ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

Updated on: 

ಕುಣಿಗಲ್: ಭೂಸ್ವಾಧೀನಕ್ಕೆ ಸೂಕ್ತ ಪರಿಹಾರ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಪಾಧಿಕಾರಿಗಳು ಬುಧವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ತಾಲೂಕಿನಲ್ಲಿ ಹಾದು ಹೋಗಿರುವ ಕೊರಟಗೆರೆ ಕೊಳ್ಳೇಗಾಲ ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ತೆಂಗು ಮತ್ತು ಅಡಿಕೆ ಮರಗಳಿಗೆ ನ್ಯಾಯಾಯುತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆ ನೇತೃತ್ವವನ್ನು ಆನಂದ್ ಪಟೇಲ್ ವಹಿಸಿದ್ದರು. ಗೌರವಾಧ್ಯಕ್ಷ ದಿನೇಶ್ ಕುಮಾರ್, ವೆಂಕಟೇಶ್, ತೋಟದ ಮಾಲೀಕರಾದ ರಂಗಸ್ವಾಮಯ್ಯ, ರೇಣುಕಪ್ಪ, ಪಾರ್ಥಸಾರಥಿ, ಜಗದೀಶ್, ವೇಣು, ತಿಮ್ಮಯ್ಯ ಸೇರಿ ಅನೇಕರಿದ್ದರು.

ನಾವೇನನ್ನು ತಿನ್ನುತ್ತಿದ್ದೇವೆ? 13ಕ್ಕೆ
ತುರುವೇಕೆರೆ: ಸ್ಥಳೀಯ ಎನ್‌ಬಿಸಿ ಹೆಲ್ತ್ ಕೇರ್, ಲಯನ್ಸ್ ಕ್ಲಬ್, ಕೃಷಿ ಭಾರತ್ ಆಶ್ರಯದಲ್ಲಿ ಜು.13ರಂದು ಮೈಸೂರಿನ ಹಿರಿಯ ಆಹಾರ ತಜ್ಞ ಡಾ.ಖಾದರ್ ಅವರೊಂದಿಗೆ “«ÛÈæÞ«Ú«Úß­ ~«Úß­~¡¥æ§ÞÈæ?’ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಧ್ಯಕ್ಷತೆಯನ್ನು ಮಕ್ಕಳ ತಜ್ಞ ಡಾ.ಬಿ.ನಂಜಪ್ಪ ವಹಿಸಲಿದ್ದು, ಕಾಡು ಕೃಷಿಕ ಬಳಗದ ಸಂಚಾಲಕ ರಾಮಕೃಷ್ಣ, ಸೃಜನ ಮಹಿಳಾ ಸಂಘಟನೆಯ ಕಾರ್ಯದರ್ಶಿ ಇಂದಿರಮ್ಮ ಸಿರಿ ಧಾನ್ಯಗಳ ಬಳಕೆ ಮಾಹಿತಿ ನೀಡಲಿದ್ದಾರೆ. ಚಂದ್ರಶೇಖರ್ ಬಾಳೆ ಮಾತನಾಡಲಿದ್ದಾರೆ. ಕಾರ್ಯಕ್ರಮವು ಭಾನುವಾರ ಮಧ್ಯಾಹ್ನ 2.30 ಕ್ಕೆ ಬೇಟೇರಾಯಸ್ವಾಮಿ ದೇವಾಲಯದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ವಿದ್ಯಾರ್ಥಿ ವೇತನಕ್ಕೆ ಆಹ್ವಾನ
ತುಮಕೂರು: ಬೀಡಿ ಕಾರ್ಮಿಕರ ಮಕ್ಕಳಿಗೆ 1ನೇ ತರಗತಿಯಿಂದ ಪ್ರೌಢಶಿಕ್ಷಣ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿ ಶಿಕ್ಷಣ, ಐಟಿಐಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಬೀಡಿ ಗುರುತಿನ ಚೀಟಿ ಹಾಗೂ ಗುತ್ತಿಗೆದಾರರು, ಆಡಳಿತ ಮಂಡಳಿಗಳಿಂದ ದೃಢೀಕರಿಸಿದ ಅರ್ಜಿ ಹಾಗೂ ಬ್ಯಾಂಕ್ ವ್ಯವಸ್ಥಾಪಕರಿಂದ ದೃಢೀಕರಿಸಲಾದ ಎನ್‌ಇಎಫ್‌ಟಿ ಫಾರಂ ಹಾಗೂ 2013-14ನೇ ಸಾಲಿನಲ್ಲಿ ಉತ್ತೀರ್ಣರಾದ ಪರೀಕ್ಷೆ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಶಾಲಾ-ಕಾಲೇಜುಗಳ ಮುಖ್ಯಸ್ಥರು ಸೆ.15ರೊಳಗೆ ಅರ್ಜಿಗಳ ವಿವರವನ್ನು ಸ್ಕೀಮ್‌ವಾರು ವಿಭಾಗಿಸಿ ದೃಢೀಕೃತ ಮಾಹಿತಿಯನ್ನು ಆಯುಕ್ತರ ಕಚೇರಿಗೆ ತಲುಪಿಸಲು ಕೊರಲಾಗಿದೆ. ವಿವರಗಳಿಗೆ ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘ, ಸಿಐಟಿಯು, ಯೂನಿಯನ್ ಆಫೀಸ್, ನಜರಾಬಾದ್, ತುಮಕೂರು ಅಥವಾ ಶಿರಾ ತಾಲೂಕು ಬೀಡಿ ಕಾರ್ಮಿಕರ ಸಂಘ, ಚಾಂದಿನಿ ಚೌಕ, ಶಿರಾ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

ಡಿಇಡಿ ಪ್ರವೇಶ ಪ್ರಾರಂಭ
ಪಾವಗಡ: ಪಟ್ಟಣದ ವಿವೇಕಾನಂದ ಡಿಇಡಿ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ತರಗತಿಗಳ ದಾಖಲಾತಿ ಪ್ರಾರಂಭವಾಗಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಡಿಇಡಿ ತಗತಿಯಲ್ಲಿ ಕಾಲೇಜಿಗೆ ಶೇ,100ರಷ್ಟು ಫಲಿತಾಂಶ ಲಭ್ಯವಾಗಿದ್ದು 2014-15 ಸಾಲಿಗೆ ನಿಯಮನುಸಾರ ಡಿಇಡಿ ತರಗತಿಗಳ ಪ್ರವೇಶ ದಾಖಲಾತಿ ಪ್ರಾಂಭಿಸಿಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ನಾಗೇಂದ್ರಪ್ಪ ತಿಳಿಸಿದ್ದಾರೆ. ಅರ್ಜಿ ಪಡೆಯಲು ಜು.16 ಕಡೆಯ ದಿನ. ಆಸಕ್ತರು ವಿವೇಕಾನಂದ ಡಿಇಡಿ ಪ್ರಾಂಶುಪಾಲ ಶ್ರೀನಿವಾಸ ನಗರ ಪಾವಗಡ, ಇಲ್ಲಿಗೆ ಸಂಪರ್ಕಿಸಬಹುದು. ಮೊ. 9448950770.

ಅರ್ಜಿ ಆಹ್ವಾನ
ತುಮಕೂರು: ಗುಬ್ಬಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಯನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಗುಬ್ಬಿ ತಾಲೂಕಿನ ಗೋಪಾಲಪುರದಲ್ಲಿ ಅಂಗನವಾಡಿ ಕಾರ್ಯಕರ್ತೆ, ಗುಡ್ಡದ ಜೋಗಿಹಳ್ಳಿ ಹಾಗೂ ಮಾದೇನಹಳ್ಳಿಯಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿಯಿದ್ದು, ನಿಗದಿತ ಅರ್ಜಿ ನಮೂನೆಯನ್ನು ಆಯಾ ಗ್ರಾಮದ ಗ್ರಾಪಂ ಕಚೇರಿ, ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ಆಸಕ್ತರು ಭರ್ತಿ ಮಾಡಿದ ತಮ್ಮ ಅರ್ಜಿಗಳನ್ನು ಆ.4ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ರೈಲ್ವೆ ಸ್ಟೇಷನ್ ರಸ್ತೆ, ಗುಬ್ಬಿ ಇವರಿಗೆ ಸಲ್ಲಿಸಬೇಕೆಂದು ಕೋರಲಾಗಿದೆ.

ರಿಫಿಲ್ಲಿಂಗ್ ದಂಧೆ-ಒಬ್ಬನ ಬಂಧನ
ಕೋಲಾರ: ನಗರದ ಕೀಲುಕೋಟೆ ಮತ್ತು ಶಾರದಾ ಚಿತ್ರ ಮಂದಿರದ ಬಳಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡಿ ಆಟೋ ಚಾಲಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ವರ್ತಮಾನ ಆಧರಿಸಿ ಪೊಲೀಸರು ಎರಡು ಕಡೆ ದಾಳಿ ಮಾಡಿ ಗ್ಯಾಸ್ ಸಿಲಿಂಡರ್‌ಗಳು, ತೂಕದ ಯಂತ್ರ ಹಾಗೂ ರೆಗ್ಯೂಲೇಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕೀಲುಕೋಟೆಯ ಗಂಗಮ್ಮ ದೇವಸ್ಥಾನದ ಬಳಿಯ ಅಂಗಡಿಯ ಮಾಲೀಕ ಕುಮಾರ್ ಬಂಧಿತ ಆರೋಪಿಯಾಗಿದ್ದಾರೆ. ಶಾರದಾ ಚಿತ್ರ ಮಂದಿರದ ಅಂಗಡಿಯ ಮಾಲೀಕ ಪೈರೋಜ್ ತಪ್ಪಿಸಿಕೊಂಡಿದ್ದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ದಾಳಿ ಡಿವೈಎಸ್ಪಿ ಅಶೋಕ್‌ಕುಮಾರ್, ಪಿಎಸ್‌ಐ ಸುಧಾಕರ್ ನೇತೃತ್ವದಲ್ಲಿ ನಡೆದಿದೆ.

ಏಕಾದಶಿ ಆಚರಣೆ
ಹುಳಿಯಾರು: ಹೋಬಳಿ ಕುರಿಹಟ್ಟಿ ಮಜುರೆ ದಮ್ಮಡಿಹಟ್ಟಿಯ ಕಾಟಂಲಿಂಗೇಶ್ವರ ಹಾಗೂ ಹೊರಕೆರೆ ರಂಗನಾಥಸ್ವಾಮಿಯವರ ಏಕಾದಶಿ ಕಾರ್ಯ ಗ್ರಾಮದೇವತೆ ಕೆಂಕೆರೆ ಕಾಳಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕ ದೇವತೆಗಳ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಆಷಾಢ ಮಾಸದಲ್ಲಿ ಇಲ್ಲಿ ಏಕಾದಶಿ ಆಚರಣೆ ನಡೆಸಿಕೊಂಡು ಬರುತ್ತಿದ್ದು ಈ ಸಮಯದಲ್ಲಿ ಎಡೆಪೂಜೆ ನೆರವೇರಿಸಿ ದಾಸಪ್ಪಗಳಿಗೆ ಮೀಸಲು ತೀರಿಸುವ ಧಾರ್ಮಿಕ ಕಾರ್ಯಕ್ರಮ ಆಚರಿಸಲಾಗುತ್ತದೆ. ಆಷಾಢ ಮಾಸದ ಪ್ರಾರಂಭದ ದಿನದಿಂದ ಮುಂದಿನ ಏಳು ದಿನಗಳವರೆಗೆ ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಅಲ್ಲಿಯೇ ತಂಗಿ ಮೀಸಲು ತೀರಿಸುವ ಸಂಪ್ರದಾಯ ಇದಾಗಿದೆ. ಈ ನಿಮಿತ್ತ ಜು.3ರಂದು ಮೂಲದೇವರಿಗೆ ಗಂಗಾಸ್ನಾನ,ಪುಣ್ಯಾಹ ಪೂಜೆ ನಡೆಸಿ ಧ್ವಜಾರೋಹಣ ನೆರವೇರಿಸುವ ಮುಖಾಂತರ ಪ್ರಾರಂಭವಾದ ಕೈಂಕರ್ಯ ದ್ವಾದಶಿಯಂದು ಮೂಲದೇವರುಗಳಿಗೆ ದೊಡ್ಡ ಮಣೇವು ಹಾಕುವುದರ ಮೂಲಕ ಪರಿಸಮಾಪ್ತಿ ಆಯಿತು.

ಎಎಸ್ಪಿ ವಿರುದ್ಧ ಆಕ್ರೋಶ
ತಿಪಟೂರು: ದಲಿತ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಎಎಸ್ಪಿ ಕಾರ್ತಿಕ್ ಕುಮಾರ್ ವಿರುದ್ಧ ದಲಿತ ಮುಖಂಡರು ಧಿಕ್ಕಾರ ಕೂಡಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.   ಸರ್ಕಾರಿ ನಿಯಮದಂತೆ ಬುಧವಾರ ಸಂಜೆ 4ಗಂಟೆಗೆ ಪಟ್ಟಣ ಗ್ರಾಮೀಣ ಠಾಣೆಯ ಪಿಎಸೈ ಕಚೇರಿಯಲ್ಲಿ ತಾಲೂಕಿನ ಎಲ್ಲಾ ದಲಿತ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯನ್ನು ಎಎಸ್ಪಿ ಕಾರ್ತಿಕ್ ರೆಡ್ಡಿ ಕರೆದಿದ್ದರು. ಒಂದೆರಡು ವರ್ಷಗಳಿಂದಲೂ ನಿಯಮದಂತೆ ಸಭೆಯನ್ನೇ ನಡೆಸಿರಲಿಲ್ಲ. ಮುಂಬರುವ ಶನಿವಾರ ದಲಿತರ ಕುಂದು ಕೊರತೆಗಳ ಬಗ್ಗೆ ತಾಲೂಕು ಕಚೇರಿಯಲ್ಲಿ ಅಧಿಕೃತ ಸಭೆ ಕರೆಯಲಾಗಿತ್ತು. ಈ ಅಂಗವಾಗಿ ದಲಿತ ಮುಖಂಡರು ಪೂರ್ವಭಾವಿ ಸಭೆಯನ್ನು ಗುರುವಾರ ಕರೆಯಲಾಗಿತ್ತು. ಆದರೆ ಸಮಯ 4 ಗಂಟೆ ಆದರೂ, ಯಾರೊಬ್ಬರೂ ಸಭೆಗೆ ಹಾಜರಾಗಲಿಲ್ಲ.  ಇದರಿಂದ ಬೇಸತ್ತ ದಲಿತ ಸಂಘಟನೆಗಳ ಮುಖಂಡರು ಠಾಣೆಯ ದ್ವಾರದಲ್ಲಿ ನಿಂತು ಎಎಸ್ಪಿ ಕಾರ್ತಿಕ್ ರೆಡ್ಡಿ ಮತ್ತು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದರು.ಪತ್ರಿಕೆಯೊಂದಿಗೆ ಮಾತನಾಡಿದ ದಲಿತ ಮುಖಂಡರಾದ ಪೆದ್ದಿಹಳ್ಳಿ ನರಸಿಂಹಯ್ಯ, ನಾಗತೀಹಳ್ಳಿ ಕೃಷ್ಣಮೂರ್ತಿ, ಕಲ್ಲೇಶ್, ಮಧು, ರಂಗಸ್ವಾಮಿ, ವಕೀಲರಾದ ವೆಂಕಟೇಶ್, ಸುರೇಶ್,ಬಜಗೂರು ಮಂಜು, ಚಿಕ್ಕಣ್ಣ, ಅಶೋಕ್ ಮತ್ತಿತರು ಇಲ್ಲಿನ ಎಎಸ್ಪಿ ಕಾರ್ತಿಕ್ ರೆಡ್ಡಿ ಕಚೇರಿಗೆ ಯಾರೇ ದಲಿತ ಮುಖಂಡರು ಕುಂದುಕೊರತೆಗಳ ಬಗ್ಗೆ ಮಾತನಾಡಲು ಹೋದರೆ, ಕುರ್ಚಿ ಸಹ ನೀಡದೆ ಅವಮಾನ ಮಾಡುತ್ತಾರೆ. ದಲಿತ ಮುಖಂಡರು ಈ ಬಗ್ಗೆ ಮಾತನಾಡಿದರೆ ರೌಡಿಶೀಟ್ ಓಪನ್ ಮಾಡುವುದಾಗಿ ಬೆದರಿಸುತ್ತಾರೆ ಎಂದು ದೂರಿದರು.

ಬಾಲಕಿ ಮೇಲೆ ಅತ್ಯಾಚಾರ
ಕೋಲಾರ: ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಹೋಬಳಿಯ ಎಸ್. ಗೊಲ್ಲಪಲ್ಲಿ ಗ್ರಾಮದ ಪಿ. ಜೀಡಿಮಾಕಲಹಳ್ಳಿ ಮುನಿವೆಂಕಟಶೆಟ್ಟಿರವರ ಮಾವಿನ ತೋಪಿನಲ್ಲಿ ಬಾಲಕಿಯನ್ನು ಅಪಹರಿಸಿ ತಂದು ಅತ್ಯಾಚಾರವೆಸಗಿರುವ ಘಟನೆ ನಡೆಸಿದೆ. ಎಸ್.ಗೊಲ್ಲಪಲ್ಲಿ ಗ್ರಾಮದ 4 ವರ್ಷದ ಹೆಣ್ಣು ಮಗುವು ತಾಯಿಯೊಂದಿಗೆ ಜು.6ರಂದು ಪಿ.ಜೀಡಿಮಾಕಲಹಳ್ಳಿ ಮುನಿವೆಂಕಟಶೆಟ್ಟಿರವರ ಮಾವಿನ ತೋಪಿನಲ್ಲಿ ಮಾವಿನ ಕಾಯಿಗಳನ್ನು ತೆಗೆದುಕೊಂಡು ಬರಲು ಹೋಗಿದ್ದಾಗ ಅದೇ ಗ್ರಾಮದ ವಾಸಿಯಾದ ಸುಧಾಕರ ಎಂಬುವ ಅಪ್ರಾಪ್ತ ಹೆಣ್ಣು ಮಗುವನ್ನು ಮಾವಿನಕಾಯಿಗಳನ್ನು ಕೊಡುವುದಾಗಿ ಆಸೆ ತೋರಿಸಿ  ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿರುತ್ತಾನೆಂದು ದೂರಲಾಗಿದೆ.ಶ್ರೀನಿವಾಸಪುರ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ತಲದಮ್ಮನಹಳ್ಳಿಯಲ್ಲಿ ದಲಿತರ ಮೇಲೆ ಸವರ್ಣೀಯರ ಹಲ್ಲೆ
ಶಿಡ್ಲಘಟ್ಟ: ಸವರ್ಣೀಯರು ಹಾಗೂ ದಲಿತರ ಘರ್ಷಣೆಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ತಲದುಮ್ಮನಹಳ್ಳಿ ಗ್ರಾಮದ ಟಿ.ಆರ್.ಸುನೀಲ್, ಟಿ.ಆರ್.ಅನಿಲ್, ನಾರಾಯಣಮ್ಮ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಸೋಮವಾರ ದಲಿತ ಸಮುದಾಯಕ್ಕೆ ಸೇರಿದ್ದ ಯುವಕರು ಗ್ರಾಮದ ಚೌಡೇಶ್ವರಿ ದೇವಾಲಯದ ಬಳಿ ಕ್ರಿಕೆಟ್ ಆಟವಾಡುತ್ತಿದ್ದರು. ಆಗ ಸವರ್ಣೀಯರ ಯುವಕರು ಬಂದು ವಿಕೆಟ್ ಕಿತ್ತುಕೊಂಡಿದ್ದಾರೆ. ಆಗ ಗಲಾಟೆಯಾಗಿದೆ. ಮಧ್ಯಪ್ರವೇಶಿದ ಕೆಲವರು ಜಗಳ ಬಿಡಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸವರ್ಣೀಯ ಯುವಕರು ರಾತ್ರಿ ಗುಂಪು ಕಟ್ಟಿಕೊಂಡು ಬಂದು ಮನೆಯಲ್ಲಿ ಮಲಗಿದ್ದ ಸುನೀಲ್‌ನ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಗಮನಿಸಿದ ಸುನೀಲ್ ಸೋದರ ಅನಿಲ್ ರೆಕಾರ್ಡ್ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಅವನನ್ನೂ ಥಳಿಸಿ ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ ಅಜ್ಜಿ ನಾರಾಯಣಮ್ಮ ಕಿರುಚಿಕೊಂಡಾಗ ನೆರೆಯವರು ಧಾವಿಸಿದ್ದಾರೆ. ಆಗ ಸವರ್ಣೀಯ ಸಮುದಾಯದ ಯುವಕರು ಪರಾರಿಯಾಗಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com