ತುಮಕೂರು: ತುಮಕೂರಿನ ಶೆಟ್ಟಿಹಳ್ಳಿಯಿಂದ ಕೆ.ಪಾಲಸಂದ್ರ ಮುಖಾಂತರ 16ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣ, ಡಾಂಬರೀಕರಣ ಹಾಗೂ ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಎಐವೈಎಫ್ ನೇತೃತ್ವದಲ್ಲಿ ಕೆ. ಪಾಲಸಂದ್ರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಅತ್ಯಂತ ಶಿಥಿಲ, ಕಿರಿದಾದ ಮತ್ತು ಕಳೆಪೆ ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಹಾಗೂ ಶೆಟ್ಟಿಹಳ್ಳಿ ಕೆ.ಪಾಲಸಂದ್ರ ಮಧ್ಯೆ ಎರಡು ಸೇತುವೆಗಳನ್ನು ತುರ್ತಾಗಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಕೆ.ಪಾಲಸಂದ್ರ ಗ್ರಾಮಸ್ಥರು ಹಾಗೂ ಎಐವೈಎಫ್. ಗ್ರಾಮಶಾಖಾ ಮುಖಂಡರು ಪ್ರತಿಭಟನೆ ನಡೆಸಿದರು.
ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ ಮಾತನಾಡಿ, ಹಲವಾರು ಬಾರಿ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ರಸ್ತೆ ದುರಸ್ತಿಯ ಬಗ್ಗೆ ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಹೋರಾಟಕ್ಕೆ ಬೆಂಬಲ ನೀಡುವುದು ಅನಿವಾರ್ಯವಾಗಿದೆ ಎಂದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐವೈಎಫ್ ಜಿಲ್ಲಾ ಉಪಾಧ್ಯಕ್ಷ ವಿ.ಚಿನ್ನಪ್ಪ ಮಾತನಾಡಿ, ತುಮಕೂರು ತಾಲೂಕು, ಕೆ.ಪಾಲಸಂದ್ರ, ಶೆಟ್ಟಿಹಳ್ಳಿಯಿಂದ ಹಾದುಹೋಗುವ ರಸ್ತೆಯಲ್ಲಿ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಈ ರಸ್ತೆ ತುಂಬಾ ಹಾಳಾಗಿರುವುದರಿಂದ ಕೂಡಲೇ ರಿಪೇರಿಯಾಗಬೇಕು. ಅಷ್ಟೇ ಅಲ್ಲ ರಸ್ತೆ ಅಗಲೀಕರಣ ಆಗಬೇಕು ಹಾಗೂ ಡಾಂಬರೀಕರಣ ಆಗಬೇಕು. ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳು ಕೂಡಲೇ ತುರ್ತಾಗಿ ನಿರ್ಮಾಣ ಮಾಡಬೇಕು. ತುಮಕೂರು ಗ್ರಾಮಾಂತರದ ಶಾಸಕರಾದ ಬಿ.ಸುರೇಶ್ಗೌಡರು ಪಾಲಸಂದ್ರ ಪಂಚಾಯಿತಿ ಓಟುಗಳಿಗಾಗಿ ಜನರಿಗೆ ಆಶ್ವಾನೆ ನೀಡಿದ್ದು ಎರಡು ಬಾರಿ ಗೆಲ್ಲುತ್ತಾ ಬಂದಿರುವ ಗೌಡರು ಜನರಿಗೆ ದ್ರೋಹ ಬಗೆದಿದ್ದಾರೆ. ರಸ್ತೆಯ ಪಕ್ಕದಲ್ಲಿ ಒಂದು ಹಾಳು ಬಾವಿ ಇದ್ದು ಗ್ರಾಮ ಪಂಚಾಯಿತಿ ವತಿಯಿಂದ ಬಾವಿಯನ್ನು ಮುಚ್ಚಿಸಬೇಕು. ಗ್ರಾಮ ಮಧ್ಯೆ ಭಾಗದಲ್ಲಿ ಬೀದಿ ದೀಪ ಹೈ ಮಾಸ್ಟ್ ಅಳವಡಿಸಬೇಕು. ಪಾಲಸಂದ್ರ ಗ್ರಾಮದ ಜನರ ಹಿತಕ್ಕೋಸ್ಕರ ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುವ ರಸ್ತೆಯನ್ನು ತುರ್ತಾಗಿ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಎಐವೈಎಫ್ ನ ಜಿಲ್ಲಾ ಕಾರ್ಯದರ್ಶಿ ವಾಸುದೇವ್ ಕುಮಾರ್ ಮಾತನಾಡಿ, ಶೆಟ್ಟಿಹಳ್ಳಿ, ಪಾಲಸಂದ್ರ ಸಂಪರ್ಕಿಸುವ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಪಡಿತರ ಚೀಟಿಯ ಆಹಾರ ಧಾನ್ಯ ಸಾಗಿಸುತ್ತಿದ್ದ ಲಾರಿ ಈ ಕಿಕ್ಕಿರಿದ ರಸ್ತೆಯಲ್ಲಿ ಅಪಘಾತವಾಗಿದ್ದು ಸಂಬಂಧಿಸಿದವರ ಗಮನಕ್ಕೂ ಬಂದಿದ್ದರೂ ಇದುವರೆಗೂ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ತುರ್ತಾಗಿ ರಸ್ತೆ ಅಗಲೀಕರಣ, ಡಾಂಬರೀಕರಣ, ಸೇತುವೆ ನಿರ್ಮಾಣ ಮಾಡಬೇಕೆಂದು ಶಾಸಕರಲ್ಲಿ ಒತ್ತಾಯಿಸಿದರು.
ಗ್ರಾಮದ ಮುಖಂಡರಾದ ಪಿ.ಸಿ. ಶಿವರಾಜ್ ಮಾತನಾಡಿ, ತುಮಕೂರು ಗ್ರಾಮಾಂತರ ಶಾಸಕರಾದ ಬಿ.ಸುರೇಶ್ ಗೌಡರವರಿಗೆ ಎರಡು ಬಾರಿಯೂ ಸುಮಾರು 700ಕ್ಕೂ ಹೆಚ್ಚು ಮತಗಳನ್ನು ನೀಡಿ ನಮ್ಮ ಗ್ರಾಮಸ್ಥರು ಗೆಲವಿಗೆ ಕಾರಣಕರ್ತರಾಗಿದ್ದಾರೆ. ನಮ್ಮ ಗ್ರಾಮನ್ನು ನಿರ್ಲಕ್ಷಿಸಿರುವುದು ಬೇಸರ ಸಂಗತಿಯಾಗಿದೆ. ಈಗಲಾದರೂ ಸುರೇಶ್ ಗೌಡರವರು ನಮ್ಮ 16 ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯನ್ನು ಸರಿಪಡಿಸಬೇಕೆಂದು ಪ್ರತಿಭಟನೆ ಮುಖಾಂತರ ಆಗ್ರಹಿಸುತ್ತಿದ್ದೇವೆ ಎಂದರು.
ಕೆ.ಪಾಲಸಂದ್ರ ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ ಹಾಗೂ ಸದಸ್ಯರುಗಳಾದ ಹನುಮಂತರಾಯಪ್ಪ ಹಾಗೂ ರಾಜಣ್ಣನವರು ಹೋರಾಟಕ್ಕೆ ಬೆಂಬಲವನ್ನು ಘೋಷಿಸಿದರು. ಪ್ರತಿಭಟನೆಯ ನೇತೃತ್ವವನ್ನು ಗಿರೀಶ್, ಚಂದ್ರಶೇಖರ್, ದಯಾನಂದ್, ಶರಣಪ್ಪ, ಜೈಶಂಕರ್, ಚೌಡಪ್ಪ, ಶಶಿ, ಶಿವ, ಶೇಖರ್, ಲೋಕೇಶ್, ರಾಮು, ಬಸವರಾಜು, ಪೋಟೋ ಸೂರಿ, ರವಿ, ರಾಮಕೃಷ್ಣಯ್ಯ ವಹಿಸಿದ್ದರು.