ತಾಪಂಗೆ ಕಾವ್ಯ, ಸೌಭಾಗ್ಯ ಆಯ್ಕೆ?

Updated on: 

ತುರುವೇಕೆರೆ: ತಾಲೂಕು ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದೆ. ಜೆಡಿಎಸ್ ಪಾಳಯದಲ್ಲಿ ಎದ್ದಿದ್ದ ಭಿನ್ನಮತದಿಂದ ಕುತೂಹಲ ಕೆರಳಿಸಿದ್ದ ಚುನಾವಣೆ ಈಗ ಶಾಸಕರ ಪರವಾದ ಅಭ್ಯರ್ಥಿಯೇ ಅಧ್ಯಕ್ಷ ಗಾದಿಗೆ ಏರುವುದು ಖಚಿತವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಕಾವ್ಯ ರಾಜಕುಮಾರ್ ಹಾಗೂ ನಾಗಮಣಿ ಲಕ್ಷ್ಮಣಗೌಡ ಆಕಾಂಕ್ಷಿಗಳಾಗಿದ್ದರು. ಆದರೆ, ಶಾಸಕರು ಮೊದಲ ಹತ್ತು ತಿಂಗಳ ಅವಧಿಗೆ ಕಾವ್ಯ ರಾಜಕುಮಾರ್ ಅವರಿಗೆ ಹಸಿರು ನಿಶಾನೆಯನ್ನು ತೋರಿದ್ದಾರೆ ಎನ್ನಲಾಗಿದೆ.
ಹಾಗಾಗಿ ಶಾಸಕರೇ ಸೂಚಿಸಿರುವ ಕಾವ್ಯಾ ರಾಜಕುಮಾರ್ ಅಧ್ಯಕ್ಷರಾಗುವುದು ಖಚಿತ ಎಂದು ನಂಬಲಾಗಿದೆ.
ಭಿನ್ನಮತೀಯರ ಒಗ್ಗಟ್ಟನ್ನು ಮುರಿಯುವಲ್ಲಿ ಯಶಸ್ವಿಯಾದ ಶಾಸಕರು, ಭಿನ್ನಮತೀಯ ಗುಂಪಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದ ಸೊರವನಹಳ್ಳಿಯ ಸದಸ್ಯೆ ಸೌಭಾಗ್ಯ ನಿಂಗರಾಜ್‌ರವರನ್ನೇ ಉಪಾಧ್ಯಕ್ಷ ಸ್ಥಾನಕ್ಕೆ ಕೂರಿಸಲು ಮುಂದಾಗಿದ್ದಾರೆ. ಸೋಮವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯಲಿದೆ.
 ಬಹುಶಃ ಶಾಸಕರು ಸೂಚಿಸುವ ವ್ಯಕ್ತಿಗಳ ವಿನಾ ಬೇರ್ಯಾರೂ ನಾಮಪತ್ರವನ್ನೂ ಸಹ ಸಲ್ಲಿಸುವುದಿಲ್ಲ ಎನ್ನಲಾಗಿದೆ.  ಆರಂಭದಲ್ಲಿ ಭಿನ್ನಮತೀಯರ ಕೈ ಮೇಲಾಗಿದ್ದು, ಶಾಸಕರಿಗೆ ಈ ಬಾರಿ ಮರ್ಮಾಘಾತವಾಗಲಿದೆ ಎಂದೇ ಬಿಂಬಿಸಲಾಗಿತ್ತು. ಶಾಸಕ ಎಂ.ಟಿ.ಕೃಷ್ಣಪ್ಪ ಸ್ವತಃ ಅಖಾಡಕ್ಕಿಳಿದು, ಭಿನ್ನಮತೀಯ ಸದಸ್ಯರೊಡನೆ ನಡೆಸಿದ ಮಾತುಕತೆ ಫಲ ನೀಡಿದೆ.
 ಪರಿಣಾಮ ಭಿನ್ನಮತೀಯರ ತಂತ್ರ ಠುಸ್ ಆಗಿದೆ. ಶಾಸಕರು ಅಧಿಕೃತವಾಗಿ ನಾಮಪತ್ರ ಸಲ್ಲಿಸಲು ಆದೇಶಿಸುವುದು ಮಾತ್ರ ಬಾಕಿ ಉಳಿದಿದೆ. ಪ್ರವಾಸ ಯೋಗದಲ್ಲಿದ್ದ ಹಲವಾರು ಸದಸ್ಯರು ನಾಳೆ ಬೆಳಗ್ಗೆ ಸೀದಾ ತಾಲೂಕು ಪಂಚಾಯ್ತಿಯ ಮತಕೇಂದ್ರಕ್ಕೇ ಬರುವರು ಎಂದು ನಿರೀಕ್ಷಿಸಲಾಗಿದೆ. ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com