ಶಿರಾಕ್ಕೆ ಕೊಕ್ಕರೆಗಳು

ಕನ್ನಡಪ್ರಭ ವಾರ್ತೆ    ತುಮಕೂರು    ಜ.21
ಕಳೆದ ಎರಡು ವರ್ಷಗಳಿಂದ ಬಾರದಿದ್ದ ವಿದೇಶಿ ಕೊಕ್ಕರೆಗಳು ಶಿರಾ ತಾಲೂಕಿಗೆ ಮತ್ತೆ ಬಂದಿದ್ದು ಕಗ್ಗಲಡು ಗ್ರಾಮದಲ್ಲೀಗ ಮತ್ತೆ ಕಿವಿ ತುಂಬುತ್ತಿದೆ ಹಕ್ಕಿಗಳ ನಾದ.
ಕಳೆದ ಎರಡು ವರ್ಷಗಳಿಂದ ಮಳೆ ಬಾರದೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದರಿಂದ ಕೊಕ್ಕರೆಗಳು ಬಂದಿರಲಿಲ್ಲ. ಈ ವರ್ಷ ಮತ್ತೆ ಪಕ್ಷಿಗಳು ಕಗ್ಗಲಡುವಿಗೆ ಬಂದಿದ್ದು ಗಿಡಮರದ ತುಂಬೆಲ್ಲಾ ಹಕ್ಕಿಗಳ ಹಿಂಡಿನದ್ದೇ ಕಾರುಬಾರಾಗಿದೆ. ಕಳೆದ ಒಂದು ವಾರದಿಂದ ಸುಮಾರು 30 ಪಕ್ಷಿಗಳು ಹುಣಸೇ ಮರಗಳಲ್ಲಿ ಗೂಡು ನಿರ್ಮಾಣ ಮಾಡುತ್ತಿವೆ. ತಮ್ಮ ಕೊಕ್ಕುಗಳಲ್ಲಿ ಸಣ್ಣ ಸಣ್ಣ ರೆಂಬೆಗಳನ್ನು ತಂದು ಗೂಡು ನಿರ್ಮಾಣದಲ್ಲಿ ತೊಡಗಿವೆ. ಇನ್ನು ಕೆಲವು ಬೇರೆ ಮರಗಳ ಮೇಲೆ ಪ್ರದಕ್ಷಿಣೆ ಹಾಕಿ ಮರಗಳನ್ನು ಆಯ್ಕೆ ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ. ಗುಂಡಪ್ಪ ತಿಳಿಸಿದ್ದಾರೆ.
ಆಕರ್ಷಣೆ: ಕಗ್ಗಲಡು ಗ್ರಾಮಕ್ಕೆ ಈ ಪಕ್ಷಿಗಳು 1991 ರಿಂದ 2011 ರವರೆಗೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಬಂದು ಕೂಡು ಕಟ್ಟಿ, ಮೊಟ್ಟೆ ಇಟ್ಟು ಜೂನ್ ತಿಂಗಳಿನಲ್ಲಿ ಹಿಂದಿರುಗುತ್ತಿದ್ದವು. 1999 ರಲ್ಲಿ ಸುಮಾರು 600 ಪಕ್ಷಿಗಳು 12 ಹುಣಸೇ, ಬೇವು ಜಾಲಿ ಮರಗಳಲ್ಲಿ 280 ರಷ್ಟು ಗೂಡುಗಳನ್ನು ನಿರ್ಮಾಣ ಮಾಡಿ ರಾಜ್ಯದ ಜನರನ್ನು ಆಕರ್ಷಿಸುತ್ತಿದ್ದವು. ಈ ವರ್ಷವೂ ಸಹ 400 ಕ್ಕಿಂತ ಹೆಚ್ಚು ಪಕ್ಷಿಗಳು ಬರುವ ನಿರೀಕ್ಷೆ ಇದೆ.
ಪಕ್ಷಿಗಳಲ್ಲಿರುವ ಹುಣಸೇ ಮರಗಳ ಕೆಳಗೆ ದಿನಾಲು ಪಾಠ ಕೇಳುವ ಇಲ್ಲಿನ ಶಾಲಾ ಮಕ್ಕಳು ಪಕ್ಷಿಗಳ ಆಗಮಿಸಿದ ದಿನಾಂಕ, ಪ್ರತಿ ದಿನ ಹೆಚ್ಚುತ್ತಿರುವ ಪಕ್ಷಿಗಳ ಸಂಖ್ಯೆ, ಗೂಡು ನಿರ್ಮಾಣಕ್ಕೆ, ಬಳಸುವ ವಸ್ತುಗಳು, ಗೂಡಿನ ವಿನ್ಯಾಸ, ಗಂಡು ಹೆಣ್ಣುಗಳ ಪ್ರಣಯ ದೃಶ್ಯ, ಹಾರಾಟದ ವಿಧಾನ, ಗೂಡಿನಿಂದ ಹಾರುವ, ಇಳಿಯುವ ದೃಶ್ಯಗಳನ್ನು ದಾಖಲಿಸಲು ಇಲ್ಲಿನ ಶಿಕ್ಷಕ ರಂಗನಾಥ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ಪಕ್ಷಿಗಳ ಆಗಮನದಿಂದಾಗಿ ಹುಣಸೆ ಮರಗಳನ್ನು ಹಣ್ಣಿಗಾಗಿ ಬಡಿಯುವುದಿಲ್ಲವೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಬಣ್ಣದ ಕೊಕ್ಕರೆಗಳು ದೇಶಾದ್ಯಂತ ಕಡಿಮೆಯಾಗುತ್ತಿದ್ದು ಅಳಿವಿನಂಚಿಲ್ಲಿದೆ. ಐಯುಸಿಎನ್ ಸಂಸ್ಥೆಯು ಬಣ್ಣದ ಕೊಕ್ಕರೆಗಳನ್ನು ಕೆಲವು ಪಟ್ಟಿಯಲ್ಲಿ ಸೇರಿಸಿ ಸಂರಕ್ಷಣೆಗೆ ಆದ್ಯತೆ ನೀಡಲು ಆದೇಶಿಸಿದೆ.
ಆದ್ದರಿಂದ ಅರಣ್ಯ ಇಲಾಖೆಯವರು ಈ ಗ್ರಾಮಕ್ಕೆ ಸಿಬ್ಬಂದಿಯನ್ನು ನಿಯೋಜಿಸಿ ಸುತ್ತಲಿನ ಕೆರೆ ಕಟ್ಟೆಗಳಲ್ಲಿ ಪಕ್ಷಿಗಳ ಬೇಟೆ ಮಾಡುವಿಕೆಯನ್ನು ನಿಯಂತ್ರಿಸಬೇಕೆಂದು ಬಿ.ವಿ. ಗುಂಡಪ್ಪ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com