ಮುಕೇಶ್ ಇಂದು ಬದುಕಿದ್ದರೆ ಇದೇ ಜುಲೈ 22ಕ್ಕೆ ಅವರಿಗೆ 90 ವರ್ಷಗಳಾಗಿರುತ್ತಿತ್ತು. ಹಿಂದಿ ಚಲನಚಿತ್ರ ಜಗತ್ತಿನಲ್ಲಿ ತಮ್ಮ ಅಪೂರ್ವ ಧ್ವನಿಯಿಂದ ಎಲ್ಲರ ಮನಗೆದ್ದಿದ್ದರು. ಅವರು ಮೂರು ಬಾರಿ ಅತ್ಯುತ್ತಮ ಹಾಡಿಗಾಗಿ ಚಲನಚಿತ್ರ ಪತ್ರಿಕೋದ್ಯಮಿಗಳ ಸಂಘದ ಪ್ರಶಸ್ತಿ ಗಳಿಸಿದ್ದರು. ಚಿನ್ನದ ಧ್ವನಿಯನ್ನು ಹೊಂದಿದ್ದ ಮುಕೇಶ್ ಹಿಂದಿ ಚಿತ್ರರಂಗದ ಜನಪ್ರಿಯ ಗಾಯಕರಾಗಿದ್ದರು. ರಾಜ್ಕಪೂರ್ಗೆ ಅವರ ಧ್ವನಿ ಎಷ್ಟು ಸೂಕ್ತವಾಗಿತ್ತು ಎಂದರೆ ಬಹುತೇಕ ರಾಜ್ಕಪೂರ್ರ ಎಲ್ಲ ಚಿತ್ರಗಳಿಗೆ ಅವರು ಹಿನ್ನಲೆ ಗಾಯಕರಾಗಿದ್ದರು. 1940 ರಿಂದ 1976 ರವರೆಗೆ ಮುಕೇಶ್ ಹಿನ್ನಲೆ ಗಾಯಕರಾಗಿ ಅನೇಕ ಸ್ಮರಣೀಯ ಗೀತೆಗಳನ್ನು ಹಾಡಿದ್ದಾರೆ. ಅವರು ಹಾಡಿದ ನೂರಾರು ಮಧುರ ಹಾಡುಗಳು ಇಂದೂ ಸಹ ಜನಮಾನಸದಲ್ಲಿ ನೆಲೆ ನಿಂತಿವೆಯೆಂದರೆ ಅವರ ಹಾಡಿನ ಪ್ರಾಮುಖ್ಯತೆ ಎಷ್ಟೆಂಬುದು ತಿಳಿದು ಬರುತ್ತದೆ. 'ಮುಕೇಶ್ ಮರಣಿಸಿದಾಗ ನನ್ನ ಧ್ವನಿಯನ್ನು ಕಳೆದುಕೊಂಡೆ' ಎಂದು ರಾಜ್ಕಪೂರ್ ತಮ್ಮ ದುಃಖ ತೋಡಿಕೊಂಡಿದ್ದರು. ಇಂತಹ ಪ್ರತಿಭಾನ್ವಿತ ಹಿನ್ನೆಲೆ ಗಾಯಕನನ್ನು ಸಂಗೀತ ನಿರ್ದೇಶಕ ಒ.ಪಿ.ನಯ್ಯರ್ ತಮ್ಮ ಸಂಗೀತ ನಿರ್ದೇಶನದ ಚಿತ್ರಗಳಲ್ಲಿ ಬಳಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಮುಕೇಶ್ ಮೂಗಿನಿಂದ ಹಾಡುತ್ತಾರೆಂಬುದು ಅವರ ನಂಬಿಕೆಯಾಗಿತ್ತು. 'ಸಂಬಂಧ್' ಚಿತ್ರದ ಗೀತೆಯೊಂದನ್ನು ಮುಕೇಶ್ ಅವರಿಂದಲೇ ಹಾಡಿಸಬೇಕೆಂದು ಆ ಚಿತ್ರದ ನಿರ್ಮಾಪಕ ಸುಭೋದ್ ಮುಖರ್ಜಿಯವರು ನಿರ್ಧರಿಸಿದ್ದರು. ಈ ಬಗ್ಗೆ ಒ.ಪಿ.ನಯ್ಯರ್ ಅವರೊಂದಿಗೆ ಪ್ರಸ್ತಾಪಮಾಡಿದಾಗ ನಯ್ಯರ್ ಅದನ್ನು ಖಡಾಖಂಡಿತವಾಗಿ ತಳ್ಳಿಹಾಕಿದರು. ಯಾವುದೇ ಕಾರಣಕ್ಕೂ ತಮ್ಮ ಸಂಗೀತಕ್ಕೆ ಮುಕೇಶ್ ಅವರ ಧ್ವನಿ ಹೊಂದಿಕೆಯಾಗದೇ ಇರುವುದರಿಂದ ಅವರಿಗೆ ತಮ್ಮ ಚಿತ್ರದಲ್ಲಿ ಹಾಡಲು ಅವಕಾಶ ನೀಡುವುದಿಲ್ಲವೆಂದು ಹಠ ಹಿಡಿದರು. ಆದರೆ ಮುಖರ್ಜಿ ನಯ್ಯರ್ ಅವರ ಮನವೊಲಿಸಿ ಮುಕೇಶ್ಗೆ ಹಾಡಲು ಅವಕಾಶ ಮಾಡಿಕೊಟ್ಟರು. ಇದರಿಂದ ಮುಕೇಶ್ ಮತ್ತು ಮುಖರ್ಜಿಯವರಿಗೆ ತುಂಬಾ ಸಂತೋಷವಾಯಿತು. ಆ ಚಿತ್ರಕ್ಕಾಗಿ ಮುಕೇಶ್ ಹಾಡಿದ, 'ಚಲ್ ಅಕೇಲಾ, ಚಲ್ ಅಕೇಲಾ, ಚಲ್ ಅಕೇಲಾ, ತೇರಾ ಮೇಲಾ ಪೀಛೇ ಛೂಟಾ ರಾಹಿ ಚಲ್ ಅಕೇಲಾ' ಹಾಡು ಅದೆಷ್ಟು ಜನಪ್ರಿಯವಾಯಿತೆಂದರೆ ಆ ಹಾಡನ್ನು ಕೇಳಲು ಮತ್ತು ಹಾಡಿನ ದೃಶ್ಯವನ್ನು ನೋಡಲು ಜನ ಮುಗಿಬೀಳುತ್ತಿದ್ದರು. ಈ ಹಾಡಿನ ಜನಪ್ರಿಯತೆಯಿಂದಾಗಿ ಮುಕೇಶ್ಗೆ ಅನೇಕ ಅವಕಾಶಗಳು ಒದಗಿಬಂದವು. ಹೀಗೆ ನಯ್ಯರ್ರಿಂದ ಮೊದಲು ತಿರಸ್ಕೃತನಾದ ಒಬ್ಬ ಗಾಯಕ ಆ ಒಂದು ಹಾಡಿನಿಂದ ಪ್ರಖ್ಯಾತಿ ಪಡೆಯುವಂತಾಯಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com