ತುಮಕೂರು: ಕವಿಗೆ ಧರ್ಮ ಎಷ್ಟು ಮುಖ್ಯವೋ ಕಾವ್ಯ ಧರ್ಮವೂ ಅಷ್ಟೆ ಮುಖ್ಯ. ಹೀಗಾಗಿ ಕವಿಯ ಅಂತರಂಗ ಕಾವ್ಯ ಕಾಶಿಯಾಗಿರಬೇಕು ಎಂದು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ಅವರು ನಗರದ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಮಹಿಳಾ ಮಕ್ಕಳ ಸಾಹಿತ್ಯ ಕೂಟ ಆಯೋಜಿಸಿದ್ದ ಶಿಕ್ಷಕ ಕವಿ ಕೆ.ಎಸ್. ಚಿದಾನಂದ ಅವರ ಒಲವಿನ ಅಲೆಗಳು ಕೃತಿ ಕುರಿತ ಸಂವಾದ ಗೋಷ್ಠಿ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸುನೀತಾ ಮೂರ್ತಿ ಅವರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾವ್ಯಧರ್ಮ ಜೀವನ ಧರ್ಮವಾಗಬೇಕು. ಜೀವನ ಧರ್ಮದ ಮರ್ಮವನ್ನು ಕಾವ್ಯಧರ್ಮ ದರ್ಶಿಸಬೇಕು. ಕವಿತೆಗಾಗಿ ಕವಿತೆ ರೂಪುಗೊಳ್ಳಬಾರದು. ಸಮಾಜ ಕಲ್ಯಾಣಕ್ಕಾಗಿ ಕಾವ್ಯ ರೂಪುಗೊಳ್ಳಬೇಕು. ಯುವಕವಿ ಚಿದಾನಂದ ಅಪ್ಪಟ ಗ್ರಾಮೀಣ ಪ್ರತಿಭೆ. ಅಧ್ಯಯನ, ಅಧ್ಯಾಪನಗಳಿಂದ ಅವರ ಭಾವಕೋಶ ವಿಕಾಸವಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಲೇಖಕಿ ತಾ.ಸ. ಪುಷ್ಪ ಮಾತನಾಡಿ, ಶಿಕ್ಷಣದಿಂದ ಮಾನವ ಕಲ್ಯಾಣ ಸಾಧ್ಯ. ಅಕ್ಷರ ಸಂಸ್ಕೃತಿಯ ಆರಾಧನೆಯಿಂದ ಸಮಾಜದ ಸರ್ವಾಂಗೀಣ ಪ್ರಗತಿಯಾಗಬಲ್ಲದು ಎಂದರು.
ಶಿರಾ ತಾಲೂಕು ಕಸಾಪ ಅಧ್ಯಕ್ಷ ವೈ. ನರೇಶಬಾಬು ಮಾತನಾಡಿ, ಸೇವಾಭಾವದಿಂದ ವ್ಯಕ್ತಿಯ ಬದುಕು ಪರಿಪೂರ್ಣವಾಗಬಲ್ಲದು. ಸಾಹಿತ್ಯ ಸೇವೆಯಿಂದ ಕವಿಯ ಬದುಕು ಸಾರ್ಥಕ ಎಂದರು. ಲೇಖಕಿ ಪದ್ಮಾಕೃಷ್ಣಮೂರ್ತಿ ಅವರು ಸುನೀತಾ ಅವರಿಗೆ ಶಾಲು ಹೊದಿಸಿ, ಫಲ ತಾಂಬುಲವಿತ್ತು ಸನ್ಮಾನಿಸಿದರು. ಕೆ.ಜಿ.ಎಲ್. ರವಿ, ಭಾಗ್ಯಲಕ್ಷ್ಮೀ ಚಿದಾನಂದ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕಮಲಾ ಬಡ್ಡಿಹಳ್ಳಿ ವಹಿಸಿದ್ದರು. ಹರಿಕಥೆ ಶಂಕರಣ್ಣ ಪ್ರಾರ್ಥಿಸಿದರು. ಪಾರ್ವತಿ ರಾಜ್ ಸ್ವಾಗತಿಸಿದರು. ಸಿದ್ದಾಪುರ ನರಸಿಂಹಯ್ಯ ವಂದಿಸಿದರು.
ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
ತುಮಕೂರು: ಕುಣಿಗಲ್ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ನೀಡಲು ಅರ್ಹ ಪ್ರವರ್ಗ 1, 2ಎ, 3ಎ ಮತ್ತು 3ಬಿ ವರ್ಗದವರಿಂದ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿ ವೇತನ ಪಡೆಯುವ ಅಭ್ಯರ್ಥಿಗಳು 5ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದು, ಕುಟುಂಬದ ವಾರ್ಷಿಕ ಆದಾಯ 44,500 ಮಿತಿಯೊಳಗಿರಬೇಕು. ಹಿಂದಿನ ತರಗತಿಯಲ್ಲಿ ಶೇ.75ರಷ್ಟು ಹಾಜರಾತಿಯಿದ್ದು, ಉತ್ತೀರ್ಣರಾಗಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಸರ್ಕಾರದ, ಸರ್ಕಾರಿ ಅನುದಾನಿತ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದಿರಬಾರದು. ಆಯ್ಕೆಯಾದ
5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ 250, 8ರಿಂದ 10ನೇ ತರಗತಿಯ ಬಾಲಕರಿಗೆ 500 ಹಾಗೂ ಬಾಲಕಿಯರಿಗೆ 600 ವಿದ್ಯಾರ್ಥಿ ವೇತನ ನೀಡಲಾಗುವುದು. ಆಸಕ್ತರು ತಮ್ಮ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ಕಾರ್ಡ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಹೊಂದಿರುವ ಖಾತೆ ವಿವರ ಹಾಗೂ ಬ್ಯಾಂಕ್ನ ವಿವರಗಳನ್ನು ಆ.31ರೊಳಗಾಗಿ ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕುಣಿಗಲ್ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದು.