ದಲ್ ಬೆಹರ್ ಮತ್ತವನ ಉದಾತ್ತಗುಣ

Updated on: 

ಒರಿಸ್ಸಾದ ಒಡಲಲ್ಲಿ ಹುಟ್ಟಿದ ಹಲವಾರು ಸ್ವಾತಂತ್ರ್ಯ ವೀರರಲ್ಲಿ ದಲ್ ಬೆಹರ್ ಕೂಡ ಒಬ್ಬ. ಜಿತೇಂದ್ರನಾಥ್, ಸುಭಾಶ್ ಚಂದ್ರ ಬೋಸ್, ಶರತ್‌ಚಂದ್ರ ದಾಸ್, ಹರೇಕೃಷ್ಣ ಮಹತಾಬ್‌ರಷ್ಟು ಪ್ರಸಿದ್ಧನಲ್ಲದಿದ್ದರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹಳಷ್ಟು ಹೆಸರು ಗಳಿಸಿದ್ದ. ಅವನು ಒರಿಸ್ಸಾದ ಗ್ರಾಮ ಒಂದರಲ್ಲಿ ಬಲಿಷ್ಠನಾಗಿದ್ದ ಜಾಗೀರುದಾರ. ನೂರಾರು ಎಕರೆಗಳಷ್ಟು ಜಮೀನು ಹೊಂದಿದ್ದು ಸಾಕಷ್ಟು ಪ್ರಭಾವಶಾಲಿಯಾಗಿದ್ದ. ಅವನನ್ನು ಕಂಡರೆ ರೈತರಿಗೆ ಅಪಾರ ಮಮತೆ ಮತ್ತು ಗೌರವ.
ಏಕೆಂದರೆ ಅವನಿಗೆ ಬಡವರನ್ನು ಕಂಡರೆ ತುಂಬಾ ಪ್ರೀತಿ. ಅವರ ಎಲ್ಲ ಕಷ್ಟಸುಖಗಳಲ್ಲಿ ಭಾಗಿಯಾಗಿ ನೆರವುಯಾಚಿಸಿ ಬಂದವರಿಗೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದ. ಬ್ರಿಟಿಷರ ವಿರುದ್ಧ ದನಿಯೆತ್ತಿ, ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಸಂಘಟನೆಗೆ ತೊಡಗಿದ್ದ. ಬ್ರಿಟಿಷ್ ಪಡೆಗಳು ಮತ್ತು ಪೊಲೀಸರ ಮೇಲೆ ಮಿಂಚಿನಂತೆ ದಾಳಿಮಾಡಿ ಕೈಗೆ ಸಿಗದಂತೆ ಕಾಡಿನಲ್ಲಿ ಮರೆಯಾಗುತ್ತಿದ್ದ. ಸರ್ಕಾರ ಅವನ ಆಸ್ತಿಯೆಲ್ಲವನ್ನೂ ಮುಟ್ಟುಗೋಲು ಹಾಕಿಕೊಂಡು ಅವನ ಹುಡುಕಾಟದಲ್ಲಿತ್ತು. ಆದರೂ ಅವನು ಭೂಗತ ಚಟುವಟಿಕೆಯಲ್ಲಿ ತೊಡಗಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಆದ್ದರಿಂದ ದಲ್ ಬೆಹರ್‌ನನ್ನು ಹೇಗಾದರೂ ಮಾಡಿ ಹಿಡಿದು ಶಿಕ್ಷಿಸಬೇಕೆಂದು ಸರ್ಕಾರ ಅವನನ್ನು ಹಿಡಿದು ಕೊಟ್ಟವರಿಗೆ ಒಂದು ಸಾವಿರ ರುಪಾಯಿ ಬಹುಮಾನ ನೀಡುವುದಾಗಿ ಪ್ರಕಟಿಸಿತು.
ಒಮ್ಮೆ ಅವನು ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಒಬ್ಬ ವ್ಯಕ್ತಿ ಎದುರಾದ. ತಾನು ದಲ್ ಬೆಹರ್‌ನನ್ನು ಹುಡುಕಿಕೊಂಡು ಬಂದಿರುವುದಾಗಿಯೂ, ಅವನ ಇರುವಿಕೆಯ ಬಗ್ಗೆ ಸುಳಿವು ತಿಳಿದಿದ್ದರೆ ತಿಳಿಸಬೇಕೆಂತಲೂ ಕೇಳಿಕೊಂಡ. ದಲ್ ಬೆಹರ್‌ನಿಗೆ ಅಚ್ಚರಿಯಾಯಿತು. 'ಅವನೊಡನೆ ನಿನಗೇನು ಕೆಲಸ?' ಎಂದು ಕೇಳಿದ. ಅದಕ್ಕೆ ಆ ಬಡ ವ್ಯಕ್ತಿ ಹೇಳಿದ, 'ಆತ ದಯಾಳುವೆಂದು ನಾನು ಕೇಳಿದ್ದೇನೆ. ನನ್ನ ಮಗಳ ವಿವಾಹಕ್ಕೆ ಅವನ ಸಹಾಯ ಯಾಚಿಸಲಿಕ್ಕಾಗಿ ಬಂದಿದ್ದೇನೆ'. ದಲ್ ಬೆಹರ್ ಅವನ ಪರಿಸ್ಥಿತಿ ತಿಳಿದು ತುಂಬ ದುಃಖವಾಯಿತು. ಆ ಬಡ ವ್ಯಕ್ತಿಗೆ ಸಹಾಯ ಮಾಡಲು ತನ್ನ ಬಳಿ ಏನೂ ಇಲ್ಲವಲ್ಲಾ ಎಂದು ಖೇದವಾಯಿತು.
ಅವನಿಗೆ ಎಷ್ಟು ಹಣದ ಅವಶ್ಯಕತೆಯಿದೆ ಎಂದು ಕೇಳಿದಾಗ ತನಗೆ ಒಂದು ಸಾವಿರ ರುಪಾಯಿಗಳ ಅವಶ್ಯಕತೆಯಿದೆ ಎಂದುತ್ತರಿಸಿದ. ಆಗ ದಲ್ ಬೆಹರ್ ಆ ವ್ಯಕ್ತಿಯನ್ನು ಕರೆದುಕೊಂಡು ಹತ್ತಿರದ ಪೊಲೀಸ್ ಸ್ಟೇಷನ್ನಿಗೆ ಹೋಗಿ ತಾನು ಬ್ರಿಟಿಷರು ಹುಡುಕುತ್ತಿರುವ ದಲ್ ಬೆಹರ್ ಎಂದೂ, ತನ್ನನ್ನು ಬಂಧಿಸಿ, ತನ್ನ ಬಂಧನಕ್ಕೆ ಘೋಷಿಸಿದ ಒಂದು ಸಾವಿರ ರುಪಾಯಿಗಳನ್ನು ಆ ಬಡವನಿಗೆ ನೀಡಬೇಕೆಂದೂ ವಿನಂತಿಸಿದ. ಅವನ ಮಾತು ಕೇಳಿ, ಪೊಲೀಸ್ ಅಧಿಕಾರಿ ಮತ್ತು ಆ ಬಡ ವ್ಯಕ್ತಿ ಸ್ಥಂಭೀಭೂತರಾದರು.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com