ಮನಸ್ಸಿನೊಳಗೆ ಆರೂಢವಾಗಿರುವ ಪದ್ಧತಿ
ಏಕರೂಪದ ಕ್ರಿಯೆಗಳನ್ನು ಮತ್ತೆ ಮತ್ತೆ ಮಾಡಿದಾಗ ಅದು ರೂಢಿಯಾಗುತ್ತದೆ
ರೂಢಿ ಜಾಸ್ತಿ ರೂಢಿಯಾಗಿಬಿಟ್ಟರೆ ಅದು ಹವ್ಯಾಸ, ಚಟ ಎಂದೆಲ್ಲ ಕರೆಸಿಕೊಳ್ಳುತ್ತದೆ
ದಾಡಿಯನ್ನು ಬಿಡುವಷ್ಟು ಸುಲಭವಾಗಿ ರೂಢಿಯನ್ನು ಬಿಡಲಾಗದು
ಮನೆಯಲ್ಲಿ ಸುಂದರ ಜೋಡಿಯಿದ್ದರೂ ಬೀದಿಯಲ್ಲಿ ಹೋಗುವ ಸುಂದರಿಗೆ ಹಲ್ಲು ಕಿರಿಯುವುದೇ ಕೆಲವರ ರೂಢಿ
ಚಾಳೀಸು ಬರುವವರೆಗೆ ರೂಢಿ. ನಂತರ ಚಾಳಿ
ರೂಢಿ ಗುಣ ಗಾಡಿ ಹತ್ತಿದರೂ ಹೋಗದು
ವಾಡಿಕೆಯಲ್ಲಿ ಬಂದದ್ದು
ಪರಿಪರಿಯಾಗಿ ಕಾಡುವ ಪರಿಪಾಠ
ಬಾಡಿ ಬೇರೆಯಾದಂತೆ ರೂಢಿಯೂ ಬೇರೆ
ಹುಟ್ಟಿದಾಗ ಯಾವ ಹೆಸರಿಟ್ಟರೂ ಆಮೇಲೆ ಕರೆಯುವ ಗಿಡ್ಡ ನಾಮವೇ ರೂಢಿನಾಮ
ಪ್ರಶ್ನಿಸುವುದು ಹೆಂಡತಿಯ ಸಂಪ್ರದಾಯ ನಿರ್ಲಕ್ಷಿಸುವುದು ಗಂಡನ ರೂಢಿ
ಶ್ರಾದ್ಧದ ದಿನ ಪಕ್ಕದ ಮನೆಯಿಂದಲಾದರೂ ಬೆಕ್ಕನ್ನು ತಂದು ಮುಚ್ಚಿಡುವುದು ರೂಢಿಗೊಂದು ಉದಾಹರಣೆ
ರೂಢಿಯನ್ನು ಮುರಿಯುವುದಲ್ಲ. ಮೀರುವುದು ಪ್ರೌಢತನ
ಆಡದೇ ಮಾಡುವವ ರೂಢಿಯೊಳಗುತ್ತಮನು, ಆಡಿಯೂ ಮಾಡಲಾಗದವ ರೂಢಿಯೇ ಇಲ್ಲದವ
ಬಾಡಿ ಪಿತ್ರಾರ್ಜಿತ. ರೂಢಿ ಸ್ವಯಾರ್ಜಿತ
-ವಿಶ್ವನಾಥ ಸುಂಕಸಾಳ
vishwasunkasal@yahoo.com