ಕನ್ಫ್ಯೂಷಿಯಸ್ ಕ್ರಿ.ಪೂ. 551 ರಿಂದ 429ರವರೆಗೆ ಜೀವಿಸಿದ್ದ ಚೀನೀ ತತ್ವಜ್ಞಾನಿ ಮತ್ತು ಗುರು. ಇವನಿಗೆ ಅನೇಕ ಶಿಷ್ಯರು ಇದ್ದರು. ತನ್ನ ನೀತಿಕಥೆಗಳಿಂದ, ಒಳ್ಳೆಯ ನಡವಳಿಕೆಯಿಂದ ಶಿಷ್ಯರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಿದ್ದ. 'ನಿನ್ನನ್ನು ನೀನು ಗೌರವಿಸಿಕೋ, ಇತರರು ನಿನ್ನನ್ನು ಗೌರವಿಸುತ್ತಾರೆ' ಎಂಬುದು ಅವನ ಉಪದೇಶಗಳಲ್ಲಿ ಒಂದಾಗಿತ್ತು. ಮಾನವೀಯ ಮೌಲ್ಯಗಳಿಗೆ ಅಪಾರ ಬೆಲೆ ನೀಡುತ್ತಿದ್ದ ಕನ್ಫ್ಯೂಷಿಯಸ್ ಎಲ್ಲರ ಗೌರವಕ್ಕೆ ಪಾತ್ರನಾಗಿದ್ದ.
ಒಮ್ಮೆ ಅವನ ಒಬ್ಬ ಶಿಷ್ಯ ಕೆಟ್ಟ ಚಾಳಿಗೆ ಬಿದ್ದುಬಿಟ್ಟ. ಸುಳ್ಳು, ವಂಚನೆ, ಕಳ್ಳತನದಲ್ಲಿ ಮುಳುಗಿದ್ದ ಅವನನ್ನು ಒಳ್ಳೆಯ ದಾರಿಗೆ ತರಲು ಕನ್ಫ್ಯೂಷಿಯಸ್ ತುಂಬಾ ಪ್ರಯತ್ನಪಟ್ಟ. ಒಳ್ಳೆ ಮಾತು ಹೇಳಿ ನೋಡಿದ. ಗದರಿಸಿ-ಹೆದರಿಸಿ ಪ್ರಯತ್ನ ಪಟ್ಟ. ಕೊನೆಗೆ ಚೆನ್ನಾಗಿ ಹೊಡೆದರೂ ಅವನು ಕುಬುದ್ಧಿ ಮಾತ್ರ ಬಿಡಲಿಲ್ಲ. ಅವನು ಒಂದೊಂದು ಕೆಟ್ಟ ಕೆಲಸ ಮಾಡಿದಾಗಲೂ ಕನ್ಫ್ಯೂಷಿಯಸ್ ಗೋಡೆಯ ಮೇಲೆ ಒಂದು ಮೊಳೆಹೊಡೆಯುತ್ತಿದ್ದ. ಹೀಗೆ ಹೊಡೆಯುತ್ತಾ ಹೊಡೆಯುತ್ತಾ ಗೋಡೆಯೆಲ್ಲಾ ಮೊಳೆಗಳಿಂದ ತುಂಬಿ ಹೋಯಿತು. ಒಂದು ದಿನ ತಪ್ಪು ಮಾಡಿ ಸಿಕ್ಕಿಬಿದ್ದ ಆ ಶಿಷ್ಯನನ್ನು ರಾಜಭಟರು ಹಿಡಿದುಕೊಂಡು ಹೋಗುತ್ತಿರುವಾಗ ಶಿಷ್ಯ ಎದುರಿಗೆ ಬರುತ್ತಿದ್ದ ತನ್ನ ಗುರುವಿನ ಕಾಲಿಗೆ ಬಿದ್ದು, ಇದೊಂದು ಬಾರಿ ತನ್ನನ್ನು ಬಿಡಿಸಬೇಕೆಂತಲೂ, ಇನ್ನು ಮುಂದೆ ತಪ್ಪು ಮಾಡುವುದಿಲ್ಲವೆಂದೂ ಗೋಗರೆದು ಕೇಳಿಕೊಂಡ. ಅವನ ಮೇಲೆ ಕರುಣೆ ತೋರಿ ಕನ್ಫ್ಯೂಷಿಯಸ್ ಅವನನ್ನು ಶಿಕ್ಷೆಯಿಂದ ಪಾರು ಮಾಡಿದ. ನಂತರ ಆ ಶಿಷ್ಯನ ಮನಸ್ಸು ಒಳ್ಳೆಯ ಕೆಲಸಗಳ ಕಡೆಗೆ ಹೊರಳಿತು. ಅಂದಿನಿಂದ ಸದಾ ಒಳ್ಳೆಯ ಕೆಲಸದಲ್ಲಿ ನಿರತನಾದ. ಒಂದೊಂದು ಒಳ್ಳೆಯ ಕೆಲಸ ಮಾಡಿದಾಗಲೂ ಒಂದೊಂದು ಮೊಳೆಯನ್ನು ಗುರು ಕೀಳುತ್ತಿದ್ದ. ಕೊನೆಗೆ ಗೋಡೆಗೆ ಹೊಡೆದಿದ್ದ ಎಲ್ಲ ಮೊಳೆಗಳೂ ತೆಗೆಯಲ್ಪಟ್ಟು ಅವನು ಸಂಪೂರ್ಣ ಒಳ್ಳೆಯವನಾದ. ಆದರೆ ಗೋಡೆಯ ಮೇಲೆ ಹೊಡೆದ ಮೊಳೆಯ ಗುರುತು ಮಾತ್ರ ಹಾಗೆಯೇ ಇತ್ತು. ಅವನು ತನ್ನ ಗುರುಗಳನ್ನು ಈ ಬಗ್ಗೆ ಕೇಳಿದ, 'ಮೊಳೆಗಳನ್ನೆಲ್ಲಾ ಕಿತ್ತರೂ ಅದರ ಕಲೆ ಮಾತ್ರ ಗೋಡೆಯ ಮೇಲೆ ಉಳಿದಿದೆಯಲ್ಲಾ?'
ಅದಕ್ಕೆ ಕನ್ಫ್ಯೂಷಿಯಸ್ ನೀಡಿದ ಉತ್ತರ ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಿದೆ. ಗುರು ಹೇಳಿದ, 'ನೀನು ಹೇಳುತ್ತಿರುವುದು ಸರಿಯಾಗಿಯೇ ಇದೆ. ಯಾರು ಕೆಟ್ಟ ಕೆಲಸವನ್ನು ಮಾಡುತ್ತಾರೋ ಅವನು ಒಳ್ಳೆಯದು ಮಾಡಿದರೂ ಕೆಟ್ಟವನಾಗಿದ್ದ ಅಪವಾದ ದೂರವಾಗುವುದಿಲ್ಲ. ಈ ಮೊಳೆಯ ಗುರುತುಗಳು ತಿಳಿಸುವುದೂ ಅದನ್ನೇ. ಆದ್ದರಿಂದ ನಾವು ಕೆಟ್ಟ ಕೆಲಸ ಮಾಡುವ ಮುನ್ನ ತುಂಬ ಯೋಚಿಸಬೇಕು.'
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ