೀಟರ್, ಕೆಲವೆಡೆ 35 ಮೀಟರ್‌ಗೆ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಲೋಕಾಯುಕ್ತರು ಸದರಿ ದೂರಿನ ಕಾಳಜಿ ಸಮರ್ಥವಾಗಿದ್ದು, ರಾಜ್ಯ ಲೋಕಾಯುಕ್ತರಿಗೆ ಈ ಬಗ್ಗೆ ಮಾಹಿತಿ ನೀಡಿ ಕ್ರಮ ಜರುಗಿಸುವುದಲ್ಲದೆ ಹಣ ವಸೂಲು ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಪಟ್ಟಣದ ಹಿಪ್ಪೇತೋಪಿನ ನಿವಾಸಿ ಸುಜಾತ ತಮ್ಮ ನಿವೇಶನದ ಮುಂದೆ ನಗರಸಭೆಯಿಂದ ಅಂಗನವಾಡಿ ಕಟ್ಟಡ ಕಟ್ಟಿದ್ದು, ಈ ರಸ್ತೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಉಪವಿಭಾಗಾಧಿಕಾರಿಗಳವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಅಲವತ್ತುಕೊಂಡರು. ಈ ಬಗ್ಗೆ ಗಮನಹರಿಸುವಂತೆ ಲೋಕಾಯುಕ್ತರು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದ ಜಗದೀಶ್ ಹಾಗೂ ಗ್ರಾಮಸ್ಥರು ಗ್ರಾಮದ ರಸ್ತೆ ಪಕ್ಕದಲ್ಲಿ ತೆಂಗಿನ ಚಿಪ್ಪಿನ ಇದ್ದಿಲು ಸುಡುತ್ತಿದ್ದು, ಇದರ ಹೊಗೆಯಿಂದ ಪರಿಸರದ ಮೇಲೆ ಹಾಗೂ ತೆಂಗಿನ ಮರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಹೊಲ ಮತ್ತು ತೋಟಗಳಲ್ಲಿ ಹೊಗೆ ಆವರಿಸುವುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾನವಿ ಮಾಡಿದರು. ಲೋಕಾಯುಕ್ತರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್‌ಗೆ ತಿಳಿಸಿದರು.
ಚಿಕ್ಕಮಾರ್ಪನಹಳ್ಳಿ ಗ್ರಾಮಸ್ಥರು ಚಿಕ್ಕನಾಯಕನಹಳ್ಳಿ-ಹಾಸನ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಓಡಾಡಲು ತೀವ್ರ ತೊಂದರಿಯಾಗುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ್, ನಗರಸಭೆಯ ಈಶ್ವರಪ್ಪ ಸೇರಿದಂತೆ ಇಲಾಖೆಯ ಅಧಿಕಾರಿಗಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com