ಮುಂಬೈನ ಆಂಗ್ಲ ಮಾಧ್ಯಮ ಶಾಲೆಗೆ ಒಬ್ಬ ಮಹಿಳೆ ತನ್ನ ಮಗನನ್ನು ಸೇರಿಸಲು ಬಂದಳು. ಶಾಲೆಯ ಪ್ರಿನ್ಸಿಪಾಲ್ ಒಬ್ಬ ಆಂಗ್ಲ ಮಹಿಳೆ. ಮಗುವನ್ನು ನೋಡಿದ ಕೂಡಲೇ, ಈ ಹುಡುಗನಲ್ಲಿ ಓದುವ ಲಕ್ಷಣ ಕಾಣುತ್ತಿಲ್ಲ, ಆದ್ದರಿಂದ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ವಾಪಸ್ಸು ಕಳುಹಿಸಿದರು. ಆ ಪುಟ್ಟ ಬಾಲಕ ಅಂದೇ ನಿರ್ಧರಿಸಿದ- ತಾನು ಚೆನ್ನಾಗಿ ಓದಿ ಖ್ಯಾತಿಗಳಿಸಬೇಕೆಂದು. ಆ ಬಾಲಕ ಬೇರೆ ಯಾರೂ ಅಲ್ಲ- ಡಾ. ರುಸ್ತುಂ ಜಾಲ್ ವಕೀಲ್. ಜಗತ್ತಿನ ಹೃದ್ರೋಗಿಗಳ ಆಶಾಕಿರಣವಾಗಿ ಅನೇಕ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟ ಸಾಧನೆ ಅವರದ್ದು. ಅವರನ್ನು ಹೃದಯ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ. 1934ರಲ್ಲಿ ಲಂಡನ್ನಿನ ಸೈಂಟ್ ಥಾಮಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಉನ್ನತ ಪದವಿ ಪಡೆದು ಭಾರತಕ್ಕೆ ಬಂದು ವೈದ್ಯಕೀಯ ವೃತ್ತಿಯನ್ನು ಕೈಗೊಂಡರು. ಅಲ್ಲದೆ ಮುಂಬೈನ ಕಿಂಗ್ ಎಡ್ವರ್ಡ್ ಆಸ್ಪತ್ರೆ, ನಾನಾವತಿ ಆಸ್ಪತ್ರೆ ಮತ್ತು ಅನೇಕ ಪ್ರಖ್ಯಾತ ಆಸ್ಪತ್ರೆಗಳಲ್ಲಿಯೂ ಸೇವೆ ಸಲ್ಲಿಸಿದರು. ಅದರ ಜೊತೆಗೆ ಗ್ರ್ಯಾಟ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸಹ ಸೇವೆ ಸಲ್ಲಿಸಿದರು. ಆಗಿನ ಕಾಲದಲ್ಲಿ ಭಾರತದ ವ್ಯೆದ್ಯರ ಬಗ್ಗೆ ಪಾಶ್ಚಾತ್ಯರಲ್ಲಿ ಒಂದು ರೀತಿಯ ತಾತ್ಸಾರ ಭಾವನೆ ಮನೆಮಾಡಿತ್ತು. ವಿಶ್ವಾದ್ಯಂತ ರಕ್ತದ ಏರೊತ್ತಡದಿಂದಾಗಿ ಹೃದ್ರೋಗಕ್ಕೆ ತುತ್ತಾಗಿ ಅಸುನೀಗುವವರ ಸಂಖ್ಯೆ ವಿಶ್ವದಲ್ಲಿ ಹೆಚ್ಚಾಗಿತ್ತು. ಅದಕ್ಕಾಗಿ ಎಲ್ಲೆಡೆ ಸಂಶೋಧನೆಗಳು ನಡೆಯುತ್ತಲೇ ಇದ್ದವು. ಭಾರತದ ಆಯುರ್ವೇದವನ್ನು ಅಮೂಲಾಗ್ರವಾಗಿ ಓದಿ, ಸರ್ಪಗಂಧಿ ಬೇರು ಏರೊತ್ತಡವನ್ನು ಯಶಸ್ವಿಯಾಗಿ ತಡೆಗಟ್ಟಬಲ್ಲುದು ಎಂದು ಸಂಶೋಧನೆ ಮಾಡಿ ಕಂಡು ಹಿಡಿದರು ರುಸ್ತುಂ. ಬೇರಿನಲ್ಲಿನ ಕ್ಷಾರಗಳನ್ನು ವಿಶ್ಲೇಶಿಸಿ, ಅದರಲ್ಲಿಯ ರಿಸರ್ಪನ್, ರೆಸಿನಯಿನ್ ಮತ್ತು ಅಜಮಾಲಿನ್ಗಳನ್ನು ಪ್ರತ್ಯೇಕಿಸಿದರು. ಅದನ್ನು ಹೃದ್ರೋಗಿಗಳ ಮೇಲೆ ಪ್ರಯೋಗ ನಡೆಸಿದಾಗ ಉತ್ತಮ ಫಲಿತಾಂಶ ಹೊರಬಂತು. ಇಂತಹ ಅದ್ಭುತ ಪ್ರಯೋಗ ಮತ್ತದರ ಪರಿಣಾಮವನ್ನು ವಿಶ್ವಕ್ಕೆ ಪರಿಚಯಿಸಲು ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ವಿಚಾರ ಮಂಡಿಸಿದಾಗ ಅಲ್ಲಿ ಭಾಗವಹಿಸಿದ ಎಲ್ಲ ವೈದ್ಯರೂ ಅಂತಹ ಆಸಕ್ತಿ ತೋರಿಸಲಿಲ್ಲ. ಬೇರನ್ನು ತೆಗೆದುಕೊಂಡು ಬಂದು ವಿಷಯ ಮಂಡನೆ ಮಾಡಿದಾಗ ಹಾಸ್ಯ ಮಾಡಿದರು. ಆದರೆ ವಕೀಲ್ ಅದರಿಂದ ಕುಗ್ಗದೆ ತಮ್ಮ ಪ್ರಯೋಗಗಳ ಪರಿಣಾಮಗಳನ್ನು ಬಿಡಿಸಿಟ್ಟಂತೆ ಕುಳಿತವರಲ್ಲಿ ಆಸಕ್ತಿ ಕುಡಿಯೊಡೆದು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದರು. ವಿಶ್ವದ ಲಕ್ಷಾಂತರ ಜನ ಅವರ ಪ್ರಯೋಗದ ಪ್ರಯೋಜನ ಪಡೆದರು. ಇದರಿಂದ ಡಾ.ವಕೀಲರಿಗೆ ಯುಗದ ಸಂಶೋಧಕ ಎಂಬ ಅಭಿದಾನವೂ ದೊರೆಯಿತು. ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳೂ, ಪದ್ಮವಿಭೂಷಣ ಪ್ರಶಸ್ತಿಯೂ ವಕೀಲ್ರಿಗೆ ದೊರೆತು ವೈದ್ಯರತ್ನರಾದರು. ರಕ್ತದ ಏರೊತ್ತಡದಿಂದ ನರಳುತ್ತಿರುವ ರೋಗಿಗಳಿಗೆಲ್ಲಾ ಸುಪರಿಚಿತವಾಗಿರುವ ಸರ್ಪಾಸಿಲ್ ಮತ್ತು ಅಡೇಲ್ಫಿನ್ ಮಾತ್ರೆಗಳು ಡಾ.ರುಸ್ತುಂ ವಕೀಲರ ಕೊಡುಗೆಗಳೇ ಆಗಿವೆ.
(ಆಧಾರ- ಕಸ್ತೂರಿ: ಮಾರ್ಚ್ 1996 ಲೇ.ಡಾ.ಕರವೀರಪ್ರಭು ಕ್ಯಾಲಗೊಂಡ)
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com