ತುಮಕೂರು: ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 32 ವರ್ಷದ ಕಾಂತರಾಜು ಹಾಗೂ 26 ವರ್ಷದ ಪುಷ್ಪಲತಾ ಕಾಣೆಯಾಗಿರುವ ಬಗ್ಗೆ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಕಾಂತರಾಜು ಎಂಬ ವ್ಯಕ್ತಿ 2014 ರ ಜೂನ್ 19 ರಂದು ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದವನು ಮರಳಿ ಬಾರದೆ ಕಾಣೆಯಾಗಿದ್ದಾನೆ. ಈ ಕುರಿತು ತಾಯಿ ಧನಲಕ್ಷ್ಮಮ್ಮ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ತಾಲೂಕು ಮಣ್ಣೆ ಗ್ರಾಮದಲ್ಲಿ ಗ್ರಾಮಲೆಕ್ಕಿಗನಾಗಿ ಸೇವೆ ಸಲ್ಲಿಸುತ್ತಿದ್ದ ಈತ ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ತೆಳ್ಳನೆ ಶರೀರ ಹೊಂದಿದ್ದಾನೆ. ಕನ್ನಡ ಮಾತನಾಡುತ್ತಾನೆ, ಮನೆಯಿಂದ ಹೋಗುವಾಗ ಬಿಳಿ ಮತ್ತು ನೇರಳೆ ಬಣ್ಣ ಮಿಶ್ರಿತ ಚೆಕ್ಸ್ ಷರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಪುಷ್ಪಲತಾ ಎಂಬ ಗೃಹಿಣಿಯು 2014 ರ ಜುಲೈ 14 ರಂದು ಬೆಳಿಗ್ಗೆ 6 ಗಂಟೆಗೆ ಕಂಚಿಗಾನಹಳ್ಳಿಯ ತನ್ನ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಈಕೆಯ ಪತಿ ದೂರು ನೀಡಿದ್ದಾನೆ. ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡಬಲ್ಲಳು. ಹಸಿರು ಬಣ್ಣದ ಸೀರೆ ಮತ್ತು ಕಪ್ಪು ಬಣ್ಣದ ರವಿಕೆ ಧರಿಸಿದ್ದಾಳೆ.ಇವರಿಬ್ಬರ ಬಗ್ಗೆ ಸುಳಿವು ದೊರೆತವರು ಕೂಡಲೇ ಶಿರಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಪತ್ತೆಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಸಹಾಯಧನಕ್ಕೆ ಅರ್ಜಿ ಕರೆ
ತಿಪಟೂರು: ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಎನ್.ಎಚ್.ಎಂ., ಆರ್.ಕೆ.ವಿ.ವೈ. ಸಿಡಿಬಿ ಹಾಗೂ ಮತ್ತಿತರ ಯೋಜನೆಗಳಡಿ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿ ಕರೆಯಲಾಗಿದೆ. ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ, ಸಂರಕ್ಷಿತ ತೋಟಗಾರಿಕೆ ಬೇಸಾಯ, ಕೃಷಿ ಹೊಂಡ ನಿರ್ಮಾಣ, ಬಯೋಡೈಜೆಸ್ಟರ್ ನಿರ್ಮಾಣ, ಜೇನು ಸಾಕಾಣಿಕೆ, ಯಂತ್ರೋಪಕರಣ ಖರೀದಿ, ಬಾಳೆ ನಿಖರ ಬೇಸಾಯ ಕೈಗೊಳ್ಳಲು ಈ ಸಹಾಯಧನ ಒದಗಿಸಲಾಗುವುದು. ಅಲ್ಲದೆ ಸಿಎಚ್ಡಿ ಯೋಜನೆಯಡಿ ನೊಣವಿನಕೆರೆ ಹೋಬಳಿಯ ಮಾರಗೊಂಡನಹಳ್ಳಿ, ವಿಘ್ನಸಂತೆ, ಆಲ್ಬೂರು, ಹಾರನಕಟ್ಟೆ ಗ್ರಾಮಗಳಲ್ಲಿ ಆಧುನಿಕ ಪದ್ಧತಿಯಲ್ಲಿ ಟೊಮೆಟೋ ಬೆಳೆ ಹಾಗೂ ಮತ್ತಿತರ ಬೇಸಾಯ ಕೈಗೊಳ್ಳಲು ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಬಯಸುವವರು ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅಥವಾ ತಿಪಟೂರು ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ವಾ. 08134-251424 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಾಲೆ ದುರಂತ: ಆತಂಕ
ತುಮಕೂರು: ಚನ್ನರಾಯಪಟ್ಟಣದ ನಾಗಸಮುದ್ರ ಹೇಮಾವತಿ ನಾಲೆ ದುರಂತ ಇದೀಗ ತುಮಕೂರು ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸಿದೆ.ಜಿಲ್ಲೆಯಲ್ಲಿ ಹಾದು ಹೋಗುವ ಹೇಮಾವತಿ ನಾಲೆಯ ಆಧುನೀಕರಣದ ನಿರೀಕ್ಷೆ ಹುಸಿಯಾಗಿದ್ದು ಒಂದೆಡೆ ದುಸ್ಥಿತಿಯಲ್ಲಿರೋ ನಾಲೆಯಿಂದ ಜಿಲ್ಲೆಗೆ ಬರಬೇಕಾದ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ನಾಲೆಯಿಂದ ನೀರು ಬಂದರೆ ಅನಾಹುತ ಸಂಭವಿಸಬಹುದೆಂಬ ಆತಂಕ ನಾಲಾವಲಯದ ಜನರಲ್ಲಿ ಮೂಡಿದೆ.ಹಾಸನ ಜಿಲ್ಲೆಯ ಗೊರೂರು ಜಲಾಶಯದಿಂದ ನೀರು ಬಿಟ್ಟ ಪರಿಣಾಮ ಚನ್ನರಾಯಪಟ್ಟಣದ ನಾಗಸಮುದ್ರ ಬಳಿ ನಾಲೆ ಹೊಡೆದು ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ. ನಾಲೆ ದುರಸ್ಥಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳದ ಪರಿಣಾಮ ಹೇಮಾವತಿ ನಾಲೆ ಹಾಳಾಗಿದೆ. ಚನ್ನರಾಯಪಟ್ಟಣ ದಾಟುತ್ತಿದ್ದಂತೆ ತುಮಕೂರು ಪ್ರವೇಶಿಸಲಿದೆ. ಜಿಲ್ಲೆಯ 240 ಕಿಲೋಮೀಟರ್ ಉದ್ದದ ಹೇಮಾವತಿ ನಾಲೆಯಲ್ಲಿ ಈವರೆಗೂ ಕೇವಲ 187 ಕಿಲೋಮೀಟರ್ನಷ್ಟು ಮಾತ್ರ ನಾಲೆಯ ತೇಪೆಕಾರ್ಯ ನಡೆದಿದೆ. ಆದರೆ ಜಿಲ್ಲೆಗೆ 24 ಟಿಎಂಸಿಯಷ್ಟು ನೀರು ಬರಬೇಕಿರುವುದರಿಂದ ನೀರನ್ನು ತಡೆಯುವ ಶಕ್ತಿ ನಾಲೆ ಹೊಂದಿಲ್ಲ. ಜಿಲ್ಲೆಯ ತುರುವೇಕೆರೆ ಅಮ್ಮಸಂದ್ರ ಗುಬ್ಬಿ ತಾಲೂಕಿನ ಹಲವೆಡೆ ನಾಲೆಗೆ ಬೃಹದಾಕಾರದ ಬಂಡೆಗಳು ಜಾರಿ ಬಿದ್ದಿವೆ. ಚೇಳೂರು ವ್ಯಾಪ್ತಿಯಲ್ಲಿ ಸಿಮೆಂಟ್ ಕಾಂಕ್ರಿಟ್ ಕಳಚಿ ಬಿದ್ದಿದೆ. ಹಲವೆಡೆ ಏರಿ ಕಾಲುವೆಗಳಲ್ಲಿ ನೀರು ಜೋಪಿಸುತ್ತಿರುವುದು ಕೂಡ ಕಂಡುಬಂದಿದೆ. ನಡುವೆ ಚನ್ನರಾಯಪಟ್ಟಣದ ನಾಲೆ ದುರಂತ ಜಿಲ್ಲೆಯ ಹೇಮಾವತಿ ನಾಲಾವಲಯದ ರೈತರಲ್ಲಿ ಆತಂಕ ಮೂಡಿಸಿದೆ.
ಉಪಾಕರ್ಮ ಆ.10ಕ್ಕೆ
ತುಮಕೂರು: ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ತ್ರಿಮತಸ್ಥ ಬ್ರಾಹ್ಮಣರಿಗೆ ಸಾಮೂಹಿಕವಾಗಿ ಖುಗ್ವೇದ ಉಪಾಕರ್ಮವನ್ನು ಆ.10ರಂದು ಭಾನುವಾರ ಬೆಳಗ್ಗೆ 6.30ರಿಂದ ತುಮಕೂರಿನ ಸೋಮೇಶ್ವರಪುರಂ ಅರಳೀಕಟ್ಟೆಯ ಹತ್ತಿರದ ಶ್ರೀರಾಮಮಂದಿರದಲ್ಲಿ ಏರ್ಪಡಿಸಲಾಗಿದೆ. ವೇದಬ್ರಹ್ಮಶ್ರೀ ಸಿ.ಎಸ್.ಪುರ ಜಯರಾಮ ಶಾಸ್ತ್ರಿಗಳು ಉಪಾಕರ್ಮದ ನೇತೃತ್ವ ವಹಿಸುವರು. ಈ ಅವಕಾಶ ತ್ರಿಮತಸ್ಥ ಬ್ರಾಹ್ಮಣರು ಉಪಯೋಗಿಸಿಕೊಳ್ಳಬೇಕೆಂದು ಸಂಘದ ಆಧ್ಯಕ್ಷ ಎನ್. ಸತ್ಯನಾರಾಯಣ ಮತ್ತು ಪ್ರಧಾನ ಕಾರ್ಯದರ್ಶಿ ಕೆ. ಹಿರಿಯಣ್ಣ ಕೋರಿದ್ದಾರೆ.
ಪರಮೇಶ್ವರನ್ನು ಡಿಸಿಎಂ ಮಾಡಲು ಮನವಿ
ಕೊರಟಗೆರೆ: ಮುಂದಿನ ತಿಂಗಳು ನಡೆಯುವ ಸಚಿವ ಸಂಪುಟ ಪುನರ್ ರಚನೆಯಲ್ಲಿ ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಕ್ರಮ ಕೈಗೊಳ್ಳುವಂತೆ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮತ್ತು ಕ್ರಾಂತಿಯೋಗಿ ಬಸವಣ್ಣ ಜಂಟಿ ಪ್ರಚಾರ ಸಮಿತಿ ಅಧ್ಯಕ್ಷ ಹುಲಿಕಲ್ ಶಿವಗಂಗಯ್ಯ ತಿಳಿಸಿದ್ದಾರೆ. ಕೊರಟಗೆರೆ ತಾಲೂಕಿನ ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಪರ್ವತಯ್ಯ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವೇಳೆ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸಿದ ಹಾಗೂ ರಾಜ್ಯದಲ್ಲಿ ಲಿಂಗಾಯಿತ ಸಮುದಾಯದ ಬಗ್ಗೆ ಕಾಳಜಿ ಉಳ್ಳ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಅವರನ್ನು ಡಿಸಿಎಂ ಮಾಡಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಮತ್ತು ಉಪಾಧ್ಯಕ್ಷ ರಾಹುಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದರು.
ಸೇತುವೆ ಕಾಮಗಾರಿಗೆ ಮುಂದಾದ ಅಧಿಕಾರಿಗಳು
ತಿಪಟೂರು: ತಿಪಟೂರಿನಿಂದ ಹಾಲ್ಕುರಿಕೆ ಮಾರ್ಗ ರಾಷ್ಟ್ರೀಯ ಹೆದ್ದಾರಿ 47ರಲ್ಲಿ ಅಣ್ಣಾಪುರ ಹಾಗೂ ಮಂಜುನಾಥನಗರ ಗೇಟಟ್ನಡುವೆ ಇರುವ ಮುಖ್ಯ ರಸ್ತೆಯ ಸೇತುವೆ ಈ ಹಿಂದೆ ಕುಸಿದು ಬಿದ್ದಿತ್ತು. ಅಧಿಕಾರಿಗಳು ಇದರ ರಿಪೇರಿಗೆ ಮುಂದಾಗಿರಲಿಲ್ಲ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿತ್ತು. ಇದನ್ನು ಮನಗಂಡ ಪತ್ರಿಕೆಯು ಸೇತುವೆ ಕುಸಿತ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಸುದ್ದಿ ಬಂದ ನಂತರ ಎಚ್ಚೆತ್ತುಕೊಂಡು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಉತ್ತಮ ಗುಣಮಟ್ಟದ ಸೇತುವೆಯನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಮುಗಿಯುವವರೆಗೂ ವಾಹನ ಸವಾರರು ಸೇತುವೆ ಪಕ್ಕದ ರಸ್ತೆಯಲ್ಲಿ ಚಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದರಿಂದ ವಾಹನ ಸವಾರರು ಹಾಗೂ ಸ್ಥಳೀಯ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು, ಸಹಾಯ ಹಸ್ತ ಚಾಚಿದ ಪತ್ರಿಕೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ
ಪ್ರತಿಭಟನೆಯಲ್ಲಿ ಭಾಗವಹಿಸಿ
ತಿಪಟೂರು: ಅಕ್ಷರ ದಾಸೋಹ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದ್ದು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟ, ಪ್ರತಿಭಟನೆಗಳಂತಹ ಕಾರ್ಯಕ್ರಮಗಳನ್ನು ನಡೆಸಿದರೂ, ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುತ್ತಿಲ್ಲ. ಆದ್ದರಿಂದ ಆಗಸ್ಟ್ 5ರಂದು ಅಖಿಲ ಭಾರತ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷೆ ನಾಗರತ್ನ ತಿಳಿಸಿದ್ದಾರೆ.ಅಕ್ಷರ ದಾಸೋಹ ನೌಕರರು ಕಳೆದ 11ವರ್ಷದಗಳಿಂದ ಯಾವುದೇ ಸೌಲಭ್ಯಗಳಿಲ್ಲದೆ ಬಿಸಿಯೂಟ ಯೋಜನೆಯಲ್ಲಿ ದುಡಿಯುತ್ತಿದ್ದಾರೆ. ಕಳೆದ ಕೇಂದ್ರ ಸರ್ಕಾರವೂ ರು. 1000 ವೇತನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿತ್ತು. ಇದುವೆರೆಗೂ ಸಹ ಸರಿಯಾದ ವೇತನ ನೀಡದೆ ನಮ್ಮನ್ನು ಕಡೆಗಣಿಸುತ್ತಿದೆ. ನಮ್ಮ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಬಿಸಿಯೂಟ ನೌಕರರು ತಪ್ಪದೇ ಭಾಗವಹಿಸಬೇಕು. ಭಾಗವಹಿಸುವ ಆಸಕ್ತ ನೌಕರರು ಆಗಸ್ಟ್ 2ರಂದು ತುಮಕೂರಿನ ರೈಲ್ವೆ ಸ್ಟೇಷನ್ಗೆ ಮಧ್ಯಾಹ್ನ 1ಗಂಟೆಗೆ ಹಾಜರಾಗಬೇಕೆಂದು ನಾಗರತ್ನ ತಿಳಿಸಿದ್ದಾರೆ.