ಬಡ ರೈತರ ಗೋಳು ನಿವಾರಿಸಿದ ಬಡವ!

Updated on: 

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಒಂದು ತೀರಾ ಹಿಂದುಳಿದ ಹಳ್ಳಿಯ ನಿವಾಸಿ ಗೋಪಾಲ್ ಬಿಸ್ಲೆ. ಆತ ಒಬ್ಬ ಬಡ ರೈತ. ಇದ್ದ ಸ್ವಲ್ಪ ಜಮೀನಿನಲ್ಲಿ ಬೇಸಾಯ ಮಾಡಲು ಬೇಕಾದ ನೇಗಿಲಾಗಲೀ, ಎತ್ತುಗಳಾಗಲೀ ಇಲ್ಲದೆ ಒದ್ದಾಡುತ್ತಿದ್ದ. ಅತೀ ಬಡವನಾದುದರಿಂದ ಕೂಲಿ ಬೇಸಾಯ ಮಾಡಿಸಲು ಸಹ ಶಕ್ತಿ ಇಲ್ಲದವನು. ಹೀಗಾಗಿ ಅವನ ಬಡತನದ ಗೋಳು ಕೇಳುವವರೇ ಇರಲಿಲ್ಲ. ಒಂದು ದಿನ ಅವನು ತನ್ನ ಜಮೀನಿಗೆ ಹೋಗುವಾಗ ಒಬ್ಬ ವ್ಯಾಪಾರಿ ಒಂದು ಬೈಸಿಕಲ್ಲಿನ ಮೇಲೆ ನಾಲ್ಕು ಮೂಟೆ ಹಿಟ್ಟನ್ನು ತೆಗೆದುಕೊಂಡು ಹೋಗುವುದನ್ನು ನೋಡಿದ. ಇದು ಸ್ವಲ್ಪ ಕಷ್ಟದಾಯಕವಾದರೂ ಸಹ ಗಾಡಿ ಬಾಡಿಗೆಯನ್ನು ಉಳಿಸಿದಂತಾಯಿತಲ್ಲಾ ಎನಿಸಿತು. ಆಗ ಬಿಸ್ಲೆ ಮನಸ್ಸಿಗೆ ಒಂದು ಯೋಚನೆ ಬಂತು. ತಾನೂ ಸಹ ಏಕೆ ಬೈಸಿಕಲ್ಲನ್ನು ಉಪಯೋಗಿಸಿ, ಸ್ವಲ್ಪ ಮಾರ್ಪಾಟು ಮಾಡಿ ವ್ಯವಸಾಯಕ್ಕೆ ಬಳಸಬಾರದು ಎಂದು. ಅನೇಕ ದಿನಗಳ ಪರಿಶ್ರಮದಿಂದ ಸೈಕಲ್ ಮುಂದಿನ ಆಕ್ಸಿಲ್ ಮತ್ತು ಗಾಲಿಗಳನ್ನು ಮಾರ್ಪಡಿಸಿ, ಎತ್ತುಗಳ ನೆರವಿಲ್ಲದೆ ಭೂಮಿ ಉಳುಮೆ ಮಾಡುವ ಒಂದು ಸಲಕರಣೆಯನ್ನು ತಯಾರಿಸಿದ. ಅದನ್ನು ನೋಡಿ ಹಳ್ಳಿಯ ಜನ ಇದರಿಂದ ಏನು ಉಪಯೋಗವಾಗುತ್ತದೆ ಎಂದು ಗೇಲಿ ಮಾಡಿದರು. ಆದರೆ ಎದೆಗುಂದದ ಬಿಸ್ಲೆ ಅದನ್ನು ಸುಧಾರಿಸಿ ಸುಲಭವಾಗಿ ಅದರಿಂದ ಉಳುಮೆ ಮಾಡಬಹುದೆಂದು ತೋರಿಸಿಕೊಟ್ಟ.
 ಆ ಉಪಕರಣಕ್ಕೆ 'ಕೃಷ್ಣರಾಜ' ಎಂದು ಹೆಸರಿಟ್ಟ. ಸ್ವತಃ ಅದರಿಂದ ಜಮೀನನನ್ನು ಉತ್ತು, ಬಿತ್ತಿ, ಬೆಳೆದು ತೋರಿಸಿದ. ಸದರಿ ಉಪಕರಣವು ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿಯನ್ನು ಗಳಿಸಿದಾಗ ಅವನ ಹೆಸರು ಎಲ್ಲೆಡೆ ಪಸರಿಸಿತು. ಆಗ ರೈತರು ಈ ಉಪಕರಣದ ಬಗ್ಗೆ ಆಸಕ್ತಿ ವಹಿಸಿದರು. ಇದರಿಂದ ಉತ್ತೇಜನಗೊಂಡ ಬಿಸ್ಲೆ ಇಂತಹ ಇನ್ನೂರು ಉಪಕರಣಗಳನ್ನು ತಯಾರಿಸಿ ಪ್ರತಿಯೊಂದಕ್ಕೂ 1200 ರುಪಾಯಿಗಳಂತೆಮಾರಾಟ ಮಾಡಿದ. ಇದು ಉಳುಮೆ ಮಾಡಲು ಎತ್ತುಗಳಿಲ್ಲದ ಬಡ ರೈತರಿಗೆ ಕಡಿಮೆ ವೆಚ್ಚದಲ್ಲಿ ಉಳುಮೆ ಮಾಡಲು ನೆರವಾಯಿತು.
ಇಂದಿಗೂ ತನ್ನ ಸಲಕರಣೆಯನ್ನು ಮಾರುತ್ತಿರುವ ಗೋಪಾಲ್ ಬಿಸ್ಲೆ ಹೇಳುವುದು ಹೀಗೆ, 'ನನ್ನಂತಹ ಅನೇಕ ಬಡ ರೈತರಿಗೆ ಈ ಸೈಕಲ್ ಆಧಾರಿತ ಕೃಷಿ ಉಪಕರಣವಾದ 'ಕೃಷ್ಣರಾಜ' ಪರಿಸರ ಸ್ನೇಹಿಯಾಗಿ, ಕಡಿಮೆ ವೆಚ್ಚದ ಸಲಕರಣೆಯಾಗಿದೆ. ಇದೀಗ ಗೈನ್ (ಎ್ಠಛಡಡ್ಠ್ಟ್ಟಡಿಡ ಐಟಿಟ್ಟಿಢಛಡ್ಝ್ಟಿಟಿ ಆ್ಡ್ಜಟಜಟಿಡಿಛಡ್ಝ್ಟಿಟಿ ಃಜಡಿಢ್ಟ್ಠ್ಞಿ) ಸಂಸ್ಥೆಯು ಗೋಪಾಲ ಬಿಸ್ಲೆಯ ಈ ಉಪಕರಣಕ್ಕೆ ಯಂತ್ರವನ್ನು ಜೋಡಿಸಿ ಇನ್ನೂ ಸುಲಭವಾಗಿ, ಶ್ರಮವಿಲ್ಲದೆ ಉಪಯೋಗಿಸುವ ಸುಧಾರಿತ 'ಕೃಷ್ಣರಾಜ್‌'ದ ತಯಾರಿಕೆಗೆ ಕೈ ಹಾಕಿದೆ. ಅದಕ್ಕೇ ಹೇಳುವುದು ಪ್ರತಿಭೆ ಎನ್ನುವುದು ಕೇವಲ ವಿದ್ಯಾವಂತರ ಮತ್ತು ಬುದ್ಧಿವಂತರ ಸ್ವತ್ತಲ್ಲ ಎಂದು!


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com