ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟವು ಸಂಸ್ಥೆ ಬೆಳ್ಳಿ ಹಬ್ಬ ಸಲುವಾಗಿ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನ.28ರಿಂದ30ರವರೆಗೆ ಪಿಲಿಕುಲ ನಿಸರ್ಗ ಧಾಮದಲ್ಲಿ ವಿಶ್ವ ತುಳುವೆರ ಪರ್ಬ-2014' ಆಯೋಜಿಸಿದೆ.
2010ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ರೂವಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನ, ಉಪಸ್ಥಿತಿಯಲ್ಲಿ ತುಳುವರ ಸಾಂಸ್ಕೃತಿಕ, ಸಾಹಿತ್ಯ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಒಕ್ಕೂಟ ಅಧ್ಯಕ್ಷ ಯು.ಧರ್ಮಪಾಲ ದೇವಾಡಿಗ ಶುಕ್ರವಾರ ತುಳು ಅಕಾಡೆಮಿ ಚಾವಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈಗಾಗಲೇ ಮುಂಬಯಿ, ಪುತ್ತೂರು, ಕಾಸರಗೋಡು, ಸಕಲೇಶಪುರ, ಮೈಸೂರು, ಕಡಬ, ಮೂಡುಬಿದರೆ ಮೊದಲಾದೆಡೆ ಪ್ರಾದೇಶಿಕ ಸಮಿತಿ ರಚಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಮಿತಿ ಅಧ್ಯಕ್ಷರಾಗಿದ್ದಾರೆ. ಡಾ.ಎಂ.ಮೋಹನ ಆಳ್ವ ಮೇಲುಸ್ತುವಾರಿಯಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾಮದ ಗುತ್ತಿನ ಮನೆ, ಸಂಸ್ಕೃತಿ ಗ್ರಾಮ ಪರಿಸರವನ್ನು ಸಮ್ಮೇಳನಕ್ಕೆ ಅಣಿಗೊಳಿಸಲಾಗುವುದು. ಪ್ರಭಾಕರ ಶರ್ಮ, ಜಯಪ್ರಕಾಶ ಭಂಡಾರಿ, ಎನ್.ಜಿ.ಮೋಹನ, ಡಾ.ಕೆ.ವಿ.ರಾವ್, ಡಾ.ಕಾವೇರಪ್ಪ ಅವರ ಸಹಕಾರದಲ್ಲಿ ತುಳು ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕೆ ಪೂರಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ವಿಜಯನಾಥ ವಿಠಲ ಶೆಟ್ಟಿ ನೇತೃತ್ವದಲ್ಲಿ ತುಳುವೆರ ಗೊಬ್ಬುಲು, ಆಟೋಟ ಸ್ಪರ್ಧೆಳು ಮಹಿಳೆ, ಪುರುಷ, ವಿದ್ಯಾರ್ಥಿ ವಿಭಾಗದಲ್ಲಿ ನಡೆಯಲಿದೆ. ನಾನಾ ಸ್ಪರ್ಧೆ, ಪ್ರದರ್ಶನ, ಪ್ರಾತ್ಯಕ್ಷಿಕೆಗಳ ಸಂಯೋಜನೆಯನ್ನು ಸಮಿತಿ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಮಾಡುವರು.
ಊರ, ಪರವೂರ ತುಳು ಸಂಘಟನೆಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಲು ತುಳುವೆರೈಸಿರಿ ಸಾಂಸ್ಕೃತಿಕ ಸ್ಪರ್ಧೆ ಸಮ್ಮೇಳನ ಪ್ರಧಾನ ವೇದಿಕೆಯಲ್ಲಿ ನಡೆಯಲಿದೆ. ಪ್ರತಿ ಸಂಘಟನೆಗಳಿಗೆ 20 ನಿಮಿಷದ ಕಾಲಾವಕಾಶ ಇದ್ದು, ತುಳು ಜಾನಪದ, ಸಂಸ್ಕೃತಿ, ಕಲೆಗಳನ್ನೊಳಗೊಂಡ ನೃತ್ಯ ಸಂಗೀತ ಸಹಿತ ಕಲಾಕಾರ್ಯಕ್ರಮ ನೀಡಬಹುದು. ಆಸಕ್ತರು ಸಮಿತಿ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟರನ್ನು ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ, ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ, ಸಂಚಾಲಕ ಲೀಲಾಕ್ಷ ಬಿ.ಕರ್ಕೆರ ಇದ್ದರು.
Advertisement