ಇಮ್ತಿಯಾಜ್ ಅಹಮದ್ ಮೂವತ್ತರ ದಶಕದಲ್ಲಿ ಪ್ರಖ್ಯಾತ ಸಾರಂಗೀ ವಾದಕರಾಗಿದ್ದರು. ಅವರು ಸುಪ್ರಸಿದ್ಧ ಗಾಯಕ ಉಸ್ತಾದ್ ಅಬ್ದುಲ್ ಕರೀಂ ಖಾನ್ರಿಗೆ ಪಕ್ಕವಾದ್ಯ ನುಡಿಸುತ್ತಿದ್ದರು. ಅಬ್ದುಸ್ ಕರೀಂರ ಪ್ರಿಯವಾದ ಝಿಂಝೋಟಿ ರಾಗದ 'ಪಿಯಾ ಬಿನ ನಹಿ ಆವತ ಚೈನ' ಗೀತೆ ಅತ್ಯಂತ ಪ್ರಸಿದ್ಧವಾಗಿತ್ತು. ಒಮ್ಮೆ ಇಮ್ತಿಯಾಜರು ಮೊರಾದಾಬಾದ್ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವಾಗ ಒಬ್ಬ ಜುಬ್ಬ-ಪೈಜಾಮ ಧರಿಸಿದ ತರುಣ ನಿಲ್ದಾಣದಲ್ಲಿ ತನ್ನಲ್ಲೇ ಹಾಡೊಂದನ್ನು ಗುಣಗುಣಿಸುತ್ತಿದ್ದ. ಇಮ್ತಿಯಾಜ್ ಆ ತರುಣನನ್ನು ಹಿಂದೆ ಅನೇಕ ಬಾರಿ ಅದೇ ನಿಲ್ದಾಣದ ಪ್ಲಾಟ್ಫಾರಂ ನಲ್ಲಿ ನೋಡಿದ್ದರು. ಅವನ ಬಗ್ಗೆ ಒಂದು ರೀತಿಯ ಕುತೂಹಲ ಅವರಿಗೆ ಮೂಡಿತು. ಅವನು ಯಾವ ಹಾಡನ್ನು ಹೇಳುತ್ತಿದ್ದಾನೆಂದು ತಿಳಿಯಲು ಅಲ್ಲೇ ಇದ್ದ ಕಂಬದ ಮರೆಯಲ್ಲಿ ನಿಂತು ಆಲಿಸಿದರು. ಅವನು ಅಂದು ಹಾಡುತ್ತಿದ್ದ ಹಾಡು 'ಪಿಯಾ ಬಿನ ನಹಿ ಆವತ ಚೈನ'. ಅವನು ಅದೆಷ್ಟು ಮಧುರವಾಗಿ ಹಾಡುತ್ತಿದ್ದನೆಂದರೆ ಥೇಟ್ ಖಾನ್ ಸಾಹೇಬರು ಹಾಡುವಂತೆಯೇ ಇತ್ತು. ಅವನ ಬಳಿ ಹೋಗಿ ಅವನ ಬೆನ್ನು ತಟ್ಟಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಇಮ್ತಿಯಾಜ್ ಅವರು ಇನ್ನೊಂದು ಗೀತೆಯನ್ನು ಹಾಡಲು ಮನವಿಮಾಡಿದರು. ಅಷ್ಟೇ ಅಲ್ಲ ತಮ್ಮ ಸಾರಂಗಿಯನ್ನು ಹೊರತೆಗೆದು ನುಡಿಸತೊಡಗಿದರು. ಅವನ ಗಾಯನದ ಸೊಬಗಿಗೆ ಬೆರಗಾದ ಇಮ್ತಿಯಾಜರು ಆತನ ಗುರುಗಳಾರೆಂದು ಕೇಳಿದರು. ತನಗಾರೂ ಸಂಗೀತವನ್ನು ಕಲಿಸಿಲ್ಲವೆಂಬ ಉತ್ತರವನ್ನು ಕೇಳಿ ಅಚ್ಚರಿಪಟ್ಟರು. ಆದರೂ ಅವರಿಗೆ ಕರೀಂಖಾನರೇ ಇವನ ಗುರುಗಳಾಗಿರಬಹುದೆ ಎಂಬ ಅನುಮಾನ. ಹೀಗಾಗಿ ಖಾನ್ ಸಾಹೇಬರನ್ನು ಈ ಬಗ್ಗೆ ಒಮ್ಮೆ ಕೇಳಿಯೇ ಬಿಟ್ಟರು. ಆದರೆ ಅವರೂ ಸಹ ತಾನು ಯಾರಿಗೂ ಸಂಗೀತ ಹೇಳಿಕೊಟ್ಟಿಲ್ಲ ಎಂದುಬಿಟ್ಟರು. ಒಂದು ದಿನ ಆ ತರುಣನನ್ನು ಖಾನ್ ಸಾಹೇಬರಿಗೆ ಭೆಟ್ಟಿ ಮಾಡಿಸಿದಾಗ ಅವನ ಗಾಯನಕ್ಕೆ ಮೆಚ್ಚಿ ಅವನ ಗುರುಗಳಾರೆಂದು ಕೇಳಿದರು. ಅದಕ್ಕೆ ಆ ತರುಣ ತನ್ನ ಗುರು ಉಸ್ತಾದ್ ಅಬ್ದುಲ್ ಕರೀಂ ಖಾನ್ ಎಂದಾಗ ಅವರಿಗೆ ಅಚ್ಚರಿ. 'ನಾನು ನಿನಗೆ ಎಂದೂ ಕಲಿಸಿಲ್ಲವಲ್ಲಾ?' ಎಂದಾಗ ಆ ತರುಣ 'ನಾನು ನಿಮ್ಮ ಅಪ್ರತ್ಯಕ್ಷ ಶಿಷ್ಯನಾಗಿದ್ದು, ನಿಮ್ಮ ಧ್ವನಿಮುದ್ರಿಕೆಗಳ ಮೂಲಕ ಅಭ್ಯಸಿಸಿದ್ದೇನೆ. ನನ್ನನ್ನು ಹರಸಿ' ಎಂದು ನಮಸ್ಕರಿಸಿದ. ಆಗ ಖಾನರಿಗೆ ತುಂಬಾ ಸಂತೋಷವಾಗಿ, ನೀನೊಬ್ಬ ಆಧುನಿಕ ಏಕಲವ್ಯ, ನಿನಗೆ ಒಳ್ಳೆಯ ಭವಿಷ್ಯ ಕಾದಿದೆ ಎಂದು ಹೇಳಿದರು. ಮುಂದೆ ಅದೇ ತರುಣ 1935 ರಲ್ಲಿ ತಯಾರಾದ ದೇವದಾಸ್ ಚಿತ್ರದಲ್ಲಿ ಹಾಡಿ ಪ್ರಸಿದ್ಧಿ ಪಡೆದ. ನಂತರ ತಾನ್ಸೇನ್ ಮುಂತಾದ 36 ಚಿತ್ರಗಳಲ್ಲಿ ನಟಿಸಿ ಆಗಿನ ಕಾಲದ ಖ್ಯಾತ ನಟನೆಂಬ ಹೆಸರು ಪಡೆದ. ಮುಂದೆ ಉತ್ತಮ ಹಿನ್ನಲೆ ಗಾಯಕನೆಂದೂ ಹೆಸರು ಗಳಿಸಿದ. ಆತ ಬೇರಾರೂ ಆಗಿರದೆ ಕುಂದನ್ ಲಾಲ್ ಸೈಗಲ್ ಆಗಿದ್ದ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com