ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಂಸ್ಥಾಪಕ, ಸಹಕಾರಿ ಪಿತಾಮಹ ದಿವಂಗತ ಮೊಳವಳ್ಳಿ ಶಿವರಾವ್ ಜನ್ಮದಿನ ಸಂಸ್ಮರಣೆ ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಜರಗಿತು. ಎಸ್‌ಸಿಡಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ ಶಿವರಾವ್ ಭಾವಚಿತ್ರಕ್ಕೆ ಹಾರ ಅರ್ಪಿಸಿದರು. ಶಿವರಾಯರ ಪ್ರಾಮಾಣಿಕ ಸೇವೆಯೇ ಸಹಕಾರಿ ಕ್ಷೇತ್ರಕ್ಕೆ ಭದ್ರ ಬುನಾದಿ. ಅವರ ಆದರ್ಶ ಜೀವನವನ್ನು ಸಹಕಾರಿಗಳು ಎಲ್ಲರು ಸ್ಮರಿಸುತ್ತಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾಗಿರುವ ಇವರು ಸಹಕಾರ ಕ್ಷೇತ್ರದ ಆದರಣೀಯ ವ್ಯಕ್ತಿತ್ವ ಹೊಂದಿದ್ದರು ಎಂದು ಸೂರಿಂಜೆ ನುಡಿ ನಮನ ಸಲ್ಲಿಸಿದರು. ಬ್ಯಾಂಕ್ ನಿರ್ದೇಶಕ ಎಂ.ವಾದಿರಾಜ ಶೆಟ್ಟಿ ವ್ಯವಸ್ಥಾಪನೆ ನಿರ್ದೇಶಕ ಎಂ.ಗೋಪಾಲಕೃಷ್ಣ ಭಟ್, ಬ್ಯಾಂಕ್ ಲೆಕ್ಕಪರಿಶೋಧಕ ಸಮಿತಿ ಸದಸ್ಯ ಉದಯಕುಮಾರ್ ಶೆಟ್ಟಿ, ಬ್ಯಾಂಕ್ ಅಧಿಕಾರಿಗಳು ಇದ್ದರು.
ಡಾ.ಡಿ.ಎ. ಶಂಕರ್, ಲಕ್ಷ್ಮೀಪತಿ ಕೃತಿಗೆ ವರ್ಧಮಾನ ಪ್ರಶಸ್ತಿ
ಮೂಡಬಿದಿರೆ: ಮೂಡುಬಿದಿರೆ ವರ್ಧಮಾನ ಪ್ರಶಸ್ತಿ ಪೀಠವು 2013ನೇ ಸಾಲಿನ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಯನ್ನು ಮೈಸೂರಿನ ಡಾ.ಡಿ.ಎ. ಶಂಕರ್ ಅವರ 'ಹೈದರಾಲಿ' ನಾಟಕ ಮತ್ತು ವರ್ಷದ ಶ್ರೇಷ್ಠ ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಯನ್ನು ಲಕ್ಷ್ಮೀಪತಿ ಕೋಲಾರ ಅವರ 'ಅಲ್ಲಮನ ಬಯಲಾಟ' ನಾಟಕಕ್ಕೆ ನೀಡಲು ನಿರ್ಧರಿಸಿದೆ. ಪೀಠದ ಅಧ್ಯಕ್ಷ ಸಿ.ಕೆ. ಪಡಿವಾಳ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ 2013ರ ಸಾಲಿನ ತೀರ್ಪುಗಾರ ಮಂಡಳಿ ಸದಸ್ಯರಾದ ಪ್ರೊ.ಎ.ವಿ. ನಾವಡ, ಡಾ.ಬಿ. ಜನಾರ್ದನ ಭಟ್, ವಿ.ಗ. ನಾಯಕ ನೀಡಿದ ಅಂಕಗಳ ಆಧಾರದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೂಡುಬಿದಿರೆ ಸಮಾಜ ಮಂದಿರದ ವತಿಯಿಂದ ನಡೆಯುವ ದಸರಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾನಾ. ಮೊಗಸಾಲೆ ತಿಳಿಸಿದ್ದಾರೆ.
ಡಾ.ಡಿ.ಎ. ಶಂಕರ್: ತೀರ್ಥಹಳ್ಳಿ ಮೂಲದ ಪ್ರೊ.ಡಿ.ಎ. ಶಂಕರ್ ಇಂಗ್ಲಿಷ್ ಸ್ನಾತಕೋತ್ತರ ಪದವೀಧರರಾಗಿದ್ದು, ಪ್ರೊ. ವಿಲಿಯಂ ಎಂಪ್ಸನ್ ಮಾರ್ಗದರ್ಶನದಲ್ಲಿ ಇಂಗ್ಲಂಡ್‌ನ ಷೆಷೀಲ್ಡ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಡೆಸಿ, ಮೈಸೂರು ವಿ.ವಿ.ಯಿಂದ ಮತ್ತೆ ಪಿ.ಎಚ್.ಡಿ ಪದವೀಧರರಾಗಿದ್ದಾರೆ. ನಂತರ ಅದೇ ವಿ.ವಿ.ಯಲ್ಲಿ ಪ್ರೊಫೆಸರ್ ಆಗಿ ನಿವೃತ್ತರಾದವರು. ರಾಷ್ಟ್ರದ ವಿವಿಧ ವಿ.ವಿ.ಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. 7 ನಾಟಕ ಮತ್ತು 1 ಕಾದಂಬರಿ ರಚಿಸಿರುವ ಅವರು ಕನ್ನಡದಿಂದ ಇಂಗ್ಲಿಷ್‌ಗೆ 16 ಕೃತಿಗಳನ್ನು, ಇಂಗ್ಲಿಷ್‌ನಿಂದ ಕನ್ನಡಕ್ಕೆ 12 ಕೃತಿ ಅನುವಾದಗೊಳಿಸಿದ್ದಾರೆ. ಇಂಗ್ಲಿಷ್‌ನಲ್ಲಿ ನಾಲ್ಕು ವಿಮರ್ಶಾ ಸಂಕಲನ ರಚಿಸಿದ್ದಾರೆ.
ಲಕ್ಷ್ಮೀಪತಿ ಕೋಲಾರ: ಕೋಲಾರ ಮೂಲದ ಲಕ್ಷ್ಮೀಪತಿ ಕೋಲಾರ ಹವ್ಯಾಸಿ ಪತ್ರಕರ್ತ. ಕವಿ, ವಿಮರ್ಶಕ, ನಾಟಕಕಾರ, ಜಾನಪದ ಸಂಶೋಧಕ, ಚಲನಚಿತ್ರ ಕೃತಿಕಾರರಾಗಿ ಪ್ರಸಿದ್ಧಿ ಪಡೆದವರು. ಅವರು 3 ನಾಟಕಗಳನ್ನು ಹಾಗೂ 3 ಕವನ ಸಂಗ್ರಹ ಹೊರತಂದಿದ್ದು, ರಾಷ್ಟ್ರಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆಯೂ ಅವರಿಗಿದೆ. ಗಿರೀಶ್ ಕಾಸರವಳ್ಳಿ, ನಾಗಾಭರಣ ಮೊದಲಾದವರು ನಿರ್ದೇಶಿಸಿದ ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಿಗೆ ಅವರು ಸಂಭಾಷಣೆಯನ್ನೂ ಬರೆದುಕೊಟ್ಟಿದ್ದಾರೆ. ಬೇರು ಮತ್ತು ಮುಖಾಮುಖಿ ಚಲನಚಿತ್ರಗಳ ಮೂಲಕ ಅವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಬಹುಮಾನ ಪಡೆದಿದ್ದಾರೆ. ವೀಚಿ ಸಾಹಿತ್ಯ ಪ್ರಶಸ್ತಿ, ಜೋಳದರಾಶಿ ದೊಡ್ಡಣ ಗೌಡ ಪ್ರಶಸ್ತಿ, ಸಂಸರಂಗ ಪುರಸ್ಕಾರದಂಥ ಪ್ರಶಸ್ತಿಗಳೂ ಅವರಿಗೆ ಬಂದಿವೆ.
ವಿದ್ಯಾರ್ಥಿ ಕಲಿತದ್ದನ್ನು ಪ್ರಯೋಗಕ್ಕೆ ಒಡ್ಡುವ ಕ್ರಿಯಾಶೀಲತೆ ಅಗತ್ಯ: ಡಾ. ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ: ವಿದ್ಯೆಯ ಮೇಲೆ ಶ್ರದ್ಧೆ, ಕಲಿಯುವ ವಿಷಯದ ಕುರಿತು ಅಪಾರ ಪ್ರೀತಿ, ಕುತೂಹಲವಿರಬೇಕು. ಮತ್ತಷ್ಟು ಹೊಸ ವಿಷಯಗಳನ್ನು ಕಲಿಯುವ, ಕಲಿತದ್ದನ್ನು ಪ್ರಯೋಗಕ್ಕೆ ಒಡ್ಡುವ ಕ್ರೀಯಾಶೀಲತೆ ಬೆಳೆಸಿಕೊಳ್ಳಬೇಕು. ಶಿಕ್ಷಣದ ಉದ್ದೇಶ ಕೇವಲ ಪದವಿ ನೀಡುವುದಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸೋಮವಾರ ಉಜಿರೆ ಯೋಗ ಮತ್ತು ಪ್ರಕಣತಿ ಚಿಕಿತ್ಸಾ ಕಾಲೇಜಿನಲ್ಲಿ ನಡೆದ ಉಜಿರೆ ಎಸ್.ಡಿ.ಎಂ.ಐ.ಟಿ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಥಮ ವರ್ಷದ ವಿದ್ಯಾಥರ್‌ಗಳಿಗೆ ನಡೆದ ಪ್ರಶಿಕ್ಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇವಲ ಪದವಿ ಸರ್ಟಿಫಿಕೇಟ್‌ನಿಂದ ಯಶಸ್ವಿ ಉದ್ಯೋಗಿಯಾಗಲು ಸಾಧ್ಯವಿಲ್ಲ. ಇದರ ಜೊತೆಗೆ ಉತ್ತಮ ವ್ಯಕ್ತಿತ್ವ, ಭಾಷಾಜ್ಞಾನವನ್ನು ತನ್ನಲ್ಲಿ ರೂಢಿಸಿಕೊಳ್ಳಬೇಕು ಎಂದರು. ಮಂಗಳೂರಿನ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಜಿತಕಾಮಾನಂದ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಎಸ್.ಡಿ.ಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಕೆ. ಸುರೇಶ್ ಸ್ವಾಗತಿಸಿದರು. ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ.ಎಂ.ವೈ ಮಂಜುಳಾ ವಂದಿಸಿದರು. ಎಸ್.ಡಿ.ಎಂ.ಐ.ಟಿ ಕಾಲೇಜಿನ ವಿದ್ಯಾರ್ಥಿಗಳಾದ ಮೋನಿಕಾ ಹೆಗ್ಡೆ ಹಾಗೂ ಯಾಸ್ಕಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
Advertisement